ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೊಳಪಟ್ಟ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿನ ತರಗತಿಗಳಿಗೆ ಸರ್ಕಾರ ಶುಲ್ಕ ನಿಗದಿಪಡಿಸಿದೆ.
ಬೋಧನಾ ಶುಲ್ಕ ₹ 940, ಪ್ರಯೋಗಾಲಯ ₹ 260, ವೈದ್ಯಕೀಯ ತಪಾಸಣೆ ₹ 30, ವರ್ಗಾವಣೆ ಪತ್ರ ₹ 40, ವಿದ್ಯಾಭ್ಯಾಸ ಪ್ರಮಾಣಪತ್ರ ₹ 20, ವಾಚನಾಲಯ ₹ 70, ಕ್ರೀಡೆ ₹ 100, ಸರ್ಕಾರಿ ಕಾಲೇಜುಗಳ ಅಭಿವೃದ್ಧಿ ಶುಲ್ಕ ₹ 200 ನಿಗದಿಪಡಿಸಿ ಕಾಲೇಜು ಶಿಕ್ಷಣ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಬೇಕು. ವಿವಿಧ ಇಲಾಖೆಗಳಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ನಲ್ಲಿ ಕಾಲೇಜಿನ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಿಕೊಂಡು, ಉಳಿದ ಹಣವನ್ನು ವಿದ್ಯಾರ್ಥಿಗಳಿಗೆ ಹಿಂದಿರುಗಿಸಬೇಕು ಎಂದು ತಿಳಿಸಲಾಗಿದೆ.
ಚಿತ್ರಕಲಾ ಕಾಲೇಜುಗಳಿಗೆ ಪರೀಕ್ಷಾ ಶುಲ್ಕವನ್ನು ₹ 1000ಕ್ಕೆ ಹೆಚ್ಚಿಸಲು ಮತ್ತು ಪ್ರವೇಶಾತಿ ಶುಲ್ಕವನ್ನು ಈಗಿನ ₹ 200ರ ಬದಲಿಗೆ ₹ 500ಕ್ಕೆ ಹೆಚ್ಚಿಸಲಾಗಿದೆ. ಈ ಶುಲ್ಕವನ್ನು ಆಯಾ ಕಾಲೇಜುಗಳು ನೇರವಾಗಿ ಹಂಪಿ ವಿವಿಗೆ ಪಾವತಿಸಲು ತಿಳಿಸಲಾಗಿದೆ.
ವಿದ್ಯಾರ್ಥಿನಿಯರಿಗೆ ಶುಲ್ಕ ವಿನಾಯಿತಿ
ವಿದ್ಯಾರ್ಥಿನಿಯರಿಗೆ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ವಿವಿಗಳಲ್ಲಿ 2018–19ನೇ ಸಾಲಿನಲ್ಲಿ ಶುಲ್ಕ ವಿನಾಯಿತಿ ನೀಡಲಾಗಿತ್ತು. ಈ ಸಾಲಿನಲ್ಲೂ ಅದೇ ವಿನಾಯಿತಿ ಮುಂದುವರಿಯಲಿದೆ. ಪ್ರವೇಶಾತಿ ಸಮಯದಲ್ಲಿ ಶುಲ್ಕ ಪಡೆದುಕೊಂಡು ಬಳಿಕ ಅದನ್ನು ಅವರಿಗೆ ಹಿಂದಿರುಗಿಸಬೇಕು ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.