ADVERTISEMENT

ಕೊಡದ ಬರ ಪರಿಹಾರ: ಕೇಂದ್ರದ ವಿರುದ್ಧ ‘ಸರ್ಕಾರಿ’ ಸಂಘರ್ಷ

ಸುಪ್ರೀಂ ಕದ ತಟ್ಟಿದ ಕಾಂಗ್ರೆಸ್ ಸರ್ಕಾರ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 23:30 IST
Last Updated 23 ಮಾರ್ಚ್ 2024, 23:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಬರದಿಂದ ಕಂಗೆಟ್ಟಿರುವ ಕರ್ನಾಟಕಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಪರಿಹಾರ ಕೊಡುತ್ತಿಲ್ಲ; ನೆರವಿಗೂ ಬರುತ್ತಿಲ್ಲ ಎಂದು ಆಪಾದಿಸಿದ್ದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಈಗ ತನ್ನ ಹೋರಾಟವನ್ನು ಸುಪ್ರೀಂ ಕೋರ್ಟ್‌ವರೆಗೆ ಒಯ್ದಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್‌) ತಕ್ಷಣ ಬಿಡುಗಡೆಗೊಳಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿದೆ. ಪರಿಹಾರ ಬಿಡುಗಡೆಗೆ ಆಗ್ರಹಿಸಿ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ನಡೆಸುತ್ತಿರುವ ಹೋರಾಟ ಮತ್ತೊಂದು ಆಯಾಮ ಪಡೆದಿದೆ.

ಕೇಂದ್ರದ ಜತೆ ರಾಜ್ಯ ಸರ್ಕಾರ ಪತ್ರ ವ್ಯವಹಾರ ನಡೆಸಿತ್ತು. ರಾಜ್ಯ ಸಚಿವರ ನಿಯೋಗವು ಕೇಂದ್ರ ಸಚಿವರ ಭೇಟಿ ಮಾಡಿತ್ತು. ಪ್ರಧಾನಿ ಮತ್ತು ಗೃಹ ಸಚಿವರಿಗೆ ರಾಜ್ಯ ಸರ್ಕಾರದಿಂದ ಮನವಿಯನ್ನೂ ಸಲ್ಲಿಸಲಾಗಿತ್ತು. ಹಲವು ಸುತ್ತಿನ ಆಪಾದನಾ ಪರ್ವಗಳನ್ನು ನಡೆಸಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಸಚಿವ, ಶಾಸಕರ ದಂಡಿನೊಂದಿಗೆ ದೆಹಲಿಯ ಜಂತರ್‌ಮಂತರ್‌ನಲ್ಲಿ ಧರಣಿಯನ್ನೂ ನಡೆಸಿ ದೇಶದ ಗಮನ ಸೆಳೆದಿತ್ತು. ಈಗ ಕಾನೂನುಸಮರ ಸಾರಿದೆ. 

ADVERTISEMENT

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕೇಂದ್ರದಿಂದ ನಮ್ಮ ಪಾಲಿನ ಪರಿಹಾರ ಬರುತ್ತದೆ ಎಂದು ಕಾದು ಕಾದು ಸಾಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇವೆ. ಸಂವಿಧಾನದ ವಿಧಿ 32‌ರ ಅಡಿಯಲ್ಲಿ ನಾವು ನಮ್ಮ ಕಾನೂನುಬದ್ಧ ಹಕ್ಕು ಚಲಾಯಿಸಿದ್ದೇವೆ’ ಎಂದು ಹೇಳಿದರು.

‘ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿದ್ದೇವೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಟ ಆಗಿದೆ. ಮೂರು ಬಾರಿ ಸತತವಾಗಿ ಕೇಂದ್ರಕ್ಕೆ ಮನವಿ ಪತ್ರ ಸಲ್ಲಿಸಿದ್ದೇವೆ. ಆದರೆ, ಕಾನೂನು ಬದ್ಧವಾಗಿ ನಮಗೆ ಬರಬೇಕಾದ ಹಣದಲ್ಲಿ ನಯಾ ಪೈಸೆಯನ್ನೂ ಕೇಂದ್ರ ಕೊಟ್ಟಿಲ್ಲ’ ಎಂದು ದೂರಿದರು.

‘ನಿಯಮಾವಳಿ ಪ್ರಕಾರ ರಾಜ್ಯ ಸರ್ಕಾರ ಮನವಿ ಮಾಡಿದ ವಾರದಲ್ಲಿ ಕೇಂದ್ರದ ತಂಡ ಬರಬೇಕು. ಆದರೆ, ಕಳೆದ ಅಕ್ಟೋಬರ್‌ನಲ್ಲಿ ಕೇಂದ್ರ ತಂಡ ರಾಜ್ಯದಲ್ಲಿ ಪರಿಶೀಲನೆ ನಡೆಸಿ ಕೇಂದ್ರಕ್ಕೆ ವರದಿ ನೀಡಿದೆ. ಈ ವರದಿ ನೀಡಿದ ಒಂದು ತಿಂಗಳಲ್ಲಿ ಬರ ಪರಿಹಾರ ಕೊಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವುದು ನಿಯಮ. ಆದರೆ, ಇದುವರೆಗೂ ಕೇಂದ್ರ ರಾಜ್ಯದ ಜನರಿಗೆ ಸ್ಪಂದಿಸಿಲ್ಲ’ ಎಂದು ಆರೋಪಿಸಿದ ಮುಖ್ಯಮಂತ್ರಿ, ಎನ್‌ಡಿಆರ್‌ಎಫ್‌ ನಿಯಮಾವಳಿಗಳನ್ನು ವಿವರಿಸಿದರು.

‘ಕೇಂದ್ರ ತಂಡ ವರದಿ ನೀಡಿದ ನಂತರವೂ ಕೇಂದ್ರ ಸರ್ಕಾರ ಸ್ಪಂದಿಸದೇ ಇದ್ದಾಗ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ದೆಹಲಿಗೆ ಹೋಗಿದ್ದರು. ಆದರೆ, ಕೇಂದ್ರ ಸಚಿವರ ಭೇಟಿಗೆ ಅವಕಾಶವನ್ನೇ ಕೊಡಲಿಲ್ಲ. ಡಿ. 19ರಂದು ನಾನು ಮತ್ತು ಕೃಷ್ಣ ಬೈರೇಗೌಡ ದೆಹಲಿಗೆ ತೆರಳಿ ಪ್ರಧಾನ ಮಂತ್ರಿಯವರನ್ನು, ಮರುದಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆವು. ಬೆಂಗಳೂರಿಗೆ ಬಂದಿದ್ದ ಪ್ರಧಾನಿಯನ್ನು‌ ನಾನು ಖುದ್ದು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಆದರೂ ನಮಗೆ ಪರಿಹಾರ ಸಿಗಲಿಲ್ಲ’ ಎಂದರು.

ಎನ್‌ಡಿಆರ್‌ಎಫ್‌ ಪಡೆಯಲು ರಾಜ್ಯ ಸರ್ಕಾರ ಇದುವರೆಗೆ ಮಾಡಿದ ಪ್ರಯತ್ನಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು.

ಬರವೂ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಜನರಿಗೆ ತುರ್ತು ಆಗಿ ಸ್ಪಂದಿಸಬೇಕು ಎನ್ನುವ ಉದ್ದೇಶದಿಂದಲೇ ‘ವಿಪತ್ತು ನಿರ್ವಹಣಾ ಕಾನೂನು’ ಮಾಡಲಾಗಿದೆ. ಈ ಕಾಯ್ದೆ ಪ್ರಕಾರ ಇಂಥ ಸನ್ನಿವೇಶದಲ್ಲಿ ವಿಳಂಬ ಮಾಡದೆ ಹಣ ಬಿಡುಗಡೆ ಆಗಬೇಕಿತ್ತು. ಆದರೆ ಐದು ತಿಂಗಳು ಕಳೆದರೂ ಎನ್‌ಡಿಆರ್‌ಎಫ್ ನಿಧಿ ಬಂದಿಲ್ಲ. ಬೇರೆ ದಾರಿ ಇಲ್ಲದೆ ನಾವು ಸುಪ್ರೀಂ ಕೋರ್ಟ್ ಬಾಗಿಲು ಬಡಿಯಬೇಕಾಯಿತು.
–ಸಿದ್ದರಾಮಯ್ಯ ಮುಖ್ಯಮಂತ್ರಿ

ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಪರಿಹಾರ

₹ 327 ಕೋಟಿ: ಕುಡಿಯುವ ನೀರು ಸರಬರಾಜು

₹ 40 ಕೋಟಿ: ಮೇವು ಪೂರೈಕೆಗೆ

₹ 650 ಕೋಟಿ: ರೈತರಿಗೆ ಪರಿಹಾರ

________

₹ 800 ಕೋಟಿ: ಬರ ನಿರ್ವಹಣೆಗಾಗಿ ಡಿಸಿಗಳ ಬಳಿ ಇರುವ ಹಣ

₹ 4663 ಕೋಟಿ: ಇನ್‌ಫುಟ್ ಸಬ್ಸಿಡಿ ನೀಡಲು ಬೇಕಿರುವ ಹಣ

₹18171 ಕೋಟಿ: ಕೇಂದ್ರದಿಂದ ಪರಿಹಾರಕ್ಕೆ ಕೋರಿರುವ ಮೊತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.