ADVERTISEMENT

ಒಗ್ಗೂಡಿದ ‘ಕೈ’ ಅತೃಪ್ತರು

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 20:15 IST
Last Updated 15 ಜೂನ್ 2019, 20:15 IST
   

ಬೆಂಗಳೂರು/ಹಾವೇರಿ: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನ ಅತೃಪ್ತ ಶಾಸಕರು ಒಟ್ಟುಗೂಡಿ ಚರ್ಚೆ ನಡೆಸಿದ್ದು, ಭಿನ್ನಮತದ ಚಟುವಟಿಕೆಗೆ ಮತ್ತೆ ಚಾಲನೆ ಸಿಕ್ಕಂತಾಗಿದೆ.

ಅತೃಪ್ತರ ಬಣದ ಜತೆ ಇದ್ದೂ ಇಲ್ಲದಂತಿರುವ ಕಾಂಗ್ರೆಸ್‌ ಶಾಸಕರಾದ ಬಿ.ಸಿ. ಪಾಟೀಲ (ಹಿರೇಕೆರೂರ) ಹಾಗೂ ಡಾ.ಸುಧಾಕರ್ (ಚಿಕ್ಕಬಳ್ಳಾಪುರ) ಅವರು ತಮ್ಮ ಪಕ್ಷದ ನಾಯಕರ ಬಗ್ಗೆ ಕೆಂಡ ಕಾರಿದ್ದಾರೆ.

ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭವಾದ ಬಳಿಕ ಸುಮ್ಮನಾಗಿದ್ದ ಗೋಕಾಕ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಮತ್ತೆ ತಮ್ಮ ಬೆಂಬಲಿಗರನ್ನು ಒಗ್ಗೂಡಿಸುವ ಯತ್ನಕ್ಕೆ ಕೈಹಾಕಿದ್ದಾರೆ. ಜಾರಕಿಹೊಳಿ ನಿವಾಸಕ್ಕೆ ಶನಿವಾರ ಭೇಟಿ ನೀಡಿರುವ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಹಾಗೂ ಅಥಣಿ ಶಾಸಕ ಮಹೇಶ ಕುಮಠಳ್ಳಿ ಮುಂದಿನ ನಡೆಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

ಅತೃಪ್ತಿಯನ್ನು ಶಮನಗೊಳಿಸಲು ಮುಂದಾಗಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ಪಾಲಿನ ಒಂದು ಸಚಿವ ಸ್ಥಾನವನ್ನು ರಮೇಶ ಜಾರಕಿಹೊಳಿ ಅವರಿಗೆ ನೀಡುವ ಬಗ್ಗೆ ಆಲೋಚಿಸಿದ್ದರು. ಆದರೆ, ಅದಕ್ಕೆ ಅವರು ಸಮ್ಮತಿಸಿರಲಿಲ್ಲ. ಸಂಪುಟ ವಿಸ್ತರಣೆ ಮುಗಿದ ಕೂಡಲೇ ಜಾರಕಿಹೊಳಿ ಅಖಾಡಕ್ಕೆ ಇಳಿದಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಹಾವೇರಿಯಲ್ಲಿ ಮಾತನಾಡಿದ ಬಿ.ಸಿ. ಪಾಟೀಲ,‘ನಾನೇನು ಮಂತ್ರಿಗಿರಿ ಕೇಳಿರಲಿಲ್ಲ. ನೀನು ಬೇಡ ಅಂದ್ರೂ, ಲೋಕಸಭಾ ಚುನಾವಣೆ ಮುಗಿದ ಬಳಿಕ ನಿನ್ನನ್ನು ಮಂತ್ರಿ ಮಾಡ್ತೀನಿ’ ಎಂದು ಸಿದ್ದರಾಮಯ್ಯ ಹೇಳಿದ್ದರು. ಚುನಾವಣೆ ಮುಗಿದ ಬಳಿಕ ಉಲ್ಟಾ ಹೊಡೆದಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ನನ್ನ ಜತೆ ಮಾತನಾಡುವನೈತಿಕತೆ ಉಳಿದಿಲ್ಲ’ ಎಂದು ಕಿಡಿಕಾರಿದರು.

‘ಶಾಸಕರು ಕಾಂಗ್ರೆಸ್ ಬಿಟ್ಟು ಹೋಗಲಿ ಎಂಬ ಭಾವನೆಯಿಂದ ಹೀಗೆ ಮಾಡಿದ್ದಾರೆ. ಬಿಜೆಪಿಯವರು ಮಾಡಿದ್ದ ಕರೆಯನ್ನು ಟ್ಯಾಪ್ ಮಾಡಿಕೊಟ್ಟಾಗ ಬಹುಮಾನ ಕೊಡುತ್ತಾರೆ ಎಂದು ಕೊಂಡಿದ್ದೆ. ಆದರೆ ನನಗೆ ಶಿಕ್ಷೆ ಸಿಕ್ಕಿದೆ’ ಎಂದರು.

ಅತೃಪ್ತರೇ ಪಕ್ಷಕ್ಕೆ ಬನ್ನಿ: ಬಿಎಸ್‌ವೈ

‘ಸಚಿವ ಸ್ಥಾನ ಸಿಗದಿರುವ, ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರು ಪಕ್ಷಕ್ಕೆ ಬರುವುದಾದರೆ ಬರಲಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಮಂತ್ರಣ ನೀಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸರ್ಕಾರ ಬೀಳಿಸುವ ಯತ್ನಕ್ಕೆ ನಾವಂತೂ ಕೈ ಹಾಕುವುದಿಲ್ಲ. ಅತೃಪ್ತರು ಅವರಾಗಿಯೇ ಬಂದರೆ ಸರ್ಕಾರ ರಚಿಸಲು ಪಕ್ಷ ಸಿದ್ಧ’ ಎಂದು ಹೇಳಿದರು.

‘ಕಾಂಗ್ರೆಸ್–ಜೆಡಿಎಸ್‌ ನಾಯಕರು ಬೀದಿಯಲ್ಲಿ ಕಚ್ಚಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಾಯಕತ್ವದ ಬಗ್ಗೆ ಎರಡೂ ಪಕ್ಷಗಳ ಶಾಸಕರಲ್ಲಿ ವಿಶ್ವಾಸವೇ ಉಳಿದಿಲ್ಲ. 20ಕ್ಕೂ ಹೆಚ್ಚು ಶಾಸಕರು ಸರ್ಕಾರದ ಧೋರಣೆ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆ. ಸೂಕ್ತ ಸಮಯ ಹಾಗೂ ಸಂದರ್ಭಕ್ಕಾಗಿ ಅವರು ಕಾಯುತ್ತಿದ್ದಾರೆ. ಹೀಗಾಗಿ ಈ ಸರ್ಕಾರ ಅಸ್ಥಿರತೆಯ ಭಯದಲ್ಲೇ ಮುಂದುವರಿದಿದೆ’ ಎಂದು ಹೇಳಿದರು.

***

ಎಂಟು ತಿಂಗಳ ಬಳಿಕ ಸಂಪುಟ ಪುನರ್ ರಚನೆ ಆಗಲಿದೆ. ಸಚಿವ ಸ್ಥಾನದ ಆಕಾಂಕ್ಷಿಗಳು ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಬೇಕು.

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಪಕ್ಷ ತೊರೆಯುವ ಬಗ್ಗೆ ಈಗಲೇ ಏನೂ ಹೇಳುವುದಿಲ್ಲ. ಅಸಮಾಧಾನ ಹೊಂದಿರುವ ಶಾಸಕರು ಚರ್ಚಿಸಿದ್ದೇವೆ. ಕಾಲವೇ ಎಲ್ಲವನ್ನೂ ನಿರ್ಣಯಿಸುತ್ತದೆ.

- ಬಿ.ಸಿ. ಪಾಟೀಲ, ಹಿರೇಕೆರೂರ ಕ್ಷೇತ್ರದ ಕಾಂಗ್ರೆಸ್ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.