ಚಾಮರಾಜನಗರ: ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರು ಶನಿವಾರ ಬೆಳಗ್ಗೆ ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಮುಂಜಾನೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಒಂಟಿಕೊಪ್ಪಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೂ ಅವರು ಬದುಕುಳಿದಿಲ್ಲ.
ಆರ್. ಧ್ರುವನಾರಾಯಣರವರ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಜೆಡಿಎಸ್ ಹಿರಿಯ ಮುಖಂಡ ಎಚ್.ಡಿ ದೇವೇಗೌಡ ಸೇರಿದಂತೆ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಾಜಿ ಸಂಸದ ಆರ್. ಧ್ರುವನಾರಾಯಣ್ ಅವರ ಹಠಾತ್ ನಿಧನದಿಂದ ದುಃಖವಾಗಿದೆ. ಅವರು ಶ್ರಮಜೀವಿ ಮತ್ತು ಸೌಮ್ಯ ನಾಯಕ. ಎನ್‌ಸಿಯುಐ ಮತ್ತು ಯುವ ಕಾಂಗ್ರೆಸ್ ಮೂಲಕ ಬೆಳೆದ, ಸಾಮಾಜಿಕ ನ್ಯಾಯ ಪರ ಇದ್ದ ನಾಯಕ ಅವರಾಗಿದ್ದರು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪ. ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಮಾಜಿ ಸಂಸದರು ಹಾಗೂ ಕೆಪಿಸಿಸಿಯ ಕಾರ್ಯಾಧ್ಯಕ್ಷರಾಗಿದ್ದ ಧ್ರುವನಾರಾಯಣ್ ಅವರು ನಿಧನರಾದ ವಿಷಯ ಅತ್ಯಂತ ಬೇಸರ ಉಂಟುಮಾಡಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತೇನೆ ಹಾಗೂ ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ಈ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ನನ್ನ ಆತ್ಮೀಯರಾದ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಮಾಜಿ ಸಂಸದ ಧ್ರುವನಾರಾಯಣ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿಕೋರುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ರಾಜಕೀಯ ನಾಯಕ ಮತ್ತು ಸಂಸದೀಯ ಪಟುವಾಗಿ ತನ್ನ ಶ್ರಮ, ಪ್ರಬುದ್ದತೆ ಮತ್ತು ಬದ್ಧತೆಯಿಂದ ಅತ್ಯುನ್ನತ ಸ್ಥಾನಕ್ಕೇರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಧ್ರುವನಾರಾಯಣ್ ಅವರ ಬದುಕು ಅರ್ಧ ದಾರಿಯಲ್ಲಿಯೇ ಕೊನೆಗೊಂಡದ್ದು ನಾಡಿಗೆ ಮತ್ತು ಜನತೆಗೆ ತುಂಬಲಾರದ ನಷ್ಟ. ಅವರ ಸಾಧನೆಯ ಬದುಕು ಶಾಶ್ವತವಾಗಿ ನಮ್ಮ ನೆನಪಲ್ಲಿರುತ್ತದೆ ಎಂದು ಸಿದ್ದರಾಮಯ್ಯ ಸ್ಮರಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರು, ಸರಳ ಸಜ್ಜನ ರಾಜಕಾರಣಿಯಾಗಿದ್ದ ಆರ್.ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿ ಕೇಳಿ ನನಗೆ ತೀವ್ರ ದಿಗ್ಭ್ರಮೆ, ಆಘಾತ ಉಂಟಾಗಿದೆ.
ಅತ್ಯಂತ ಸ್ನೇಹಶೀಲ ವ್ಯಕ್ತಿಯಾಗಿದ್ದ ಅವರು ವಿಭಿನ್ನ ರಾಜಕಾರಣಿ ಆಗಿದ್ದರು. ಸೋಲುಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತಿದ್ದ ಅವರು ಮತ್ತೊಬ್ಬರಿಗೆ ಮಾದರಿ ಆಗಿದ್ದರಲ್ಲದೆ, ಶಾಸಕರಾಗಿ, ಲೋಕಸಭೆ ಸದಸ್ಯರಾಗಿ ರಾಜ್ಯಕ್ಕೆ ಎಣೆ ಇಲ್ಲದ ಸೇವೆ ಮಾಡಿದ್ದರು. ಅವರನ್ನು ಕಳೆದುಕೊಂಡಿದ್ದು ವೈಯಕ್ತಿಕವಾಗಿ ನನಗೆ ಬಹಳ ದುಃಖ ಉಂಟು ಮಾಡಿದೆ. ಅವರಿಗೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಜೆಡಿಎಸ್ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಟ್ಟೀಟ್ ಮಾಡಿದ್ದಾರೆ.
ಜನಪ್ರಿಯ ನಾಯಕರು, ಕೆಪಿಸಿಸಿ ಕಾರ್ಯಾಧ್ಯಕ್ಷ ಶ್ರೀ ಆರ್.ಧ್ರುವನಾರಾಯಣ ಅವರು ಇಂದು ಹಠಾತ್ ನಿಧನರಾದ ಸುದ್ದಿ ತಿಳಿದು ಅತ್ಯಂತ ಆಘಾತವಾಗಿದೆ. ಒಬ್ಬ ಸಕ್ರಿಯ ರಾಜಕಾರಣಿಯನ್ನು ನಾಡು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು, ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನ ಹಿರಿಯ ಮುಖಂಡ ಆರ್. ಧ್ರುವನಾರಾಯಣ ಅವರು ನಿಧನರಾದ ಸುದ್ದಿ ಕೇಳಿ ತೀವ್ರ ಆಘಾತ ಮತ್ತು ದುಃಖವಾಗಿದೆ. ಇವರ ಅಗಲಿಕೆಯಿಂದ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರಿಗೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬ ಹಾಗೂ ನಾಡಿನ ಜನತೆಗೆ ಈ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಜೆಡಿಎಸ್ ಹಿರಿಯ ಮುಖಂಡ ಎಚ್.ಡಿ ದೇವೇಗೌಡ ಟ್ವೀಟ್ ಮಾಡಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಂಸದರಾದ ಶ್ರೀ ಧ್ರುವ ನಾರಾಯಣ ಅವರ ದಿಢೀರ್ ಸಾವಿನಿಂದ ತೀವ್ರ ಆಘಾತಗೊಂಡಿದ್ದೇನೆ. ವೈಯಕ್ತಿಕವಾಗಿ ಆತ್ಮೀಯರಾಗಿದ್ದ ಅವರು ಕಠಿಣ ನಿರ್ಧಾರ ಕೈಗೊಳ್ಳುವಾಗ ಅತ್ಯುತ್ತಮ ಸಲಹೆ ನೀಡುತ್ತಿದ್ದರು. ಯಾರ ಮನಸ್ಸನ್ನೂ ನೋವಿಸದೆ ಸದಾ ಹಸನ್ಮುಖರಾಗಿದ್ದ ವ್ಯಕ್ತಿತ್ವ ಅವರದ್ದು. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟ್ಟೀಟ್ ಮಾಡಿದ್ದಾರೆ.
ಹಸನ್ಮುಖಿ ಮತ್ತು ಕಾಂಗ್ರೆಸ್‌ನ ಅತ್ಯಂತ ಸಮರ್ಪಿತ ನಾಯಕ ಆರ್. ಧ್ರುವನಾರಾಯಣ ಅವರ ಅಗಲಿಕೆಯಿಂದಾದ ನಷ್ಟವನ್ನು ಪದಗಳಿಂದ ವಿವರಿಸಲು ಸಾಧ್ಯವಾಗುತ್ತಿಲ್ಲ. ಬಡವರಿಗಾಗಿ ರಾಜಕೀಯ ಜೀವನ ಸಮರ್ಪಿಸಿಕೊಂಡಿದ್ದ ಧ್ರುವನಾರಾಯಣ ಅವರನ್ನು ನಾವು ಶಾಶ್ವತವಾಗಿ ಕಳೆದುಕೊಂಡಿದ್ದೇವೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಟ್ವೀಟ್ ಮಾಡಿದ್ದಾರೆ.
ಆರ್. ಧ್ರುವನಾರಾಯಣ ಅವರ ನಿಧನದಿಂದ ತೀವ್ರ ದುಃಖ ಮತ್ತು ನೋವಾಗಿದೆ. ಅವರು ರಾಜಕೀಯದಲ್ಲಿ ಮಾತ್ರವಲ್ಲದೆ ವೈಯಕ್ತಿಕವಾಗಿಯೂ ಅತ್ಯುತ್ತಮ ವ್ಯಕ್ತಿಯಾಗಿದ್ದರು. ಅವರ ನಿಧನವು ಕಾಂಗ್ರೆಸ್ ಪಕ್ಷಕ್ಕೆ ಮತ್ತು ನನಗೂ ದೊಡ್ಡ ವೈಯಕ್ತಿಕ ನಷ್ಟವಾಗಿದೆ. ಅವರ ಕುಟುಂಬ ಮತ್ತು ಅನುಯಾಯಿಗಳಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕಾಂಗ್ರೆಸ್ ರಾಷ್ಟ್ರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.