ADVERTISEMENT

ಕೆರೆಗಳ ವಾಣಿಜ್ಯೀಕರಣ ಭೀತಿ ಅನಗತ್ಯ: ಹೈಕೋರ್ಟ್‌ಗೆ ಅಡ್ವೊಕೇಟ್‌ ಜನರಲ್‌ ಮನದಟ್ಟು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 21:40 IST
Last Updated 19 ನವೆಂಬರ್ 2024, 21:40 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕೆರೆಗಳು ಖಾಸಗಿಯವರ ತೆಕ್ಕೆಗೆ ಜಾರಿದಾಕ್ಷಣ ಅವುಗಳ ಮಾಲೀಕತ್ವ ಮತ್ತು ಪಾಲನೆಯ ಹಿಡಿತ ಕೈತಪ್ಪಿ ಹೋಗಲಿದೆ. ಕೆರೆಗಳು ವಾಣಿಜ್ಯೀಕರಣಗೊಳ್ಳುತ್ತವೆ ಎಂಬೆಲ್ಲಾ ಭೀತಿಯ ಅವಶ್ಯಕತೆ ಇಲ್ಲ. ಕೆಲವರು ಇಂತಹ ಭೀತಿಯನ್ನು ಬಿತ್ತುತ್ತಿದ್ದಾರೆ. ಆದರೆ, ಒಪ್ಪಂದದ ಪ್ರಕಾರ ಕೆರೆಗಳ ವ್ಯಾಪ್ತಿಯಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ಇರುವುದಿಲ್ಲ. ಇದಕ್ಕೆಲ್ಲಾ ನಿಷೇಧ ವಿಧಿಸಲಾಗಿದೆ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೈಕೋರ್ಟ್‌ಗೆ ಮನದಟ್ಟು ಮಾಡಿದೆ.

‘ಬೆಂಗಳೂರಿನ ಕೆರೆಗಳು ಮತ್ತು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ ಅವುಗಳನ್ನು ರಕ್ಷಿಸಲು ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕು’ ಎಂದು ಕೋರಿ 2014ರಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ನಿಬಂಧನೆಗಳನ್ನು ಪರಿಪಾಲಿಸುವಂತಹವರಿಗೆ ಮಾತ್ರವೇ ಕೆರೆಗಳ ಪುನರುಜ್ಜೀವನದ ಜವಾಬ್ದಾರಿಯನ್ನು ನೀಡಲಾಗುತ್ತದೆ. ವಾಸ್ತವದಲ್ಲಿ ಕೆರೆಗಳ ಮಾಲೀಕತ್ವವನ್ನು ಸರ್ಕಾರವೇ ಹೊಂದಿರುತ್ತದೆ. ಇವುಗಳ ಪಾಲನೆಯ ಜವಾಬ್ದಾರಿ ಬಿಬಿಎಂಪಿಗೆ ಒಳಪಟ್ಟಿರುತ್ತದೆ. ಈ ವಿಷಯದಲ್ಲಿ ಸಾರ್ವಜನಿಕರು ಮತ್ತು ಖಾಸಗಿಯವರ ಸಹಭಾಗಿತ್ವದ ಅಗತ್ಯ ಇದ್ದು, ಅದನ್ನು ಯಾವ ರೀತಿ ಅನುಷ್ಠಾನಕ್ಕೆ ತರಬೇಕೆಂಬ ಪ್ರಶ್ನೆ ಮಾತ್ರವೇ ನಮ್ಮ ಮುಂದಿದೆ’ ಎಂದು ವಿವರಿಸಿದರು.

ADVERTISEMENT

ಅರ್ಜಿದಾರ, ‘ಸಿಟಿಜನ್‌ ಆಕ್ಷನ್‌ ಗ್ರೂಪ್‌’ ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ, ‘ಕೆರೆ ಪುನರುಜ್ಜೀವನಗೊಳಿಸಲು ಬಂದವರು ಒತ್ತುವರಿ ಮಾಡಿದರೆ ಯಾರು ನಿಗಾ ಇರಿಸುತ್ತಾರೆ? ಇವುಗಳ ಜವಾಬ್ದಾರಿಯನ್ನು ಖಾಸಗಿಯವರಿಗೆ ನೀಡಿದ್ದೇ ಆದರೆ, ಅಲ್ಲಿ ಖಂಡಿತವಾಗಿಯೂ ವಾಣಿಜ್ಯ ಚಟುವಟಿಕೆ ಗರಿಗೆದರುತ್ತವೆ’ ಎಂದು ಪುನರುಚ್ಚರಿಸಿದರು.

ಅರ್ಜಿದಾರರ ಪರ ಮತ್ತೊಬ್ಬ ವಕೀಲ ಜಿ.ಆರ್‌.ಮೋಹನ್ ಕೂಡಾ ಉದ್ಧರಿಸಿ, ‘ನೀರಿ ವರದಿಯಲ್ಲಿ, ಎಲ್ಲೆಲ್ಲಿ ಕೆರೆ ಒತ್ತುವರಿಯಾಗಿದೆ ಮತ್ತು ಬಫರ್‌ ವಲಯ ಎಲ್ಲಿ ಬರುತ್ತದೆ ಎಂಬುದನ್ನು ವಿವರಿಸಲಾಗಿದೆ’ ಎಂದರು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್‌ 3ಕ್ಕೆ ಮುಂದೂಡಿದೆ.

ಸಹಾಯವಾಣಿ ಸಂಖ್ಯೆ 1533

‘ಕೆರೆಗಳ ಪುನರುಜ್ಜೀವನದ ವೇಳೆ ಖಾಸಗಿ ಸಂಸ್ಥೆಗಳು ಕೆರೆಗಳನ್ನು ಖಾಸಗಿ ಚಟುವಟಿಕೆಗಳಿಗೆ ಬಳಕೆ ಮಾಡಿದರೆ ಈ ಸಂಬಂಧ ದೂರು ದಾಖಲಿಸಲು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ 1533ರ ಸಹಾಯವಾಣಿಯ ಸಂಖ್ಯೆಯನ್ನು ನೀಡಲಾಗಿದೆ. ಒಪ್ಪಂದದ ಪ್ರಕಾರ ಅಥವಾ ನ್ಯಾಯಾಲಯಕ್ಕೆ ನೀಡಿರುವ ಮುಚ್ಚಳಿಕೆಯನ್ನು ಉಲ್ಲಂಘಿಸಿದರೆ ಯಾರು ಬೇಕಾದರೂ ದೂರು ನೀಡಬಹುದು’ ಎಂದು ಅಡ್ವೊಕೇಟ್‌ ಜನರಲ್‌ ಶಶಿಕಿರಣ ಶೆಟ್ಟಿ ನ್ಯಾಯಪೀಠಕ್ಕೆ ತಿಳಿಸಿದರು.

ದಾಖಲೆ ಒದಗಿಸಲು ನಿರ್ದೇಶನ

‘ಕೆರೆಗಳ ಪುನರಜ್ಜೀವನಗೊಳಿಸುವ ಪ್ರಕ್ರಿಯೆಯಲ್ಲಿನ ಒಪ್ಪಂದದ ಪ್ರಕಾರ ಅವುಗಳನ್ನು ಖಾಸಗಿಯವರ ನಿರ್ವಹಣೆಗೆ ಒಪ್ಪಿಸುವಾಗ ವ್ಯಾಪ್ತಿಯ ವಿಚಾರ ನಿಖರವಾಗಿರಬೇಕು’ ಎಂದು ಬಿಬಿಎಂಪಿಗೆ ನಿರ್ದೇಶಿಸಿದ ನ್ಯಾಯಪೀಠ ‘ಕೆರೆಗಳ ಪಟ್ಟಿ ಮತ್ತು ಅವುಗಳ ವಿಸ್ತೀರ್ಣದ ಅಧಿಕೃತ ದಾಖಲೆಗಳನ್ನು ಒದಗಿಸಿ’ ಎಂದು ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.