ಬೆಂಗಳೂರು: ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ವಾರದೊಳಗೆ ಹೊಸ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಯಿದೆ.
ಅಧ್ಯಕ್ಷೆ ಸ್ಥಾನಕ್ಕೆ ಮಾಜಿ ಶಾಸಕಿ ಸೌಮ್ಯಾರೆಡ್ಡಿ, ಕಮಲಾಕ್ಷಿ ರಾಜಣ್ಣ, ನೆಟಲ್ಡಾ ಡಿಸೋಜಾ, ಕೃಪಾ ಆಳ್ವ ಮತ್ತು ಐಶ್ವರ್ಯಾ ಮಹದೇವ್ ಅವರ ಹೆಸರು ಮುಂಚೂಣಿಯಲ್ಲಿದೆ.
ಐಶ್ವರ್ಯಾ ಮಹದೇವ್ ಅವರನ್ನು ನೇಮಿಸುವ ಕುರಿತಂತೆ ಎರಡು ತಿಂಗಳ ಹಿಂದೆಯೇ ಚರ್ಚೆಯಾಗಿತ್ತು. ಆದರೆ, ಅವರು ಅಧ್ಯಕ್ಷೆ ಸ್ಥಾನ ವಹಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಹೀಗಾಗಿ, ಸೌಮ್ಯಾ ರೆಡ್ಡಿ ಮತ್ತು ಕಮಲಾಕ್ಷಿ ರಾಜಣ್ಣ ಅವರ ಹೆಸರು ಮುಂಚೂಣಿಗೆ ಬಂದಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಹಾಲಿ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರ ಅವಧಿ ಲೋಕಸಭೆ ಚುನಾವಣೆಗೆ ಮೊದಲೇ ಮುಗಿದಿದೆ. ಅಲ್ಲದೆ, ಸದ್ಯ ಅವರು ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನದ ರಾಜ್ಯಮಟ್ಟದ ಸಮಿತಿಯ ಉಪಾಧ್ಯಕ್ಷೆ. ಹೀಗಾಗಿ, ಒಬ್ಬರಿಗೆ ಒಂದೇ ಹುದ್ದೆ ಎಂಬ ನೀತಿಯಡಿ ಅವರು ಈ ಸ್ಥಾನವನ್ನು ತೆರವುಗೊಳಿಸಬೇಕಿದೆ.
ಅಧ್ಯಕ್ಷೆ ಸ್ಥಾನದ ಆಕಾಂಕ್ಷಿಗಳು ತೆರೆಮರೆಯಲ್ಲಿ ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿರುವ ಅಲ್ಕಾ ಲಂಬಾ ಅವರು ಆಕಾಂಕ್ಷಿಗಳನ್ನು ಇತ್ತೀಚೆಗೆ ದೆಹಲಿಗೆ ಕರೆಸಿಕೊಂಡು ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.