ADVERTISEMENT

ಕಂಬಳ ಸ್ಪರ್ಧೆ ವಾಣಿಜ್ಯೀಕರಣ: ಪೆಟಾ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 16:15 IST
Last Updated 22 ಅಕ್ಟೋಬರ್ 2024, 16:15 IST
ಪೆಟಾ ಇಂಡಿಯಾ
ಪೆಟಾ ಇಂಡಿಯಾ   

ಬೆಂಗಳೂರು: ‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಾಂಪ್ರದಾಯಿಕ ಸ್ಪರ್ಧೆಯಾದ ಕಂಬಳವನ್ನು ವಾಣಿಜ್ಯೀಕರಣಗೊಳಿಸಲಾಗುತ್ತಿದ್ದು, ಪ್ರಾಣಿಗಳ ಹಿಂಸೆಗೆ ದಾರಿ ಮಾಡಿಕೊಡಲಾಗುತ್ತಿದೆ’ ಎಂದು ಪೆಟಾ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.

‘ನಗರದ ಅರಮನೆ ಮೈದಾನದಲ್ಲಿ ಇದೇ 26ರಂದು ಕಂಬಳ (ಕೋಣಗಳ ಓಟ) ಸ್ಪರ್ಧೆ ನಡೆಸಲು ಬೆಂಗಳೂರು ಕಂಬಳ ಸಮಿತಿಗೆ ಅನುಮತಿ ನೀಡಬಾರದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೋರಿ ಪೆಟಾ (ಪೀಪಲ್‌ ಫಾರ್‌ ಎ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್‌ ಅನಿಮಲ್ಸ್‌) ಕಂಪನಿಯ ಅಧಿಕೃತ ಪ್ರತಿನಿಧಿ ಖುಷ್ಬೂ ಗುಪ್ತ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ, ‘ನಿರ್ದಿಷ್ಟ ಪ್ರದೇಶದ ಹೊರತಾಗಿ ರಾಜ್ಯದ ಇತರ ಭಾಗಗಳಲ್ಲಿ ಕಂಬಳ ಆಯೋಜಿಸುವುದು ಒಪ್ಪುವಂತಹುದಲ್ಲ.  ಸುಪ್ರೀಂಕೋರ್ಟ್ ಮುಂದೆ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರದ ಅನುಸಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಾತ್ರವೇ ಕಂಬಳವನ್ನು ಆಯೋಜಿಸಬೇಕಿದೆ’ ಎಂದರು.

ADVERTISEMENT

‘ಬೇರಾವುದೇ ಜಿಲ್ಲೆಗಳಲ್ಲಿ ಕಂಬಳ ನಡೆಸುವುದರಿಂದ ಕೋಣಗಳಿಗೆ ಹಿಂಸೆ ನೀಡಿದಂತಾಗಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳಕ್ಕೆ ಲಕ್ಷಾಂತರ ಜನ ಆಗಮಿಸುತ್ತಾರೆ. ಇದಕ್ಕಾಗಿ ವಿಐಪಿ ಪಾಸ್‌ಗಳನ್ನು ವಿತರಿಸಲಾಗುತ್ತಿದೆ. ದೊಡ್ಡ ದೊಡ್ಡ ಉದ್ಯಮಿಗಳು ಇದರ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ. ಶಿವಮೊಗ್ಗದಲ್ಲೂ ಈ ಕ್ರೀಡೆ ನಡೆಸುವ ಚಿಂತನೆಯನ್ನು ಕಂಬಳ ಆಯೋಜನಾ ಸಮಿತಿ ಹೊಂದಿದೆ’ ಎಂದು ಆಕ್ಷೇಪಿಸಿದರು.

‘ಸುಮಾರು 300 ಕಿ.ಮೀ ದೂರದಿಂದ ತರಲಾಗುವ ದಣಿದ ಕೋಣಗಳನ್ನು ಸ್ಪರ್ಧೆಗೆ ಇಳಿಸಲಾಗುತ್ತದೆ. ಇದು ಪ್ರಾಣಿ ಹಿಂಸೆಯಾಗುತ್ತದೆ. ಆದ್ದರಿಂದ, ನ್ಯಾಯಾಲಯ ನಿರ್ಧರಿಸುವವರೆಗೆ ಕೋಣಗಳನ್ನು ಬೆಂಗಳೂರಿಗೆ ಟ್ರಕ್‌ನಲ್ಲಿ ತರದಂತೆ ಕಂಬಳ ಆಯೋಜನಾ ಸಮಿತಿಗೆ ಆದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ಸರ್ಕಾರದ ಪರ ಹಾಜರಿದ್ದ ವಕೀಲರು, ‘ಈ ಪ್ರಕರಣದಲ್ಲಿ ಅಡ್ವೊಕೇಟ್‌ ಜನರಲ್‌ ಖುದ್ದು ಹಾಜರಾಗಿ ವಾದ ಮಂಡಿಸಲಿದ್ದಾರೆ. ಸದ್ಯ ಅವರು ದೆಹಲಿಯಲ್ಲಿದ್ದಾರೆ. ಆದ್ದರಿಂದ, ವಿಚಾರಣೆಯನ್ನು ಒಂದು ಅಥವಾ ಎರಡು ದಿನಗಳ ಕಾಲ ಮುಂದೂಡಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ವಿಚಾರಣೆಯನ್ನು ಬುಧವಾರ (ಅ.23) ಮಧ್ಯಾಹ್ನ 2.30ಕ್ಕೆ ಮುಂದುವರಿಸಲಾಗುವುದು’ ಎಂದು ತಿಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.