ADVERTISEMENT

ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪ– ಕಾಂಗ್ರೆಸ್‌ ದೂರು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 22:00 IST
Last Updated 20 ಫೆಬ್ರುವರಿ 2023, 22:00 IST
   

ಬೆಂಗಳೂರು: ‘ರಾಜ್ಯ ಬಿಜೆಪಿ ಸರ್ಕಾರ ‘ಚಿಲುಮೆ’ ಸಂಸ್ಥೆ ಮೂಲಕ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ಮಾಡಿದ ಬಳಿಕ ಈಗ ಬೇರೆ ಕ್ಷೇತ್ರಗಳಲ್ಲಿಯೂ ಅಕ್ರಮಕ್ಕೆ ಮುಂದಾಗಿದೆ. ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದೇವೆ’ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಆನ್‌ಲೈನ್ ಮೂಲಕ 6,670 ಮತದಾರರ ಹೆಸರನ್ನು, ಆ ಮತದಾರರ ಗಮನಕ್ಕೆ ಬಾರದೆ ಹೆಸರು ಕೈ ಬಿಡುವಂತೆ ಮತ್ತೊಬ್ಬರು ಅರ್ಜಿ ಹಾಕಿದ್ದಾರೆ’ ಎಂದರು.

‘ಈ ವಿಚಾರವಾಗಿ ನಮ್ಮ ಪಕ್ಷದ ಬೂತ್ ಏಜೆಂಟರು ಪರಿಶೀಲಿಸಿದಾಗ, ಅರ್ಜಿಯಲ್ಲಿ ‘ನಾನು ಸ್ಥಳೀಯನಲ್ಲ, ನನ್ನ ನಿವಾಸ ಬೇರೆ ರಾಜ್ಯದಲ್ಲಿದೆ’ ಎಂದು ಹೇಳಿರುವುದು ಸ್ಪಷ್ಟವಾಗಿದೆ. ಆ ಮೂಲಕ ವ್ಯವಸ್ಥಿತವಾಗಿ, ಅಕ್ರಮವಾಗಿ ಮತದಾರರ ಹೆಸರು ಕೈ ಬಿಡಲು ಷಡ್ಯಂತ್ರ ರೂಪಿಸಲಾಗಿದೆ’ ಎಂದು ದೂರಿದರು.

ADVERTISEMENT

‘ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ದೂರು ನೀಡಲಾಗಿವೆ. ಕಾನೂನಿನ ಪ್ರಕಾರ ಒಂದು ಮೊಬೈಲ್ ಸಂಖ್ಯೆಯಿಂದ ಗರಿಷ್ಠ ಐದು ಮಂದಿಯ ಹೆಸರು ಕೈಬಿಡಲು ಅರ್ಜಿ ಹಾಕಬಹುದು. ಆದರೆ, ಆಳಂದದಲ್ಲಿ ಒಂದು ಬೂತ್‌ನಲ್ಲಿ ಒಂದು ಮೊಬೈಲ್ ಸಂಖ್ಯೆಯಲ್ಲಿ 70 ಮತದಾರರ ಹೆಸರು ರದ್ದುಪಡಿಸಲು ಅರ್ಜಿ ಹಾಕಲಾಗಿದೆ. ಒಬ್ಬೊಬ್ಬರು 50-70 ಮತದಾರರ ಹೆಸರು ರದ್ದು ಮಾಡಲು ಅರ್ಜಿ ಹಾಕಲು ಹೇಗೆ ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

ಮಾಜಿ ಶಾಸಕ ಬಿ.ಆರ್ ಪಾಟೀಲ ಮಾತನಾಡಿ, ‘ನನ್ನ ಕ್ಷೇತ್ರದಲ್ಲಿ (ಆಳಂದ)ಆರು ಸಾವಿರಕ್ಕೂ ಹೆಚ್ಚು ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ರದ್ದು ಮಾಡುವಂತೆ ಮನವಿ ಬಂದಿದ್ದು, ಬಹುತೇಕ ಮತದಾರರು ತಾವುಗಳು ಅರ್ಜಿ ಹಾಕಿಲ್ಲ. ಅವರ ಬದಲಿಗೆ ಬೇರೆಯವರು ಹೆಸರು ರದ್ದು ಮಾಡುವಂತೆ ಅರ್ಜಿ ಹಾಕಿದ್ದಾರೆ. ಈ ಅರ್ಜಿ ಹಾಕಿರುವವರ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಆಂಧ್ರಪ್ರದೇಶ, ಉತ್ತರ ಪ್ರದೇಶ, ಬಿಹಾರ, ಬೇರೆ ರಾಜ್ಯ ಹಾಗೂ ಮಂಡ್ಯ ಮತ್ತು ಇತರ ಜಿಲ್ಲೆಯವರು ಮಾತನಾಡುತ್ತಾರೆ. ಈ ಬಗ್ಗೆ ತನಿಖೆ ಆಗಬೇಕು’ ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.