ADVERTISEMENT

ಕೆಪಿಎಸ್‌ಸಿ | ಲೆಕ್ಕಪರಿಶೋಧನಾ ಇಲಾಖೆ ಹುದ್ದೆ: ಬಾರದ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
ಕೆಪಿಎಸ್‌ಸಿ
ಕೆಪಿಎಸ್‌ಸಿ    

ಬೆಂಗಳೂರು: ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದ ಸಹಾಯಕ ನಿಯಂತ್ರಕರು (ಗ್ರೂಪ್ ‘ಎ’) 43 ಮತ್ತು ಲೆಕ್ಕ ಪರಿಶೋಧನಾಧಿಕಾರಿ (ಗ್ರೂಪ್ ‘ಬಿ’) 54 ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆದು ಎರಡು ತಿಂಗಳುಗಳಾಗುತ್ತಾ ಬಂದರೂ ಕೆಪಿಎಸ್‌ಸಿ ಫಲಿತಾಂಶ ಪ್ರಕಟಿಸಿಲ್ಲ.

ಕಳೆದ 10 ತಿಂಗಳ ಅವಧಿಯಲ್ಲಿ ವಾಣಿಜ್ಯ ತೆರಿಗೆ ಪರೀಕ್ಷಕರ (ಸಿಟಿಐ) ಹುದ್ದೆಗೆ ನಡೆಸಿದ ಪರೀಕ್ಷೆಯ ಫಲಿತಾಂಶ ಬಿಟ್ಟರೆ, ಯಾವುದೇ ಪರೀಕ್ಷೆಯನ್ನು ಕೆಪಿಎಸ್‌ಸಿ ನಡೆಸಿಲ್ಲ. ಈಗಾಗಲೇ ನಡೆಸಿರುವ ಪರೀಕ್ಷೆಗಳ ಫಲಿತಾಂಶವನ್ನೂ ಪ್ರಕಟಿಸಿಲ್ಲ. ಕೆಪಿಎಸ್‌ಸಿಯ ಈ ವಿಳಂಬ ನೀತಿಗೆ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಮಾರ್ಚ್‌ 1ರಂದು ಅಧಿಸೂಚನೆ ಹೊರಡಿಸಿತ್ತು. ಆಗಸ್ಟ್‌ 11ರಂದು ಪೂರ್ವಭಾವಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಬರೆದ ಅಭ್ಯರ್ಥಿಗಳು, ಖಾಲಿ ಹುದ್ದೆಗಳಿಗೆ ಅನುಗುಣವಾಗಿ 1:20 ಅನುಪಾತದಲ್ಲಿ ಮುಖ್ಯ ಪರೀಕ್ಷೆಗೆ ಅರ್ಹರಾಗುತ್ತಾರೆ. ಡಿ. 17ರಿಂದ 20ರವರೆಗೆ ಮುಖ್ಯಪರೀಕ್ಷೆ ನಡೆಯಲಿದೆ ಎಂದು ಕೆಪಿಎಸ್‌ಸಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಈ ಹುದ್ದೆಗಳಿಗೆ ಸಂದರ್ಶನ (ವ್ಯಕ್ತಿತ್ವ ಪರೀಕ್ಷೆ) ಇಲ್ಲ.

ADVERTISEMENT

ಇದೇ ಇಲಾಖೆಯಲ್ಲಿನ ಹೈದ್ರಾಬಾದ್- ಕರ್ನಾಟಕ ವೃಂದದ ಸಹಾಯಕ ನಿಯಂತ್ರಕರು (ಗ್ರೂಪ್ ‘ಎ’) 15 ಹುದ್ದೆಗಳಿಗೆ ಜುಲೈ 28ರಂದು ಪೂರ್ವಭಾವಿ ಪರೀಕ್ಷೆ ನಡೆಸಿದ್ದ ಕೆಪಿಎಸ್‌ಸಿ, ಮುಖ್ಯ ಪರೀಕ್ಷೆಗೆ 1:20ರ ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಸೆ. 20 ರಂದು ಪ್ರಕಟಿಸಿದೆ. ಈ ಅಭ್ಯರ್ಥಿಗಳಿಗೆ ಡಿ. 10ರಿಂದ 13ರವರೆಗೆ ಮುಖ್ಯ ಪರೀಕ್ಷೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.