ಬೆಂಗಳೂರು:ಪ್ರಾಥಮಿಕ ಶಾಲೆಗಳಲ್ಲಿನ ಪದವೀಧರ ಶಿಕ್ಷಕರ (6ರಿಂದ 8ರವರೆಗಿನ ತರಗತಿ) 15 ಸಾವಿರ ಹುದ್ದೆಗಳಿಗೆ ನೇಮಕಾತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಇದೇ 21ರಂದು ಅಧಿಸೂಚನೆ ಹೊರಡಿಸಲಿದ್ದು, ಸ್ಪರ್ಧಾತ್ಮಕ ಪರೀಕ್ಷೆಯು (ಸಿಇಟಿ) ಮೇ 21 ಮತ್ತು 22ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ‘ಈ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಹುದ್ದೆಗಳು ಮೀಸಲಾಗಿರುತ್ತವೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇದೇ 23ರಿಂದ ಏಪ್ರಿಲ್ 22ರವರೆಗೆ ಅವಕಾಶವಿದೆ’ ಎಂದು ತಿಳಿಸಿದರು.
‘ಆಂಗ್ಲಭಾಷೆ, ಗಣಿತ, ವಿಜ್ಞಾನ ಮತ್ತು ಜೀವ ವಿಜ್ಞಾನ (ಮಕ್ಕಳ ಮತ್ತು ಶಿಕ್ಷಕರ ಅನುಪಾತಕ್ಕೆ ಅನುಗುಣವಾಗಿ ಎರಡನೇ ಹುದ್ದೆ) ಮತ್ತು ಸಮಾಜ ಪಠ್ಯವಿಷಯದ ಶಿಕ್ಷಕರ ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ’ ಎಂದೂ ಅವರು ಹೇಳಿದರು.
‘ರಾಜ್ಯದಲ್ಲಿ 1ರಿಂದ 8ನೇ ತರಗತಿ ವರೆಗಿನ ಶಿಕ್ಷಕರ ಹುದ್ದೆಗಳಲ್ಲಿ 30 ಸಾವಿರ ಹುದ್ದೆಗಳು ಖಾಲಿ ಇವೆ. 6ನೇ ತರಗತಿಯಿಂದ 8ನೇ ತರಗತಿವರೆಗಿನ ಹಂತದಲ್ಲೇ ಸಾಕಷ್ಟು ಶಿಕ್ಷಕರ ಕೊರತೆ ಇದೆ’ ಎಂದು ಸಚಿವರು ಹೇಳಿದರು.
ಪರೀಕ್ಷಾ ವಿಧಾನ ಹೇಗೆ?
* ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೂರು ಪತ್ರಿಕೆಗಳಿವೆ. ಅವುಗಳಲ್ಲಿ ಪತ್ರಿಕೆ-1 (ಬಹು ಆಯ್ಕೆ ಮಾದರಿ) 150 ಅಂಕಗಳಿಗೆ ಮೀಸಲಾಗಿರುತ್ತದೆ. ಇದು ಗರಿಷ್ಠ 150 ಅಂಕಗಳ ಪತ್ರಿಕೆಯಾಗಿರುತ್ತದೆ. ಇದರಲ್ಲಿ ಅಭ್ಯರ್ಥಿಗಳು ಕನಿಷ್ಠ ಅಂಕಗಳನ್ನು ಗಳಿಸಬೇಕೆಂಬ ಮಾನದಂಡವಿಲ್ಲ. ಆದರೆ, ಇದನ್ನು ಮೆರಿಟ್‌ಗೆ ಪರಿಗಣಿಸಲಾಗುವುದು.
* ಪತ್ರಿಕೆ-2ರ ವಿಷಯವು ಸಾಮರ್ಥ್ಯ ಅಥವಾ ಜ್ಞಾನ (ಜನರಲ್ ನಾಲೆಜ್) ಒಳಗೊಂಡಿರುತ್ತದೆ. ಇದರ ಗರಿಷ್ಠ ಅಂಕ 150. ಇದರಲ್ಲಿ 50 ಅಂಕಗಳಿಗೆ ಬಹು ಆಯ್ಕೆ ಮಾದರಿ ಹಾಗೂ 100 ಅಂಕಗಳಿಗೆ ವಿವರಣಾತ್ಮಕ ಮಾದರಿ ಪ್ರಶ್ನೆಗಳಿರುತ್ತವೆ. ಇದರಲ್ಲಿ ಆಯ್ಕೆಗೆ ಅರ್ಹತೆ ಪಡೆಯಲು ಕನಿಷ್ಠ 45 ಅಂಕಗಳನ್ನು ಗಳಿಸುವುದು ಕಡ್ಡಾಯ. ಈ ಅಂಕಗಳನ್ನು ಮೆರಿಟ್‌ಗೆ ಪರಿಗಣಿಸಲಾಗುವುದು.
* ಪತ್ರಿಕೆ-3 ಭಾಷಾ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು, ವಿವರಣಾತ್ಮಕ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಆಯಾ ವಿಷಯದ ಬೋಧನಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಈ ಭಾಷಾ ಸಾಮರ್ಥ್ಯದ ಪರೀಕ್ಷೆ ನಡೆಯಲಿದೆ. ಇದರ ಗರಿಷ್ಠ ಅಂಕ 100. ಆಯ್ಕೆಗೆ ಅರ್ಹತೆ ಪಡೆಯಲು ಕನಿಷ್ಠ ಶೇ 50 ಅಂಕಗಳನ್ನು ಗಳಿಸುವುದು ಕಡ್ಡಾಯ. ಇವುಗಳನ್ನು ಮೆರಿಟ್ಗೆ ಪರಿಗಣಿಸಲಾಗುವುದು (ಇದು ಆಂಗ್ಲ ಭಾಷಾ ಹುದ್ದೆಯ ಅಭ್ಯರ್ಥಿಗಳನ್ನು ಬಿಟ್ಟು).
2 ವರ್ಷಗಳ ವಯೋಮಿತಿ ಸಡಿಲಿಕೆ
‘ಕೋವಿಡ್‌ನ ಎರಡು ಅಲೆಗಳ ಕಾರಣದಿಂದ ನೇಮಕಾತಿ ಪ್ರಕ್ರಿಯೆ ನಡೆಸಲಾಗಿರಲಿಲ್ಲ. ಹೀಗಾಗಿ ಒಂದು ಅವಧಿಗೆ ಮಾತ್ರ ಅನ್ವಯವಾಗುವಂತೆ ಅಭ್ಯರ್ಥಿಗಳಿಗೆ ಎರಡು ವರ್ಷಗಳ ವಯೋಮಿತಿ ಸಡಿಲಗೊಳಿಸಲಾಗಿದೆ’ ಎಂದು ಸಚಿವ ನಾಗೇಶ್ ಹೇಳಿದರು.
‘ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಅಂಗವಿಕಲರಿಗೆ 47 ವರ್ಷಗಳವರೆಗೆ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿಯರಿಗೆ 43 ವರ್ಷ ಗರಿಷ್ಠ ಇದ್ದುದನ್ನು 45ಕ್ಕೆ ಏರಿಸಲಾಗಿದೆ. ಅಂತೆಯೇ ಸಾಮಾನ್ಯ ವರ್ಗದವರ ಗರಿಷ್ಠ ವಯೋಮಿತಿ 40 ಇದ್ದುದನ್ನು 42ಕ್ಕೆ ಏರಿಸಲಾಗಿದೆ. ಇದು ಈ ಬಾರಿಗೆ ಮಾತ್ರವೇ ಅನ್ವಯವಾಗುತ್ತದೆ’ ಎಂದು ಅವರು ವಿವರಿಸಿದರು.
‘ಗಣಿತ ವಿಷಯದಲ್ಲಿ ಶಿಕ್ಷಕರ ಸಾಕಷ್ಟು ಕೊರತೆಯಿರುವ ಕಾರಣ ಆನ್ವಯಿಕ ಗಣಿತ ಬೋಧಕ ವರ್ಗಕ್ಕೆ ಈ ಬಾರಿ ಎಂಜಿನಿಯರಿಂಗ್ ಪದವಿ ಪೂರೈಸಿ ಬಿ.ಇಡಿ ಅಥವಾ ಟಿಇಟಿ ಪೂರೈಸಿದವರನ್ನೂ ಪರಿಗಣಿಸಲಾಗುತ್ತಿದೆ’ ಎಂದರು.
‘15 ಸಾವಿರ ಶಿಕ್ಷಕರ ನೇಮಕದಲ್ಲಿ ಮಂಗಳಮುಖಿಯರಿಗೆ ಶೇ 1ರಷ್ಟು ಹುದ್ದೆಗಳನ್ನು ಮೀಸಲು ಇರಿಸಲಾಗಿರುತ್ತದೆ’ ಎಂದೂ ಅವರು ಹೇಳಿದರು.
*
ಶಿಕ್ಷಣ ಇಲಾಖೆ ವತಿಯಿಂದಲೇ ಸಂಪೂರ್ಣ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆದಷ್ಟು ಶೀಘ್ರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ, ಶಿಕ್ಷಕರ ನೇಮಕಾತಿ ಮಾಡಲಾಗುವುದು
ಬಿ.ಸಿ. ನಾಗೇಶ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.