ಬೆಳಗಾವಿ: ‘ಆಪರೇಷನ್ ಕಮಲ ನಡೆಸಲು ಬಿಜೆಪಿ ಪ್ರಯತ್ನಿಸಿದರೆ, ಸರ್ಕಾರ ಉಳಿಸಿಕೊಳ್ಳಲು ನಾವೂ ಆಪರೇಷನ್ ಮಾಡಲು ಸಿದ್ಧ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೂ ಆಪರೇಷನ್ ಮಾಡುವ ಶಕ್ತಿಯಿದೆ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನ್ನ ಸಂಪರ್ಕದಲ್ಲೂ ಕೆಲವು ಬಿಜೆಪಿ ಶಾಸಕರಿದ್ದಾರೆ. ಎಷ್ಟು ಜನ ಎನ್ನುವುದನ್ನು ಅವಶ್ಯಕತೆ ಬಿದ್ದಾಗ ಹೇಳುತ್ತೇನೆ. ಅವರಂತೆ 20 ಶಾಸಕರಿದ್ದಾರೆ, 30 ಶಾಸಕರಿದ್ದಾರೆಂದು ಹೇಳುವುದಿಲ್ಲ. ನಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಬೇಕಾಗುವಷ್ಟು ಶಾಸಕರು ಸಂಪರ್ಕದಲ್ಲಿದ್ದಾರೆ’ ಎಂದು ತಿಳಿಸಿದರು.
‘ಕೇಂದ್ರದಲ್ಲಿ 300 ಹಾಗೂ ಅದಕ್ಕಿಂತ ಹೆಚ್ಚು ಸ್ಥಾನಗಳು ಲಭಿಸಿದರೆ ಬಿಜೆಪಿಯವರು ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನಿಸಬಹುದು. ಆದರೆ, ಅವರಿಗೆ 230ರಿಂದ 240 ಸ್ಥಾನಗಳು ಮಾತ್ರ ಲಭಿಸಲಿವೆ ಎಂದು ಆಂತರಿಕ ಸಮೀಕ್ಷೆಗಳು ಹೇಳಿವೆ. ಪ್ರಧಾನಿ ನರೇಂದ್ರ ಮೋದಿಯವರೇ ಸರ್ಕಾರ ರಚಿಸಲು ಬೇರೊಬ್ಬರ ಬಳಿ ಸಹಾಯ ಬೇಡಬೇಕಾದ ಪರಿಸ್ಥಿತಿ ಇದೆ’ ಎಂದು ವ್ಯಂಗ್ಯವಾಡಿದರು.
ಎಲ್ಲರೂ ಹೋಗಲ್ಲ:‘ಕಾಂಗ್ರೆಸ್‌ನ ಬಂಡಾಯ ಶಾಸಕ, ಸಹೋದರ ರಮೇಶ ಜಾರಕಿಹೊಳಿ ಜೊತೆ ಕಾಂಗ್ರೆಸ್‌ನ ಎಲ್ಲ 80 ಜನ ಶಾಸಕರು ಸಂಪರ್ಕದಲ್ಲಿರುವುದು ನಿಜ. ಆದರೆ ಸಂಪರ್ಕದಲ್ಲಿರುವವರು ಎಲ್ಲರೂ ಪಕ್ಷ ಬಿಟ್ಟು ಹೋಗುವುದಿಲ್ಲ. ನಮ್ಮ ಸರ್ಕಾರಕ್ಕೆ ಏನೂ ತೊಂದರೆಯಾಗಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.