ADVERTISEMENT

ಸೊಸೆಗೆ ಅನುಕಂಪದ ಹುದ್ದೆ: ಕುಟುಂಬದ ವ್ಯಾಖ್ಯಾನದಲ್ಲಿ ಸೊಸೆ ಇಲ್ಲ ಎಂದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 16:22 IST
Last Updated 13 ಸೆಪ್ಟೆಂಬರ್ 2024, 16:22 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕುಟುಂಬದ ವ್ಯಾಖ್ಯಾನದಲ್ಲಿ ನಿರ್ದಿಷ್ಟ ಸಂಬಂಧಿಗಳನ್ನು ಮಾತ್ರ ಸೇರ್ಪಡೆ ಮಾಡಲಾಗಿದೆ, ಆದರೆ, ಸೊಸೆಯನ್ನು ಉಲ್ಲೇಖಿಸಿಲ್ಲ. ಹಾಗಾಗಿ, ಸೊಸೆಗೆ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡಿ ಎಂದು ನಿರ್ದೇಶಿಸಲು ಆಗದು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಅನುಕಂಪದ ಆಧಾರದ ಮೇಲೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಲ್ಲಿ ಹುದ್ದೆ ಕೋರಿ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಪ್ರಿಯಾಂಕ ಹುಲಮನಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಧಾರವಾಡ ಪೀಠದಲ್ಲಿನ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್‌ ಎ. ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಕುರಿತು ಆದೇಶಿಸಿದೆ.

ಅರ್ಜಿದಾರರ ವಾದವನ್ನು ತಳ್ಳಿಹಾಕಿರುವ ನ್ಯಾಯಾಲಯ, ‘ಸೊಸೆಗೆ ಅನುಕುಂಪದ ಹುದ್ದೆ ನೀಡುವ ಸಲುವಾಗಿ ಕುಟುಂಬದ ವ್ಯಾಖ್ಯಾನವನ್ನು ವಿಸ್ತರಿಸಿ ಎಂಬ ಮನವಿಯನ್ನು ಒಪ್ಪಲು ಆಗದು’ ಎಂದು ಹೇಳಿದೆ.

ADVERTISEMENT

‘ಕಾನೂನು ನಿರೂಪಕರು ಶಾಸನವನ್ನು ರೂಪಿಸುವಾಗ ಕುಟುಂಬದ ವ್ಯಾಖ್ಯಾನದಲ್ಲಿ ಉದ್ಯೋಗಿಯ ನಿರ್ದಿಷ್ಟ ಸಂಬಂಧಿಗಳನ್ನು ಅದರ ವ್ಯಾಪ್ತಿಗೆ ಸೇರ್ಪಡೆ ಮಾಡಿದ್ದಾರೆ. ಆದರೆ ಅವರಲ್ಲಿ ಸೊಸೆಯ ಉಲ್ಲೇಖವಿಲ್ಲ. ಹಾಗಾಗಿ, ಶಾಸನದ ಅರ್ಥವನ್ನು ವಿಸ್ತರಣೆ ಮಾಡುವುದು ನ್ಯಾಯಾಂಗದ ಕಾರ್ಯವಲ್ಲ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.