ADVERTISEMENT

ಪಿಎಚ್‌.ಡಿ ಮಾಡಿದ್ದೇ ತಪ್ಪು!

ಪಿಎಚ್‌.ಡಿ ಇಲ್ಲದ ಉಪನ್ಯಾಸಕರಿಗೆ ಪದೋನ್ನತಿ ಲಭ್ಯ

ಎಂ.ಜಿ.ಬಾಲಕೃಷ್ಣ
Published 25 ನವೆಂಬರ್ 2019, 4:23 IST
Last Updated 25 ನವೆಂಬರ್ 2019, 4:23 IST
ಕಾಲೇಜು ಶಿಕ್ಷಣ ಇಲಾಖೆ ರೂಪಿಸಿದ ನಿಯಮ
ಕಾಲೇಜು ಶಿಕ್ಷಣ ಇಲಾಖೆ ರೂಪಿಸಿದ ನಿಯಮ   

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆಕಾಲೇಜುಗಳಲ್ಲಿ ಪಿಎಚ್‌.ಡಿ ಮಾಡಿದವರಿಗಿಂತ ಮಾಡದವರಿಗೇ ಮೊದಲು ಪದೋನ್ನತಿ ನೀಡಿ ಸೇವಾ ಹಿರಿತನ ಲಭಿಸುವಂತೆ ಮಾಡಿರುವುದು ಹಲವು ಉಪನ್ಯಾಸಕರ ಬೇಸರಕ್ಕೆ ಕಾರಣವಾಗಿದೆ.

ಪದೋನ್ನತಿ ಪಟ್ಟಿಯಲ್ಲಿ ತಪ್ಪುಗಳು ಉಳಿದುಕೊಂಡಿದ್ದರಿಂದ ನವೆಂಬರ್ 16ರಂದು ತಿದ್ದುಪಡಿ ಮಾಡಿ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಪಿಎಚ್‌.ಡಿ ಮಾಡಿದವರಿಗೆ 12 ವರ್ಷಗಳ ನಂತರ ಎರಡನೇ ಪದೋನ್ನತಿ ನೀಡಿರುವುದು, ಪಿಎಚ್‌.ಡಿ ಮಾಡದವರಿಗೆ 10 ರಿಂದ 11 ವರ್ಷಗಳಲ್ಲೇ ಪದೋನ್ನತಿ ಮಾಡಿರುವುದು ಕಂಡುಬಂದಿದೆ.

‘ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾರ್ಗಸೂಚಿ ಪ್ರಕಾರ ಪಿಎಚ್‌.ಡಿ ಪದವಿ ಪಡೆದ ಸಹಾಯಕ‍ಪ್ರಾಧ್ಯಾಪಕರು ನಾಲ್ಕು ವರ್ಷಸೇವೆ ಪೂರೈಸಿದಂತೆಯೇ ಮೊದಲ ಪದೋನ್ನತಿ ಹಾಗೂ ಐದು ವರ್ಷದ ಸೇವೆಯ ಬಳಿಕ ಎರಡನೇ ಪದೋನ್ನತಿ ದೊರಕಬೇಕು. ಆದರೆ ಯುಜಿಸಿ ನಿಯಮಗಳಲ್ಲಿ ಅಥವಾ ಉನ್ನತ ಶಿಕ್ಷಣ ಇಲಾಖೆ ಆದೇಶಗಳಲ್ಲಿ ಇಲ್ಲದ ಹೊಸದೊಂದು ನಿಯಮವನ್ನು ಕಾಲೇಜು ಶಿಕ್ಷಣ ಇಲಾಖೆ 19–05–2015ರಂದು ಹೊರಡಿಸಿದ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ. ಇದರಿಂದ ಸರ್ಕಾರಿ ಪದವಿ ಕಾಲೇಜುಗಳ ಹಲವು ಸಹಾಯಕ ಪ್ರಾಧ್ಯಾಪಕರ ಪದೋನ್ನತಿ ವಿಳಂಬವಾಗುವಂತಾಗಿದೆ’ ಎಂದು ಅನೇಕ ಉಪನ್ಯಾಸಕರು ದೂರಿದ್ದಾರೆ.

ADVERTISEMENT

ಕಾಲೇಜು ಶಿಕ್ಷಣ ಇಲಾಖೆಯ ಈ ಎಡವಟ್ಟಿನಿಂದಾಗಿ 2006ರಿಂದ 2009ರನಡುವೆ ಪಿಎಚ್‌.ಡಿ ಪದವಿ
ಯೊಂದಿಗೆನೇಮಕಾತಿಗೊಂಡ ಸಹಾಯಕ ಪ್ರಾಧ್ಯಾಪಕರು ಅನ್ಯಾಯಕ್ಕೆ ಒಳಗಾಗಿದ್ದಾರೆ. 2015ರ ನಂತರ ಅವರೆಲ್ಲ ಹಲವು ಪತ್ರ ಬರೆದಿದ್ದು, ಮನವಿಗಳನ್ನೂ ಸಲ್ಲಿಸಿದ್ದಾರೆ. ಆದರೆಅದಕ್ಕೆ ಸ್ಪಂದಿಸದೆ ಅವರ ನ್ಯಾಯೋಚಿತ ಹಕ್ಕನ್ನು ಹತ್ತಿಕ್ಕಿರುವುದು ದಾಖಲೆಗಳಿಂದ ತಿಳಿದುಬಂದಿದೆ. (ರಾಜ್ಯದ ಹಲವು ಕಾಲೇಜುಗಳು ಈ ನಿಟ್ಟಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಗೆ ಬರೆದ ಪತ್ರಗಳು, ಸಲ್ಲಿಸಿದ ಮನವಿಗಳು ‘ಪ್ರಜಾವಾಣಿ’ ಬಳಿ ಇವೆ).

ಈ ಅನ್ಯಾಯವನ್ನು ಸರಿಪಡಿಸಲಾಗುತ್ತದೆ, ಅರ್ಹರಾದ ಎಲ್ಲರಿಗೂ ಪದೋನ್ನತಿ ದೊರಕಿಸಿಕೊಡಲಾಗುತ್ತಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದರೂ, ಸೇವಾ ಹಿರಿತನದ ಸಮಸ್ಯೆ ಬಗೆಹರಿಸುವ ಬಗೆಯನ್ನು ವಿವರಿಸಿಲ್ಲ. ಇಲಾಖೆಯ ಆಯುಕ್ತರು ಚುನಾವಣಾ ಕರ್ತವ್ಯ ನಿಮಿತ್ತ ಜಾರ್ಖಂಡ್‌ಗೆ ತೆರಳಿದ್ದು, ಅವರನ್ನು ಸಂಪರ್ಕಿಸುವುದು ಸಾಧ್ಯವಾಗಲಿಲ್ಲ.

ವಿವಾದ ಸೃಷ್ಟಿಸಿದ ಸುತ್ತೋಲೆ

ಕಾಲೇಜು ಶಿಕ್ಷಣ ಇಲಾಖೆ 2015ರಲ್ಲಿ ಉಪನ್ಯಾಸಕರ ಪದೋನ್ನತಿಗೆ ಇರುವ ಕನಿಷ್ಠ ಅರ್ಹತೆಯ ಬಗ್ಗೆ ನಿಯಮವನ್ನು ರೂಪಿಸುವಾಗ ಯುಜಿಸಿ ನಿಯಮಗಳನ್ನು ಇಂಗ್ಲಿಷ್‌ನಲ್ಲಿ ಹಾಗೆಯೇ ಉಲ್ಲೇಖಿಸಿತ್ತು. ಬಳಿಕ ಆವರಣವೊಂದನ್ನು ಹಾಕಿ ಕನ್ನಡದಲ್ಲಿ ಅದಕ್ಕೊಂದು ನಿಯಮ ನಮೂದಿಸಲಾಗಿದೆ.

‘ಪಿಎಚ್‌ಡಿ/ ಎಂ.ಫಿಲ್‌ ಅನ್ನು ನೇಮಕಾತಿಗೆ ಅಥವಾ ಮುಂಗಡ ವೇತನ ಬಡ್ತಿಗೆ ಪರಿಗಣಿಸದಿದ್ದಲ್ಲಿ ಮಾತ್ರ’ ಎಂಬ ಈ ನಿಯಮವೇ ಕಾನೂನು ಬಾಹಿರ. ಇದರಿಂದ ನೂರಾರು ಮಂದಿಗೆ ಅನ್ಯಾಯ ಮುಂದುವರಿದಿದೆ, ಅದನ್ನು ತೆಗೆದುಹಾಕಬೇಕು ಎಂಬುದು ಉಪನ್ಯಾಸಕರ ಒತ್ತಾಯ.

ಯುಜಿಸಿ ನಿಯಮ ಏನಿದೆಯೋ ಅದನ್ನು ಎಲ್ಲರೂ ಪಾಲಿಸಬೇಕು, ತಪ್ಪಾಗಿದ್ದಲ್ಲಿ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.