ಹುಬ್ಬಳ್ಳಿ: 'ಪಕ್ಷದಿಂದ ನಾನು ಹೊರ ಹೋದ ಮೇಲೆ ಅಲ್ಪಸಂಖ್ಯಾತರಿಗೆ ಮರ್ಯಾದೆ ಸಿಗುತ್ತದೆ ಎಂದು ಮೊದಲೇ ಹೇಳಿದ್ದೆ. ಈಗ ಯು.ಟಿ. ಖಾದರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರನ್ನಾಗಿ ಮಾಡಲಾಗಿದೆ. ಹುಲಿ ಶಿಕಾರಿಗೆ ಕುರಿ ಕಟ್ಟಿದರೆ ಆಗುವುದಿಲ್ಲ, ಹುಲಿಗೆ ಹುಲಿಯನ್ನೇ ತರಬೇಕಾಗುತ್ತದೆ' ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು 'ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಸಿದ್ದರಾಮಯ್ಯರನ್ನು ತೆಗೆದು ಹಾಕಿ ತನ್ವೀರ್ ಸೇಠ್ ಅವರನ್ನು ನೇಮಿಸಲಿ. ಡಿ.ಕೆ. ಶಿವಕುಮಾರ್ ಸ್ಥಾನಕ್ಕೆ ಯು.ಟಿ. ಖಾದರ್‌ನನ್ನು ನೇಮಿಸಿ' ಎಂದು ಸವಾಲು ಹಾಕಿದರು.
'ತಲೆ ಮೇಲಿರುವ ಟೊಪ್ಪಿಗೆ ನಿಮಗೆ, ಕಾಲಲ್ಲಿ ಹಾಕುವ ಚಪ್ಪಲಿ ನಮಗೆ ಎಂದು ಕಾಂಗ್ರೆಸ್ ನಾಯಕರು ಜನರ ಕಣ್ಣಿಗೆ ಮಣ್ಣು ಎರೆಚುವ ತಂತ್ರ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಇಷ್ಟು ದಿನ ಸ್ಥಾನಮಾನ ಕೊಡದವರು ನಾನು ಪಕ್ಷದಿಂದ ಹೊರಹೋಗುತ್ತೇನೆ ಎಂದಾಗ ಕೊಡುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಲಿದೆ' ಎಂದರು.
ವಾಪಸ್ ಹೋಗಲ್ಲ:
ವಿಧಾನಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗದ ಕಾರಣ ಆಕ್ರೋಶಗೊಂಡಿರುವ ಸಿ.ಎಂ.ಇಬ್ರಾಹಿಂ ಅವರು 'ನಾನು ಬಡವ, ನನ್ನ ಬಳಿ ಹಣವಿಲ್ಲ. ಮರಳಿ ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೂ ಇಲ್ಲ' ಎಂದು ಭಾವುಕರಾದರು.
'ನನ್ನನ್ನು ನೀವೇ ಬೆಳೆಸಿದ್ದೀರಿ. ಇನ್ನು ಮುಂದೆಯೂ ನೀವೇ ಕೈ ಹಿಡಿದು ನಡೆಸಬೇಕು. ಮುಂದಿನ ದಾರಿ ಏನಾಗುತ್ತದೆಯೋ ನೋಡೊಣ. ನನ್ನ ಶಾಪ ಭಾರಿ ಕೆಟ್ಟದ್ದು, ಇವಾಗ ಅವರಿಗೆ ತಟ್ಟಿದೆ. ನಾನು ವಿಷಕಂಠನಂತೆ, ಇಲ್ಲಿಯವರೆಗೆ ಎಲ್ಲವನ್ನೂ ನುಂಗಿಕೊಂಡಿದ್ದೆ' ಎಂದರು.
'ನನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದ್ದೇ ನಾನು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆ ಸ್ಥಾನಕ್ಕೆ ನಾಳೆಯೇ ರಾಜೀನಾಮೆ ಕೊಡುತ್ತೇನೆ. ಅವರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡಲಿ; ಆಗ ಯಾರು ಗೆಲ್ಲುತ್ತಾರೆ ನೋಡೊಣ' ಎಂದು ಸವಾಲು ಹಾಕಿದರು.
'ಡಿ.ಕೆ. ಶಿವಕುಮಾರ್ ಬಹಳ ದೊಡ್ಡವರು. ನನ್ನಂತವನನ್ನು ಕರೆದು ಯಾಕೆ ಮಾತನಾಡಿಸುತ್ತಾರೆ' ಎಂದು ಬೇಸರ ವ್ಯಕ್ತಪಡಿಸಿದ ಇಬ್ರಾಹಿಂ , 'ಆರು ತಿಂಗಳ ಹಿಂದೆ ಎಲ್ಲವೂ ಸರಿ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದರು. ಆದರೆ, ಈಗ ಏನೂ ಆಗಿಲ್ಲ. ಎಸ್.ಆರ್. ಪಾಟೀಲ ಅವರನ್ನು ಭೇಟಿಯಾಗುವೆ. ಮುಂದೆ ಏನಾಗುತ್ತದೆಯೋ ಕಾದು ನೋಡಬೇಕಾಗಿದೆ' ಎಂದರು.
'ನಮ್ಮ ಜೊತೆ ಯಾರು ಬರುತ್ತಾರೊ ಅವರನ್ನೆಲ್ಲಾ ಕರೆದುಕೊಂಡು ಹೋಗುವೆ. ಉತ್ತರ ಕರ್ನಾಟಕದಲ್ಲಿ ಅಲ್ಪ ಸಂಖ್ಯಾತ ಲಿಂಗಾಯತರು, ಮೈಸೂರು ಭಾಗದಲ್ಲಿ ಗೌಡ ಅಲ್ಪಸಂಖ್ಯಾತರು ಮಾಡುತ್ತೇನೆ. ಹಿಂದೆ ಅವರು ಮಾಡಿದ್ದರಲ್ಲ?' ಎಂದು ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.