ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಮಕ್ಕಳ ಆಯ್ಕೆಯಂತೆಯೇ ಮೊಟ್ಟೆ ವಿತರಿಸಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತ ಆರ್.ವಿಶಾಲ್ ಸೂಚಿಸಿದ್ದಾರೆ.
ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿ ಮಕ್ಕಳಲ್ಲಿನ ಅಪೌಷ್ಟಿಕತೆ ಮತ್ತು ರಕ್ತಹೀನತೆ ಹೋಗಲಾಡಿಸಲು ವಾರದಲ್ಲಿ ಎರಡು ದಿನ ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಂಡಿದೆ. ಮಕ್ಕಳ ಆಯ್ಕೆಯಂತೆ ಮೊಟ್ಟೆ, ಶೇಂಗಾಚಿಕ್ಕಿ, ಬಾಳೆ ಹಣ್ಣು ವಿತರಿಸಲಾಗುತ್ತಿದೆ. ಕೆಲ ಶಾಲೆಗಳಲ್ಲಿ ಮಕ್ಕಳು ಮೊಟ್ಟೆಗೆ ಬೇಡಿಕೆ ಇಟ್ಟರೂ, ಕೊಡದೆ ಚಿಕ್ಕಿ, ಬಾಳೆಹಣ್ಣು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಮಕ್ಕಳ ಆಯ್ಕೆಗೆ ವಿರುದ್ಧವಾಗಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಮೇಲ್ವಿಚಾರಣೆ ನಡೆಸಬೇಕು ಎಂದಿದ್ದಾರೆ.
ಮೊಟ್ಟೆಯನ್ನು ಬೇಯಿಸಿ ಮಕ್ಕಳಿಗೆ ನೀಡಬೇಕು. ಪ್ರಸ್ತುತ ಒಂದು ಮೊಟ್ಟೆಗೆ ₹ 6 ನೀಡಲಾಗುತ್ತಿದ್ದು, ದರ ಹೆಚ್ಚಳವಾದರೆ ಹಿಂದಿನ ಉಳಿಕೆ ಹಣ ಅಥವಾ ಎಸ್‌ಡಿಎಎಂಸಿ ಸಮಿತಿಯ ಹಣದಲ್ಲೇ ಭರಿಸಿಕೊಳ್ಳಬೇಕು ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.