ಬೆಂಗಳೂರು: ಕನ್ನಡಿಗರಿಂದ ತನ್ನ ಮೇಲೆ ದೌರ್ಜನ್ಯ ನಡೆಯುತ್ತಿರುವುದಾಗಿ ಆರೋಪಿಸಿ, ಅವಾಚ್ಯ ಶಬ್ಧಗಳನ್ನು ಬಳಸಿ ವಿಡಿಯೊ ಮಾಡಿದ್ದ ಬಿಹಾರ ಮೂಲದ ಯುವಕನ ವಿರುದ್ಧ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಬೆಂಗಳೂರಿನ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಮೆಟ್ರೊ ಸ್ಟೇಷನ್ ಬಳಿಯ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ ಯುವಕ ನಿತೀಶ್ ಕುಮಾರ್ ಎಂಬಾತ, ಸ್ಥಳೀಯರಿಂದ ತನ್ನ ಮೇಲೆ ಭಾಷಾ, ಜನಾಂಗೀಯ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಏ. 7ರಂದು ಆಕ್ರೋಶ ಭರಿತವಾಗಿ ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ. ಬಿಹಾರಿಗಳನ್ನು ಮುಟ್ಟುವವರು ಮುಂದೆ ಬನ್ನಿ ಎಂದು ಆತ ಸವಾಲು ಹಾಕಿರುವುದು, ಅವಾಚ್ಯ ಶಬ್ಧಗಳನ್ನು ಬಳಸಿ ಟೀಕೆ ಮಾಡಿರುವುದು ವಿಡಿಯೊದಲ್ಲಿದೆ.
ಅವಾಚ್ಯ ಶಬ್ಬ ಬಳಸಿ ವಿಡಿಯೊ ಮಾಡುವ ಮೂಲಕ ನಿತೀಶ್ ಶಾಂತಿ, ಸಾಮರಸ್ಯಕ್ಕೆ ಭಂಗ ತಂದಿದ್ದಾನೆ ಎಂದು ಆರೋಪಿಸಿ ರೂಪೇಶ್ ರಾಜಣ್ಣ ಅವರು ಪೊಲೀಸರಿಗೆ ದೂರು ನೀಡಿದ್ದು, ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಪ್ರಸಿದ್ಧಿ ಪಡೆಯಲು, ಯೂಟ್ಯೂಬ್‌ನಲ್ಲಿ ಹಣ ಗಳಿಸುವ ಉದ್ದೇಶದಿಂದ ನಿತೀಶ್ ಈ ವಿಡಿಯೊ ಮಾಡಿದ್ದಾನೆ ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಕನ್ನಡಿಗರ ತಂಟೆಗೆ ಬಂದ್ರೆ ಬಿಡೋಲ್ಲ
ದೂರಿನ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರೂಪೇಶ್ ರಾಜಣ್ಣ, ‘ತಮಿಳುನಾಡು ಆಯಿತು ಈಗ ಕರ್ನಾಟಕ. ಕನ್ನಡಿಗರ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ. ಇಲ್ಲೇ ಕೆಲಸ ಮಾಡುತ್ತಿರುವ ಬಿಹಾರ ಮೂಲದ ಯುಟ್ಯೂಬರ್ ತಾನು ಖ್ಯಾತಿ ಪಡೆಯಲು ಕನ್ನಡಿಗರ ನಿಂದನೆ. ಕನ್ನಡಿಗರ ತಂಟೆಗೆ ಬಂದ್ರೆ ಬಿಡೋಲ್ಲ. ತನ್ನ ಪ್ರಸಿದ್ದಿಗಾಗಿ ಕನ್ನಡಿಗರ ವಿರುದ್ಧ ಅಪಪ್ರಚಾರ ಮಾಡಿದ ಬಿಹಾರಿಗನ ವಿರುದ್ಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆತನನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರು ಒಪ್ಪಿದ್ದು. ಕನ್ನಡದ ಅನ್ನ ತಿಂದು ಕನ್ನಡಿಗರ ಬಗ್ಗೆ ಕೀಳಾಗಿ ಮಾತಾಡೋ ನೀಚರಿಗೆ ಇದು ಪಾಠವಾಗಲಿ’ ಎಂದು ಬರೆದುಕೊಂಡಿದ್ದಾರೆ.
ವಿಡಿಯೊ ವೈರಲ್– ಪರ ವಿರೋಧದ ಚರ್ಚೆ
ಬಿಹಾರಿ ಯುವಕ ನಿತೀಶ್ ಮಾಡಿರುವ ವಿಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆತನ ಫೇಸ್‌ಬುಕ್ ಖಾತೆಯಿಂದ ಶೇರ್ ಆದ ವಿಡಿಯೊವನ್ನು 35 ಲಕ್ಷಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದೇ ವಿಡಿಯೊವನ್ನು ಹಲವರು ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್‌ಗಳಲ್ಲೂ ಹಂಚಿಕೊಂಡಿದ್ದಾರೆ.
ಬೆಂಗಳೂರು ಪೊಲೀಸರಿಂದ ಕ್ರಮದ ಭರವಸೆ
ನಿತೀಶ್ ವಿಡಿಯೊ ‘BALA (@erbmjha)‘ ಎಂಬ ಹೆಸರಿನ ಟ್ವೀಟರ್ ಖಾತೆಯ ಮೂಲಕ ಶೇರ್ ಆಗಿತ್ತು. ಅದರಲ್ಲಿ ಸ್ಥಳೀಯರ ನಡೆಗೆ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಉತ್ತರಿಸಿರುವ ಬೆಂಗಳೂರು ನಗರ ಪೊಲಿಸರು 'ಭಾಷೆ, ಧರ್ಮ ಅಥವಾ ಲಿಂಗದ ಆಧಾರದ ತಾರತಮ್ಯವನ್ನು ಸಹಿಸುವುದಿಲ್ಲ. ಘಟನೆ ನಮ್ಮ ಗಮನಕ್ಕೆ ಬಂದಿದೆ. ದೂರುದಾರರನ್ನು ಸಂಪರ್ಕಿಸಲಾಗಿದೆ ಮತ್ತು ವಿಚಾರಣೆ ಪ್ರಾರಂಭವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.