ADVERTISEMENT

ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್‌! ಶಾಲಾ ಸಿಬ್ಬಂದಿಗೆ ಆಘಾತ

ಮೊಬೈಲ್‌ ಪರಿಶೀಲನೆಗೆ ಮುಂದಾದ ಶಾಲಾ ಸಿಬ್ಬಂದಿಗೆ ಆಘಾತ

ರಶ್ಮಿ ಬೇಲೂರು
Published 29 ನವೆಂಬರ್ 2022, 20:15 IST
Last Updated 29 ನವೆಂಬರ್ 2022, 20:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ ಬಳಕೆ ಮಾಡುತ್ತಿದ್ದಾರೆಯೇ ಎಂದು ಪರಿಶೀಲಿಸಲು ಮುಂದಾದ ನಗರದ ಕೆಲವು ಶಾಲಾ ಸಿಬ್ಬಂದಿಗೆ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಕಂಡ ವಸ್ತುಗಳು ಆಘಾತ ತಂದಿತ್ತು.

ಮೊಬೈಲ್‌ ಫೋನ್‌ ಅಷ್ಟೇ ಅಲ್ಲದೆನಗದು, ಕಾಂಡೋಮ್‌ಗಳು, ಗರ್ಭ ನಿರೋಧಕ ಮಾತ್ರೆಗಳು, ಲೈಟರ್‌, ಸಿಗರೇಟ್‌ಗಳು, ವೈಟ್‌ನರ್‌ಗಳು 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಇರುವುದನ್ನು ಕಂಡು ಸಿಬ್ಬಂದಿ ಅಚ್ಚರಿಗೊಂಡಿದ್ದಾರೆ.

ತರಗತಿಗೆ ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ ತರುತ್ತಾರೆ ಎಂದು ಕೆಲವು ಶಿಕ್ಷಕರು ನೀಡಿದ ದೂರಿನ ಮೇರೆಗೆ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸಲು ಕೆಲವು ಶಾಲೆಗಳು ಆರಂಭಿಸಿವೆ. ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕಾಮ್ಸ್) ಕೂಡ ತನ್ನ ಸದಸ್ಯ ಶಾಲೆಗಳಿಗೆ ಸೂಚಿಸಿತ್ತು. ಕೆಲವು ಶಾಲೆಗಳು ಪೋಷಕ- ಶಿಕ್ಷಕರ ವಿಶೇಷ ಸಭೆಗಳನ್ನು ನಡೆಸುತ್ತಿವೆ.

ADVERTISEMENT

‘ನಾವು ಈ ವಿಷಯದ ಬಗ್ಗೆ ಪೋಷಕರ ಜೊತೆ ಚರ್ಚೆ ನಡೆಸಿದ್ದೇವೆ. ಇದನ್ನು ಕೇಳಿಯೇ ಅವರು ಆಘಾತಕ್ಕೆ ಒಳಗಾದರು. ತಮ್ಮ ಮಕ್ಕಳ ವರ್ತನೆ ಯಲ್ಲಿ ಇದ್ದಕ್ಕಿದ್ದಂತೆ ಆಗಿರುವ ಬದ ಲಾವಣೆಗಳ ಬಗ್ಗೆಯೂ ಕೆಲವು ಪೋಷಕರು ಹೇಳಿಕೊಂಡಿದ್ದಾರೆ’ ಎಂದು ನಾಗರಬಾವಿಯಲ್ಲಿರುವ ಶಾಲೆ ಯೊಂದರ ಪ್ರಾಂಶುಪಾಲರು ಹೇಳಿದರು.

ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸಲು ಮುಂದಾಗಿರುವ ಕೆಲವು ಶಾಲೆಗಳು, ವಿದ್ಯಾರ್ಥಿ
ಗಳನ್ನು ಅಮಾನತುಗೊಳಿಸುವ ಬದಲು ಅವರಿಗೆ ಕೌನ್ಸೆಲಿಂಗ್ ಕೊಡಿಸುವಂತೆ ಪೋಷಕರಿಗೆ ಸಲಹೆ ನೀಡಿವೆ.‌

‘ನಮ್ಮ ಶಾಲೆಗಳಲ್ಲಿ ನಿಯಮಿತ ಕೌನ್ಸೆಲಿಂಗ್ ಅವಧಿ ಇದ್ದರೂ, ಮಕ್ಕಳಿಗೆ ಹೊರಗಿನಿಂದ ಆಪ್ತ ಸಮಾಲೋಚನೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಪೋಷಕ ರಿಗೆ ತಿಳಿಸಿದ್ದೇವೆ. ಅದಕ್ಕಾಗಿ ಒಂದು ವಾರದಿಂದ 10 ದಿನಗಳವರೆಗೆ ರಜೆಯನ್ನೂ ನೀಡಿದ್ದೇವೆ’ ಎಂದೂ ಪ್ರಾಂಶುಪಾಲರು ಹೇಳಿದರು.

‘10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಬ್ಯಾಗ್‌ನಲ್ಲಿ ಕಾಂಡೋಮ್ ಸಿಕ್ಕಿದೆ’ ಎಂದು ಮತ್ತೊಬ್ಬ ಪ್ರಾಂಶುಪಾಲರು ತಿಳಿಸಿದ್ದಾರೆ.

ಈ ಬಗ್ಗೆ ಪ್ರಶ್ನಿಸಿದಾಗ, ‘ಸಹಪಾಠಿಗಳು, ಶಾಲೆಗೆ ಬರುವ ಮೊದಲು ಖಾಸಗಿ ಟ್ಯೂಷನ್‌ನಲ್ಲಿ ಇರುವವರ ಕಡೆಗೆ ಬೆರಳು ತೋರಿಸಿ ದ್ದಾಳೆ’ ಎಂದೂ ಅವರು ಹೇಳಿದರು.

‘ಕಾಮ್ಸ್‌ನ ಶೇ 80ರಷ್ಟು ಸದಸ್ಯ ಶಾಲೆಗಳು ದಿಢೀರ್ ಆಗಿ ತಮ್ಮ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸಿ ಮಾಹಿತಿ ನೀಡಿವೆ’ ಎಂದು ಕಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ತಿಳಿಸಿದ್ದಾರೆ. ‘ಒಂದು ಶಾಲೆಯ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಗರ್ಭ ನಿರೋಧಕ ಮಾತ್ರೆ (ಐ-ಪಿಲ್) ಕಂಡುಬಂದಿವೆ. ಅಲ್ಲದೆ, ನೀರಿನ ಬಾಟಲಿಗಳಲ್ಲಿ ಆಲ್ಕೋಹಾಲ್ ಇತ್ತು’ ಎಂದೂ ಅವರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಅಭಯ ಆಸ್ಪತ್ರೆಯ ಸಲಹೆಗಾರ, ಮನೋವೈದ್ಯ ಎ. ಜಗದೀಶ್,‘ಒಂಟಿ ತಾಯಿ ತನ್ನ 14 ವರ್ಷದ ಮಗನ ಶೂ ಇಡುವ ಜಾಗದಲ್ಲಿ ಕಾಂಡೋಮ್ ಕಂಡು ಆಘಾತಕ್ಕೆ ಒಳಗಾದ ಪ್ರಕರಣವೊಂದು ಇತ್ತೀಚೆಗೆ ನನ್ನ ಬಳಿ ಬಂದಿತ್ತು. ಅಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಪ್ರಯೋಗ ಮಾಡಲು ಇಷ್ಟಪಡುವ ಕೆಲವು ಮಕ್ಕಳೂ ಇದ್ದಾರೆ. ಮಾದಕ ವ್ಯಸನ ಮತ್ತು ಅನ್ಯ ಲಿಂಗಿಯೊಂದಿಗೆ ಅತಿಯಾಗಿ ಬೆರೆಯುವುದು ದೈಹಿಕ ಸಂಪರ್ಕಕ್ಕೂ ಕಾರಣ ಆಗಬಹುದು. ಪೋಷಕರು ತಮ್ಮ ಮಕ್ಕಳೊಂದಿಗೆ ಕುಳಿತು ಮಾತನಾಡಬೇಕು. ಜೊತೆಗೆ ಮಾರ್ಗದರ್ಶನವನ್ನೂ ನೀಡಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.