ಬೆಂಗಳೂರು: ದ್ವೇಷ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಾಗರಿಕ ಸಂಘಟನೆಗಳ ಮುಖಂಡರು ಮಂಗಳವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ ಅವರಿಗೆ ದೂರು ಸಲ್ಲಿಸಿದರು.
ಪ್ರಧಾನಿಯವರು ಏ.21ರ ತಮ್ಮ ಭಾಷಣದಲ್ಲಿ ಸುಳ್ಳು ಹಾಗೂ ದ್ವೇಷದ ಮಾತುಗಳನ್ನು ಹೇಳಿದ್ದಾರೆ. ಸಮಾಜದ ಕೋಮು ಸೌಹಾರ್ದಕ್ಕೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಹಿಂದೂ ಸಮುದಾಯದ ಮತಗಳಿಗಾಗಿ ಮತ್ತೊಂದು ಸಮುದಾಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಮುಸ್ಲಿಂ ಸಮುದಾಯದ ಬಗ್ಗೆ ಹಲವು ಅಪಾಯಕಾರಿ ಚಿಂತನೆಗಳನ್ನು ಹಬ್ಬಿಸಿದ್ದಾರೆ ಎಂದು ದೂರಿದರು.
ಭಾರತೀಯ ಚುನಾವಣಾ ಆಯೋಗವು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ಮೋದಿ ಅವರನ್ನು ಅನರ್ಹಗೊಳಿಸಬೇಕು. ಅವರ ಚುನಾವಣಾ ರ್‍ಯಾಲಿಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್, ಬಹುತ್ವ ಕರ್ನಾಟಕ, ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್, ದ್ವೇಷ ಭಾಷಣದ ವಿರುದ್ಧ ಜನಾಂದೋಲನ, ಪೀಪಲ್ಸ್ ಸೇರಿದಂತೆ 15 ಸಂಘಟನೆಗಳ ಮುಖಂಡರು ದೂರು ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.