ADVERTISEMENT

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರ ಅಧಿಕಾರ ದುರುಪಯೋಗ; ದೂರು

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 18:11 IST
Last Updated 9 ಜೂನ್ 2021, 18:11 IST
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ -ಸಾಂದರ್ಭಿಕ ಚಿತ್ರ
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ -ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಬ್ರಾಹ್ಮಣ ಸಮುದಾಯದ ಬಗ್ಗೆ ನಟ ಚೇತನ್, ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ’ ಎಂದು ದೂರು ನೀಡಿದ್ದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಎಸ್. ಸಚ್ಚಿದಾನಂದ ಮೂರ್ತಿ ಅವರ ವಿರುದ್ಧವೇ ಇದೀಗ ಕಾವ್ಯಾ ಅಚ್ಯುತ್ ಎಂಬುವರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ದೂರು ನೀಡಿದ್ದಾರೆ.

ಕಮಿಷನರ್‌ ಅವರಿಗೆ ಇ–ಮೇಲ್ ಮೂಲಕ ದೂರು ಕಳುಹಿಸಿರುವ ವಿಜಯನಗರದ ಕಾವ್ಯ ಅಚ್ಯುತ್, ‘ಸರ್ಕಾರಿ ಸಂಸ್ಥೆಯ ಹೆಸರು ಹಾಗೂ ಮುದ್ರೆಯನ್ನು ಸಚ್ಚಿದಾನಂದಮೂರ್ತಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದ್ದಾರೆ.

‘ನಟ ಚೇತನ್ ಅವರ ವಿರುದ್ದ ಬ್ರಾಹ್ಮಣರನ್ನು ಎತ್ತಿಕಟ್ಟಿ ಅಶಾಂತಿ ಸೃಷ್ಟಿಸಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಹೆಚ್ ಎಸ್ ಸಚ್ಚಿದಾನಂದ ಮೂರ್ತಿ ಎಂಬವರು ಯತ್ನ ನಡೆಸುತ್ತಿದ್ದಾರೆ. ಇದಕ್ಕಾಗಿ ಸರ್ಕಾರಿ ಸಂಸ್ಥೆಯ ಹೆಸರು ಮತ್ತು ಸರ್ಕಾರಿ ಮುದ್ರೆ/ಲಾಂಛನವನ್ನು ದುರುಪಯೋಗಪಡಿಸಿಕೊಂಡು ಕ್ರಿಮಿನಲ್ ಅಪರಾಧ ಮಾಡಿದ್ದಾರೆ’ ಎಂದೂ ಕಾವ್ಯಾ ದೂರಿದ್ದಾರೆ.

ADVERTISEMENT

'ಬ್ರಾಹ್ಮಣ ಅಭಿವೃದ್ದಿ ಮಂಡಳಿಯು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರ ಅಭಿವೃದ್ದಿಗಾಗಿ ಮೀಸಲಾಗಿರುವ ಸರ್ಕಾರಿ ಸಂಸ್ಥೆಯಾಗಿದೆ. ಬಡ, ಹಿಂದುಳಿದ ಬ್ರಾಹ್ಮಣರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸುವುದು ಮತ್ತು ಜಾರಿ ಮಾಡುವುದಷ್ಟೇ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಕೆಲಸವಾಗಿರುತ್ತದೆ. ಬಡ, ಹಿಂದುಳಿದ ಬ್ರಾಹ್ಮಣರ ಅಭಿವೃದ್ದಿಯ ನಿಟ್ಟಿನಲ್ಲಿ ಕೆಲಸ ಮಾಡದ ಮಂಡಳಿ ಅಧ್ಯಕ್ಷರು, ಸರ್ಕಾರಿ ದಾಖಲೆ, ಮುದ್ರೆ, ಲಾಂಛನ ಮತ್ತು ಕರ್ನಾಟಕ ಸರ್ಕಾರ ಎಂಬ ಹೆಸರನ್ನು ದುರುಪಯೋಗಪಡಿಸಿಕೊಂಡು ನಟ ಚೇತನ್ ವಿರುದ್ದ ದೂರು ನೀಡಿದ್ದಾರೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.