ಪಣಜಿ: ಕಳಸಾ– ಬಂಡೂರಿ ಯೋಜನೆ ಮುಂದುವರಿಸಲು ಕರ್ನಾಟಕಕ್ಕೆ ನೀಡಿರುವ ಅನುಮತಿಯನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಆದರೆ, ಗೋವಾ ಸರ್ಕಾರ ಇತ್ತೀಚೆಗೆ ಮಾಡಿರುವ ಮನವಿಯನ್ನು ಪರಿಗಣಿಸಿ, ಯೋಜನೆಯ ಮರು ಪರಿಶೀಲನೆಗಾಗಿ ಸಮಿತಿಯೊಂದನ್ನು ರಚಿಸುವುದಾಗಿ ಕೇಂದ್ರದ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಭರವಸೆ ನೀಡಿದ್ದಾರೆ.
ಯೋಜನೆ ಮುಂದುವರಿಸಲು ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನುಮತಿ ನೀಡಿದ ನಂತರ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಮೇಲೆ, ಅಲ್ಲಿನ ವಿರೋಧಪಕ್ಷಗಳು ಭಾರಿ ಒತ್ತಡ ಹೇರಿದ್ದವು. ‘ಕೇಂದ್ರ, ರಾಜ್ಯ ಹಾಗೂ ಕರ್ನಾಟಕ ಮೂರೂ ಕಡೆ ಬಿಜೆಪಿ ಸರ್ಕಾರ ಇದ್ದರೂ, ಗೋವಾದ ಹಿತ ಕಾಪಾಡಲು ಮುಖ್ಯಮಂತ್ರಿಗೆ ಸಾಧ್ಯವಾಗುತ್ತಿಲ್ಲ’ ಎಂದು ವಿರೋಧಪಕ್ಷಗಳು ಟೀಕಿಸಿದ್ದವು.
ಹೆಚ್ಚುತ್ತಿರುವ ಒತ್ತಡಕ್ಕೆ ಮಣಿದ ಸಾವಂತ್ ಅವರು ನವೆಂಬರ್ 4ರಂದು ಸರ್ವಪಕ್ಷಗಳ ಪ್ರತಿನಿಧಿಗಳ ನಿಯೋಗದಲ್ಲಿ ದೆಹಲಿಗೆ ತೆರಳಿ ಜಾವಡೇಕರ್ ಅವರನ್ನು ಭೇಟಿಮಾಡಿದ್ದರು. ‘ಕಳಸಾ ಬಂಡೂರಿ ಯೋಜನೆಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಬೇಕು. ಒಂದು ಸಮಿತಿಯನ್ನು ರಚಿಸಿ, ಯೋಜನೆಯ ಮರು ಪರಿಶೀಲನೆ ನಡೆಸಬೇಕು’ ಎಂದು ಒತ್ತಾಯಿಸಿದ್ದರು.
ಈ ಬಗ್ಗೆ ಜಾವಡೇಕರ್ ಅವರು ಸೋಮವಾರ ಗೋವಾ ಸರ್ಕಾರಕ್ಕೆ ಪತ್ರ ಬರೆದಿದ್ದು, ‘ಯೋಜನೆಯ ವಿಸ್ತೃತ ಪರಿಶೀಲನೆಗಾಗಿ ಶೀಘ್ರದಲ್ಲೇ ಸಮಿತಿಯೊಂದನ್ನು ರಚಿಸಲಾಗುವುದು’ ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಾವಂತ್, ‘ಸಮಿತಿಯು ನಮ್ಮ ಪರವಾದ ತೀರ್ಮಾನ ತೆಗೆದುಕೊಂಡು, ಗೋವಾದ ಹಿತವನ್ನು ಕಾಪಾಡುತ್ತದೆ ಎಂಬ ವಿಶ್ವಾಸವಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.