ADVERTISEMENT

ಜೈನಮುನಿ ಹತ್ಯೆಗೆ ಖಂಡನೆ; ರಕ್ಷಣೆ ಸಿಗುವವರೆಗೂ ಗುಣಧರ ನಂದಿ ಸ್ವಾಮೀಜಿ ಆಮರಣ ಉಪವಾಸ

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 16:09 IST
Last Updated 8 ಜುಲೈ 2023, 16:09 IST
ಹುಬ್ಬಳ್ಳಿಯ ದಿಗಂಬರ ಜೈನ ಸಮಾಜದಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು
ಹುಬ್ಬಳ್ಳಿಯ ದಿಗಂಬರ ಜೈನ ಸಮಾಜದಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು   

ಹುಬ್ಬಳ್ಳಿ: ‘ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಹಿರೇಕುಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ‌ ಸ್ವಾಮೀಜಿ ಹತ್ಯೆ ಖಂಡನೀಯ. ಜೈನಮುನಿಗಳಿಗೆ ರಕ್ಷಣೆ ಸಿಗುವವರೆಗೂ ಆಮರಣ ಉಪವಾಸ ನಡೆಸಲಾಗುವುದು’ ಎಂದು ವರೂರ ನವಗ್ರಹ ತೀರ್ಥ ಕ್ಷೇತ್ರದ 108 ಆಚಾರ್ಯ ಗುಣಧರ ನಂದಿ ಮಹಾರಾಜರು ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೈನರು ಶಾಂತಿಪ್ರಿಯರು. ಇಂತಹ ಸಮಾಜದ ಸ್ವಾಮೀಜಿಯ ಬರ್ಬರ ಹತ್ಯೆ ತೀವ್ರ ನೋವು ತಂದಿದೆ. ಕಷ್ಟದಲ್ಲಿದ್ದಾಗ ₹6 ಲಕ್ಷ ಪಡೆದು, ಮರಳಿ ಕೊಡುವಂತೆ ಕೇಳಿದ್ದಕ್ಕೆ ಇಬ್ಬರು ಆರೋಪಿಗಳು, ಕಾಮಕುಮಾರ ನಂದಿ ಸ್ವಾಮೀಜಿಗೆ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿದ್ದಾರೆ. ಬಳಿಕ ದೇಹವನ್ನು ತುಂಡು ತುಂಡಾಗಿಸಿ ಕೊಳವೆ ಬಾವಿಯಲ್ಲಿ ಬಚ್ಚಿಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದು ಬಹಳಷ್ಟು ಕ್ರೂರವಾದದ್ದು. ಸಮಾಜಕ್ಕೆ ಒಳಿತು ಬಯಸುವುದು ತಪ್ಪೇ’ ಎಂದು ಕಣ್ಣೀರಿಟ್ಟರು.

‘ಸರ್ಕಾರ ನಮ್ಮಂತಹ ಅಲ್ಪಸಂಖ್ಯಾತರನ್ನು ಕಡೆಗಣಿಸಿದೆ. ಜೈನ ಬಸದಿಗಳು, ಜೈನಮುನಿಗಳು, ಜೈನ ಸಮಾಜಕ್ಕೆ ಸುರಕ್ಷತೆ ಇಲ್ಲವಾಗಿದೆ. ಜೈನಮುನಿಗಳ ಸುರಕ್ಷತೆ ಬಗ್ಗೆ ಮುಖ್ಯಮಂತ್ರಿಗಳು ಅಥವಾ ಅಧಿಕಾರಿಗಳು ಲಿಖಿತವಾಗಿ ಭರವಸೆ ನೀಡಬೇಕು’ ಎಂದರು.

ADVERTISEMENT

ಜಿಲ್ಲಾಧಿಕಾರಿಗೆ ಮನವಿ:

ಜೈನಮುನಿ ಕಾಮಕುಮಾರ ನಂದಿ‌ ಸ್ವಾಮೀಜಿ ಹತ್ಯೆ ಪ್ರಕರಣದ ಆರೋಪಿಗಳನ್ನು ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ನಗರದ ದಿಗಂಬರ ಜೈನ ಸಮಾಜದಿಂದ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ, ನಿಕಟಪೂರ್ವ ಅಧ್ಯಕ್ಷ ಶಾಂತಿನಾಥ ಹೋತಪೇಟಿ, ಉಪಾಧ್ಯಕ್ಷರಾದ ವಿಮಲ ತಾಳಿಕೋಳಿ, ಖಜಾಂಚಿ ಸಂತೋಷ ಮುರಗಿಪಾಟೀಲ, ಛಬ್ಬಿ ಸಮಾಜದ ಅಧ್ಯಕ್ಷ ದೇವೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.