ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ (ಟಿಕೆಎಂ) ಮತ್ತು ವಿಸ್ಟ್ರಾನ್ ಕಂಪನಿಗಳ ಆವರಣದಲ್ಲಿ ನಡೆದಿರುವ ವಿದ್ಯಮಾನಗಳಿಂದಾಗಿ ರಾಜ್ಯದಲ್ಲಿ ವಿದೇಶಿ ಹೂಡಿಕೆಯ ಮೇಲೆ ಪರಿಣಾಮ ಆಗಲಿದೆ ಎನ್ನುವ ಕಳವಳವನ್ನು ವಾಣಿಜ್ಯೋದ್ಯಮಿಗಳು ವ್ಯಕ್ತಪಡಿಸಿದ್ದಾರೆ.
ಬಿಡದಿಯಲ್ಲಿರುವ ಟಿಕೆಎಂ ಆವರಣದಲ್ಲಿ ಕೆಲವು ಕಾರ್ಮಿಕರು ಕಂಪನಿಯ ವಿರುದ್ಧ ಮುಷ್ಕರ ನಡೆಸುತ್ತಿದ್ದಾರೆ. ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿಯ ಆವರಣದಲ್ಲಿ ‘ವೇತನದ ಸಮಸ್ಯೆ’ಯಿಂದಾಗಿ ಕೆಲವು ಕಾರ್ಮಿಕರು ಶನಿವಾರ ಗಲಾಟೆ ಮಾಡಿದ್ದಾರೆ. ಈ ಎರಡೂ ಘಟನೆಗಳಿಂದಾಗಿ ಜಾಗತಿಕ ಮಟ್ಟದಲ್ಲಿ ರಾಜ್ಯದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಲಿದೆ ಎಂಬುದು ಉದ್ಯಮಿಗಳ ಆತಂಕ.
‘ಈ ರೀತಿಯ ಘಟನೆಗಳಿಂದಾಗಿ ಜಾಗತಿಕವಾಗಿ ರಾಜ್ಯಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ. ವಿದೇಶಿ ಬಂಡವಾಳ ಹೂಡಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡುತ್ತೇವೆ’ ಎಂದುಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‍ಕೆಸಿಸಿಐ) ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ತಿಳಿಸಿದರು.
‘ಬಂದ್, ಮುಷ್ಕರ ಮಾಡುವುದರಿಂದ ಯಾರಿಗೂ ಪ್ರಯೋಜನ ಇಲ್ಲ. ವಿಸ್ಟ್ರಾನ್ ಕಂಪನಿಯ ಆವರಣದಲ್ಲಿ ದಾಂದಲೆ ನಡೆಸಿರುವುದು ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ. ಸಂಬಳ ನೀಡಿಲ್ಲ ಎನ್ನುವ ಕಾರಣಕ್ಕೆ ದಾಂದಲೆ ನಡೆಸಿದ್ದರೆ, ಅದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಏನೇ ಸಮಸ್ಯೆ ಇದ್ದರೂ ಆಡಳಿತ ವರ್ಗ ಮತ್ತು ಕಾರ್ಮಿಕರು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ’ ಎಂದು ಅವರು ಹೇಳಿದರು.
‘ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿದ್ದ ಸಣ್ಣ ಉದ್ದಿಮೆಗಳು ಈಗಷ್ಟೇ ಚೇತರಿಸಿಕೊಳ್ಳಲು ಆರಂಭಿಸಿವೆ. ಇಂತಹ ಸಂದರ್ಭದಲ್ಲಿ ಇಂತಹ ಘಟನೆಗಳು ಸಣ್ಣ ಉದ್ದಿಮೆಗಳಿಗೆ ಮಾರಕವಾಗಿ ಪರಿಣಮಿಸಲಿವೆ. ಕಚ್ಚಾ ಸಾಮಗ್ರಿಗಳ ವೆಚ್ಚ ಹೆಚ್ಚಾಗುತ್ತಿರುವಾಗ ದೊಡ್ಡ ಕಂಪನಿಗಳು ಕಾರ್ಯ ನಿರ್ವಹಿಸಲು ಸಾಧ್ಯವಾಗದ ಸ್ಥಿತಿಗೆ ಬಂದರೆ ಅವುಗಳನ್ನೇ ಅವಲಂಬಿಸಿರುವ ಸಣ್ಣ ಉದ್ದಿಮೆಗಳು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿವೆ’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಕೆ.ಬಿ. ಅರಸಪ್ಪ ಹೇಳಿದರು.
‘ನರಸಾಪುರದ ಘಟನೆಯು ಆತಂಕ ಮೂಡಿಸಿದೆ. ರಾಜ್ಯದಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.