ADVERTISEMENT

ಅಶ್ವತ್ಥನಾರಾಯಣ, 'ಯಾರಪ್ಪ ಗಂಡು ಅದು...' ಎಂದಾಗ ನುಗ್ಗಿ ಬಂದ ಡಿಕೆ ಸುರೇಶ್‌

ಅಂಬೇಡ್ಕರ್‌, ಕೆಂಪೇಗೌಡರ ಪ್ರತಿಮೆ ಅನಾವರಣ ಸಂಬಂಧ ಮನಸ್ತಾಪ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 5:10 IST
Last Updated 4 ಜನವರಿ 2022, 5:10 IST
ಕಾರ್ಯಕ್ರಮದ ವೇದಿಕೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ, ಸಂಸದ ಡಿ.ಕೆ. ಸುರೇಶ್‌ ಹಾಗೂ ಸಚಿವ ಅಶ್ವತ್ಥನಾರಾಯಣ ಜಟಾಪಟಿ ನಡೆಸಿದರು
ಕಾರ್ಯಕ್ರಮದ ವೇದಿಕೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ, ಸಂಸದ ಡಿ.ಕೆ. ಸುರೇಶ್‌ ಹಾಗೂ ಸಚಿವ ಅಶ್ವತ್ಥನಾರಾಯಣ ಜಟಾಪಟಿ ನಡೆಸಿದರು   

ರಾಮನಗರ: ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಮ್ಮುಖದಲ್ಲಿ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಸಂಸದ‌ ಡಿ.ಕೆ.‌ ಸುರೇಶ್ ಜಟಾಪಟಿಗೆ ಮುಂದಾದ ಪ್ರಸಂಗ ನಡೆಯಿತು.

ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಕಾಮಗಾರಿಗಳ ಚಾಲನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಾಲ್ಗೊಂಡಿದ್ದರು. ಅಂಬೇಡ್ಕರ್ ಮತ್ತು ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಶ್ರಮಿಸಿದ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಮುಖಂಡರನ್ನು ಜಿಲ್ಲಾಡಳಿತ ಕಡೆಗಣಿಸಿದ್ದು, ಕಾಟಾಚಾರಕ್ಕಾಗಿ ಆಹ್ವಾನಿಸಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ದಲಿತ ಮುಖಂಡರು ಕಪ್ಪು ಪಟ್ಟಿ ಧರಿಸಿ ಕಾರ್ಯಕ್ರಮದಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಲವರು ವೇದಿಕೆಗೆ ಏರಿ ಪ್ರತಿಭಟಿಸಿದರು.

ಭಾಷಣದಲ್ಲಿ ಈ ಕುರಿತು ಪ್ರಸ್ತಾಪಿಸಿದ ಸಚಿವ ಅಶ್ವತ್ಥನಾರಾಯಣ ‘ಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಬೊಮ್ಮಾಯಿ ನಮ್ಮ ಜಿಲ್ಲೆಗೆ ಬಂದಿದ್ದಾರೆ. ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕಿತ್ತು. ಇವತ್ತು ಏನು ತಪ್ಪಾಗಿದೆ ಎಂದು ಘೋಷಣೆ ಕೂಗುತ್ತಿದ್ದೀರಿ. ನಾಲ್ಕು ಜನ ಕಟ್ಟಿಕೊಂಡು ಸಭೆಗೆ ಅಡ್ಡಿಪಡಿಸುತ್ತಿದ್ದೀರಿ. ಯಾರಪ್ಪ ಗಂಡು ಅದು, ಸಭೆಯಲ್ಲಿ ಗಲಾಟೆ ಮಾಡುವುದು ಬಿಟ್ಟು ಏನು ಕೆಲಸ ಮಾಡಿದ್ದೀರಿ ತೋರಿಸಿ. ನಾನೆಂದೂ ಯಾರ ಜಮೀನಿಗೂ ಬೇಲಿ ಹಾಕುವ ಕೆಲಸ ಮಾಡಿಲ್ಲ’ ಎಂದರು. ವೇದಿಕೆಯಲ್ಲೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಸಂಸದ ಸುರೇಶ್‌ ಅವರು ಅಶ್ವತ್ಥನಾರಾಯಣ ಅವರತ್ತ ನುಗ್ಗಿ ಬಂದರು. ಈ ಸಂದರ್ಭ ಇಬ್ಬರ ನಡುವೆ ಮಾತಿನ ಜಟಾಪಟಿ ನಡೆಯಿತು.

ADVERTISEMENT

ಮುಖ್ಯಮಂತ್ರಿ ಸಹಿತ ವೇದಿಕೆಯಲ್ಲಿದ್ದವರು ಇಬ್ಬರನ್ನೂ ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು.

ಈ ವೇಳೆ ವಿಧಾನ ಪರಿಷತ್‌ ಸದಸ್ಯ ಎಸ್. ರವಿ ಮೈಕ್‌ನಲ್ಲಿ ಮಾತನಾಡಲು ಯತ್ನಿಸಿದ್ದು, ಅಶ್ವತ್ಥನಾರಾಯಣ ಅದಕ್ಕೆ ಅವಕಾಶ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ರವಿ ಮೈಕ್‌ ಕಿತ್ತೆಸೆದರು. ನಂತರ ಡಿ.ಕೆ. ಸುರೇಶ್‌, ರವಿ ಮತ್ತಿತರರು ಮುಖ್ಯಮಂತ್ರಿ ಎದುರು ಧರಣಿ ಕುಳಿತರು.

ಡಿ.ಕೆ. ಸುರೇಶ್ ಹೇಳಿದ್ದೇನು?: ‘ಪ್ರತಿಮೆಗಳ ನಿರ್ಮಾಣದ ಹಿಂದೆ ಇಡೀ ಜಿಲ್ಲೆಯ ನಾಗರಿಕರ ಕೊಡುಗೆ ಇದೆ. ಹೀಗಾಗಿ ಸಾಕಷ್ಟು ಮುಂಚಿತವಾಗಿಯೇ ಎಲ್ಲ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ ಕಾರ್ಯಕ್ರಮ ರೂಪಿಸಿದ್ದರೆ ನಾವು ಪಕ್ಷಾತೀತವಾಗಿ ಬೆಂಬಲ ನೀಡುತ್ತಿದ್ದೆವು. ಆದರೆ ಕೇವಲ ಮೂರು ದಿನಗಳ ಹಿಂದೆ ಕಾಟಾಚಾರಕ್ಕೆ ಆಹ್ವಾನಪತ್ರಿಕೆ ಕಳುಹಿಸಿ ಕಾರ್ಯಕ್ರಮಕ್ಕೆ ಬನ್ನಿ ಎಂದು ಅವಮಾನ ಮಾಡಿದ್ದಾರೆ’ ಎಂದು ಡಿ.ಕೆ. ಸುರೇಶ್‌ ದೂರಿದರು.

‘ರಾಮನಗರವೂ ಸೇರಿದಂತೆ ಇಡೀ ರಾಜ್ಯಕ್ಕೆ ನೀವು ಯಾವ ಜಿಲ್ಲೆಗೂ ಉಸ್ತುವಾರಿ ಸಚಿವರನ್ನು ಅಧಿಕೃತವಾಗಿ ನೇಮಿಸಿಲ್ಲ. ಹೀಗಿರುವಾಗ ಇವರನ್ನು ಉಸ್ತುವಾರಿ ಸಚಿವ ಎಂದು ಹೇಗನ್ನುತ್ತೀರಿ’ ಎಂದು ಅಶ್ವತ್ಥನಾರಾಯಣ ಕುರಿತು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು.

‘ಕಾರ್ಯಕ್ರಮಕ್ಕೆ ಕನಿಷ್ಠ ಈ ಭಾಗದ ಸ್ವಾಮೀಜಿಗಳನ್ನು ಕರೆಯಿಸಬೇಕಿತ್ತು. ಇದೇನಾ ನಿಮ್ಮ ಆರ್‌ಎಸ್‌ಎಸ್‌ ಕಲಿಸಿದ ಸಂಸ್ಕೃತಿ’ ಎಂದು ಪ್ರಶ್ನಿಸಿದರು. ಇದಕ್ಕೆ ವೇದಿಕೆಯ ಕೆಳಭಾಗದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ‘ಆರ್‌ಎಸ್‌ಎಸ್‌ ಬಗ್ಗೆ ಏಕೆ ಮಾತನಾಡುತ್ತೀರಿ’ ಎಂದು ಪ್ರಶ್ನಿಸಿದರು.

ಬೊಮ್ಮಾಯಿ ಕಿವಿಮಾತು:ಮುಖ್ಯಮಂತ್ರಿ‌ ಬೊಮ್ಮಾಯಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ‌ ಮಾಡಿದರು. 'ರಾಜಕೀಯ ಇದ್ದದ್ದೇ. ಆದರೆ‌‌ ನಾವು ಜನಪರವಾಗಿ‌‌ ಕೆಲಸ ಮಾಡಬೇಕೇ ಹೊರತು ಭಿನ್ನಾಭಿಪ್ರಾಯವನ್ನೇ ದೊಡ್ಡದು ಮಾಡಬಾರದು. ಜನರು ಮುಗ್ಧರು. ನಮ್ಮ ವರ್ತನೆಗಳು ಅವರ ಮೇಲೆ ಪರಿಣಾಮ ಬೀರುತ್ತದೆ' ಎಂದು ಇಬ್ಬರಿಗೂ‌ ಕಿವಿಮಾತು‌ ಹೇಳಿದರು.

‘ಹಳೆ ಮೈಸೂರು ಭಾಗದಿಂದ ಎಚ್‌.ಡಿ. ದೇವೇಗೌಡ, ಎಸ್‌.ಎಂ. ಕೃಷ್ಣ, ಎಚ್‌.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಇವರೆಲ್ಲ ನಮ್ಮ ಉತ್ತರ ಕರ್ನಾಟಕ ಭಾಗಕ್ಕೆ ಬಂದಾಗ ಅಪಾರ ಪ್ರೀತಿ ತೋರಿಸಿದ್ದೇವೆ’ ಎಂದೂ ಹೇಳಿದರು.

ಮಾಗಡಿಯಲ್ಲೂ ಮುಂದುವರಿಕೆ:ಸಚಿವ ಅಶ್ವತ್ಥನಾರಾಯಣ ಅವರ ಹುಟ್ಟೂರಾದ ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯಾ ಗ್ರಾಮದಲ್ಲಿ ಮಧ್ಯಾಹ್ನ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲೂ ಗಲಾಟೆ ಮುಂದುವರಿಯಿತು.

ಅಶ್ವತ್ಥನಾರಾಯಣ ಭಾಷಣದ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ‘ಡಿ.ಕೆ... ಡಿ.ಕೆ’ ಎಂದು ಘೋಷಣೆ ಕೂಗಿದರು. ಆಗ ಸುರೇಶ್‌ ತಮ್ಮ ಬೆಂಬಲಿಗರನ್ನು ಗದರಿಸಿದರು. ಸುರೇಶ್ ಮಾತನಾಡುವ ವೇಳೆ ಬಿಜೆಪಿ ಬೆಂಬಲಿಗರು ಅಲ್ಲಿಂದ ಹೊರಡಲು ಮುಂದಾದಾಗ ಜೆಡಿಎಸ್‌ ಶಾಸಕ ಎ.ಮಂಜುನಾಥ ಮಧ್ಯ ಪ್ರವೇಶಿಸಿ ‘ಇದು ಬಲಾಬಲದ ವೇದಿಕೆಯಲ್ಲ. ಯಾರೂ ಹೋಗಬೇಡಿ‘ ಎಂದು ಮನವಿ ಮಾಡಿದರು.

ಏನಿದು ಪ್ರತಿಮೆ ವಿವಾದ:ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸಬೇಕು ಎಂದು ಸಂಘಟನೆಗಳು ಒತ್ತಾಯಿಸುತ್ತ ಬಂದಿದ್ದವು. ಮತ್ತೊಂದೆಡೆ, ಮಾಗಡಿಯವರೇ ಆದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೂ ಒತ್ತಾಯ ಕೇಳಿಬಂದಿತ್ತು. ನಂತರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿ, ನಿರ್ಮಾಣದ ಉಸ್ತುವಾರಿಗಾಗಿ ಸಮಿತಿಯನ್ನೂ ರಚಿಸಲಾಯಿತು. ₹59.60 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್‌ ಪ್ರತಿಮೆ ಹಾಗೂ ₹63.82 ಲಕ್ಷ ವೆಚ್ಚದಲ್ಲಿ ಕೆಂಪೇಗೌಡರ ಪ್ರತಿಮೆ ಸಿದ್ಧವಾಗಿದ್ದು, ಇವುಗಳನ್ನು 2019ರ ಅಕ್ಟೋಬರ್‌ನಲ್ಲಿಯೇ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ನಿಲ್ಲಿಸಲಾಗಿತ್ತು. ಆದರೆ ಜನಪ್ರತಿನಿಧಿಗಳ ದಿನಾಂಕ ಹೊಂದಾಣಿಕೆ ಆಗದ ಕಾರಣಕ್ಕೆ ಉದ್ಘಾಟನೆಯನ್ನು ಮುಂದೂಡುತ್ತಲೇ ಬರಲಾಗಿತ್ತು.

ಪರ–ವಿರೋಧ ಪ್ರತಿಭಟನೆ:ಸಚಿವ ಅಶ್ವತ್ಥನಾರಾಯಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಚನ್ನಪಟ್ಟಣದಲ್ಲಿ ಪ್ರತಿಭಟನೆ ಮಾಡಿದರು. ರಾಮನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಸಂಜೆ ಬಿಜೆಪಿ ಜಿಲ್ಲಾ ಕಾರ್ಯಕರ್ತರು ಡಿ.ಕೆ. ಸುರೇಶ್‌ ನಡೆ ಖಂಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು. ರಾಮನಗರದಲ್ಲಿ ಕಾರ್ಯಕ್ರಮದ ಮುಕ್ತಾಯದ ಬಳಿಕ ಹೆದ್ದಾರಿ ಮಧ್ಯದಲ್ಲಿ ಕಟ್ಟಿದ್ದ ಬಿಜೆಪಿ ನಾಯಕರ ಸ್ವಾಗತದ ಬ್ಯಾನರ್‌ಗಳನ್ನು ಡಿ.ಕೆ. ಸುರೇಶ್‌ ಬೆಂಬಲಿಗರು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.