ADVERTISEMENT

ಅರಿವು ವಿಸ್ತರಿಸುವ ಗ್ರಂಥಗಳ ಅಧ್ಯಯನ

ಭೌತ ವಿಜ್ಞಾನ ಲೇಖಕ ಪಾಲ್‌ ಜಿ. ಹ್ಯೂಯಿಟ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 21:26 IST
Last Updated 10 ಸೆಪ್ಟೆಂಬರ್ 2024, 21:26 IST
ಪಿಯರ್ಸನ್‌ ಇಂಡಿಯಾ ಪ್ರಕಟಿಸಿದ ಪಾಲ್‌ ಜಿ ಹ್ಯೂಯಿಟ್‌ ಅವರ ‘ಪರಿಕಲ್ಪನಾ ಭೌತಶಾಸ್ತ್ರ’ ಕೃತಿಯ 13ನೇ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಮಾತನಾಡಿದರು: ಪ್ರಜಾವಾಣಿ ಚಿತ್ರ
ಪಿಯರ್ಸನ್‌ ಇಂಡಿಯಾ ಪ್ರಕಟಿಸಿದ ಪಾಲ್‌ ಜಿ ಹ್ಯೂಯಿಟ್‌ ಅವರ ‘ಪರಿಕಲ್ಪನಾ ಭೌತಶಾಸ್ತ್ರ’ ಕೃತಿಯ 13ನೇ ಆವೃತ್ತಿ ಬಿಡುಗಡೆ ಕಾರ್ಯಕ್ರಮದಲ್ಲಿ ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಮಾತನಾಡಿದರು: ಪ್ರಜಾವಾಣಿ ಚಿತ್ರ   

ಬೆಂಗಳೂರು: ಉತ್ತಮ ಗ್ರಂಥಗಳನ್ನು ನಿರಂತರವಾಗಿ ಅಧ್ಯಯನ ನಡೆಸುವ ಶಿಕ್ಷಕರು ವಿದ್ಯಾರ್ಥಿಗಳ ಅರಿವಿನ ವಿಸ್ತಾರವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಭವಿಷ್ಯದ ಸಮಾಜಕ್ಕೆ ಕೊಡುಗೆ ನೀಡುತ್ತಾರೆ ಎಂದು ಭೌತ ವಿಜ್ಞಾನ ಲೇಖಕ ಪಾಲ್‌ ಜಿ. ಹ್ಯೂಯಿಟ್‌ ಹೇಳಿದರು.

ಇನ್ಫೊಸಿಸ್‌ ಸೈನ್ಸ್‌ ಫೌಂಡೇಷನ್‌, ಪಿಯರ್‌ಸನ್‌ ಇಂಡಿಯಾ ಸೋಮವಾರ 'ಭೌತವಿಜ್ಞಾನ ಕಲಿಕೆಯ ಅನುಭವವನ್ನು ಉತ್ಕೃಷ್ಟಗೊಳಿಸುವ’ ಕುರಿತು ಹಮ್ಮಿಕೊಂಡಿದ್ದ ಚರ್ಚೆಯಲ್ಲಿ ವರ್ಚುಯಲ್‌ ಮೂಲಕ ಭಾಗವಹಿಸಿ ಅವರು ಮಾತನಾಡಿದರು. 

ಪಿಯರ್ಸನ್‌ ಇಂಡಿಯಾ ಪ್ರಕಟಿಸಿದ ಹ್ಯೂಯಿಟ್‌ ಅವರ ‘ಪರಿಕಲ್ಪನಾ ಭೌತಶಾಸ್ತ್ರ’ ಕೃತಿಯ 13ನೇ ಆವೃತ್ತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ, ‘ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ ಎಂಜಿನಿಯರಿಂಗ್‌ ಮತ್ತು ಗಣಿತ (ಎಸ್‌ಟಿಇಎಂ) ಶಿಕ್ಷಣಕ್ಕೆ ಆದ್ಯತೆ ಹೆಚ್ಚುತ್ತಿದ್ದು, ಹೊಸ ಎತ್ತರ ತಲುಪುತ್ತಿದೆ. ವಿಕಸಿತ ಭಾರತದ ದೂರ ದೃಷ್ಟಿಗೆ ಪೂರಕವಾಗಿ ಯುವ ಪೀಳಿಗೆ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

ADVERTISEMENT

‘ನಿತ್ಯದ ಬದುಕಿಗೆ ಅಗತ್ಯವಾದ ಸೌಕರ್ಯಗಳನ್ನು ಒದಗಿಸುವಲ್ಲಿ ಭೌತವಿಜ್ಞಾನ ಪ್ರಯೋಜನಕಾರಿಯಾಗಿದೆ. ಭೌತಶಾಸ್ತ್ರದ ತತ್ವಗಳನ್ನು ಕರಗತಮಾಡಿಕೊಂಡು ವಿಷಯದ ಮೇಲೆ ಪ್ರಭುತ್ವ ಸಾಧಿಸಲು ಹ್ಯೂಯಿಟ್‌ ಅವರ ಪರಿಕಲ್ಪನಾ ಭೌತಶಾಸ್ತ್ರ ಆವೃತ್ತಿಗಳು ಸಹಕಾರಿಯಾಗಿವೆ. ವಿದ್ಯಾರ್ಥಿ ಕೇಂದ್ರಿತವಾದ ಇಂತಹ ಪುಸ್ತಕಗಳು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲಿವೆ ಎಂದು’ ಆಶಿಸಿದರು.

ಪಿಯರ್‌ಸನ್‌ ಇಂಡಿಯಾ ಮುಖ್ಯಸ್ಥ ವಿನಯ್ ಸ್ವಾಮಿ ಉಪಸ್ಥಿತರಿದ್ದರು. 

‘ಕೋಚಿಂಗ್‌ ಕೇಂದ್ರಗಳ ಭ್ರಮೆ ಕಳಚಬೇಕು’

‘ಕೋಚಿಂಗ್‌ ಕೇಂದ್ರಗಳಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳೇ ಸಾಧನೆ ಮಾಡುತ್ತಾರೆ ಎಂಬ ವಾದವನ್ನು ಎಂದಿಗೂ ಒಪ್ಪುವುದಿಲ್ಲ. ನುರಿತ ತಜ್ಞರ ಮಾರ್ಗದರ್ಶನ ಪಡೆಯುವ ಯಾವುದೇ ವಿದ್ಯಾರ್ಥಿ ಮನೆಯಲ್ಲೇ ಕುಳಿತು ಯಶಸ್ಸು ಗಳಿಸಬಹುದು’ ಎಂದು ನಾರಾಯಣ ಮೂರ್ತಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ವಿದ್ಯಾರ್ಥಿಗಳು ಮತ್ತು ಪೋಷಕರು ಕೋಚಿಂಗ್‌ ಕೇಂದ್ರಗಳ  ಭ್ರಮೆಗೆ ಸಿಲುಕಿದ್ದಾರೆ. ಭ್ರಮೆ ಕಳಚಿ ನಿರಂತರ ಅಧ್ಯಯನ ಗ್ರಹಿಕೆ ವಿಶ್ಲೇಷಣಾ ಮನೋಭಾವ ರೂಢಿಸಿಕೊಂಡರೆ ಸಾಧನೆ ಸಾಧ್ಯ. ಶಾಲಾ ತರಗತಿಗಳನ್ನೂ ವಿದ್ಯಾರ್ಥಿಗಳು ಕಡೆಗಣಿಸಬಾರದು. ಶಿಕ್ಷಕರೊಂದಿಗಿನ ನೇರ ಸಂವಾದ ಹಲವು ಗೊಂದಲ ಸಂದೇಹಗಳನ್ನು ನಿವಾರಿಸಲು ಸಹಕಾರಿಯಾಗುತ್ತದೆ ಎಂದರು.

ಡೆಂಗಿಗೆ ಔಷಧ ವಿಜ್ಞಾನಕ್ಕೆ ಸವಾಲು: ವಿಜ್ಞಾನ ಎಷ್ಟೇ ಮುಂದುವರಿದರೂ ಡೆಂಗಿ ಚಿಕುನ್‌ಗುನ್ಯಾದಂತಹ ಕಾಯಿಲೆಗಳಿಗೆ ನಿರ್ದಿಷ್ಟ ಔಷಧ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಪದವಿ ಪೂರೈಸಿದ ತಕ್ಷಣವೇ ಕೆಲಸ ಹುಡುಕುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಕೆಲಸ ಪಡೆಯುವ ಮೊದಲು ಆಳ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುವ ಪ್ರವೃತ್ತಿ ಹೆಚ್ಚಬೇಕು ಎಂದು ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.