ಚಿಕ್ಕಬಳ್ಳಾಪುರ: ‘ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಈವರೆಗೆ ಇತ್ಯರ್ಥವಾಗದ ಕಾರಣ ಚುನಾವಣಾ ಆಯೋಗ ಘೋಷಿಸಿರುವ ಉಪ ಚುನಾವಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡುವ ವಿಶ್ವಾಸವಿದೆ’ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಮೇಶ್ ಕುಮಾರ್ ಅವರು ನಮ್ಮನ್ನು ಅನರ್ಹಗೊಳಿಸಿ ನೀಡಿರುವ ಆದೇಶ ಕಾನೂನು ಮತ್ತು ಸಂವಿಧಾನ ಬಾಹಿರವಾಗಿದೆ. ಆದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಉಪ ಚುನಾವಣೆ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ಸಿಗುತ್ತದೆ ಎಂಬ ನಂಬಿಕೆ ಇದೆ. ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಅರ್ಜಿಯ ವಿಚಾರಣೆ ನಡೆಯಲಿದೆ. ನಮ್ಮ ವಕೀಲರು ತಡೆಯಾಜ್ಞೆಗೆ ಮನವಿ ಸಲ್ಲಿಸಲಿದ್ದಾರೆ’ ಎಂದು ತಿಳಿಸಿದರು.
‘ಯಾವುದೇ ಜನಪ್ರತಿನಿಧಿಯ ಸ್ಥಾನ ಖಾಲಿಯಾದರೆ ಅದಕ್ಕೆ ಆರು ತಿಂಗಳಲ್ಲಿ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯ. ಅದನ್ನು ಆಯೋಗ ಮಾಡುತ್ತಿದೆ. ಸದ್ಯ ಆಯೋಗ ಉಪ ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡಿದೆ ವಿನಾ ಅಧಿಸೂಚನೆ ಹೊರಡಿಸಿಲ್ಲ’ ಎಂದರು.
ನಗರದಲ್ಲಿ ನಡೆದ ಪಿಎಲ್‌ಡಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದ ಸುಧಾಕರ್ ಅವರು ಉಪ ಚುನಾವಣೆ ಘೋಷಣೆ ಸುದ್ದಿ ಕೇಳುತ್ತಿದ್ದಂತೆ ಅರ್ಧದಲ್ಲೇ ಸಭೆಯಿಂದ ಹೊರನಡೆದು, ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.