ADVERTISEMENT

ಟಿಕೆಟ್‌ ಹಂಚಿಕೆ ಕಸರತ್ತು ಚುರುಕು: ‘ಕೈ’ಹಿಡಿದು ಟಿಕೆಟ್‌ ಗಿಟ್ಟಿಸಲು ಜಿಗಿತ?

ಡಿಕೆಶಿ ಹೇಳಿಕೆಗೆ ಪೂರಕವಾಗಿ ರಾಜಕೀಯ ವಲಯದಲ್ಲಿ ಗುಸುಗುಸು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 23:30 IST
Last Updated 7 ಮಾರ್ಚ್ 2024, 23:30 IST
ಕಾಂಗ್ರೆಸ್, ಜೆಡಿಎಸ್, ಬಿಜೆಪಿ
ಕಾಂಗ್ರೆಸ್, ಜೆಡಿಎಸ್, ಬಿಜೆಪಿ   

ಬೆಂಗಳೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವಂತೆ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ ರಾಜ್ಯದ 28 ಕ್ಷೇತ್ರಗಳಿಗೆ ಟಿಕೆಟ್‌ ಹಂಚಿಕೆಯ ಕಸರತ್ತು ಚುರುಕುಗೊಳಿಸಿವೆ. ಈ ನಡುವೆ, ಪಕ್ಷದಿಂದ ಪಕ್ಷಕ್ಕೆ ಜಿಗಿಯಲು ಕೆಲವರು ಮುಂದಾಗಿರುವ ಗುಸುಗುಸು ಕೂಡ ಜೋರಾಗಿದೆ.

‘ಬಿಜೆಪಿಯಿಂದ ಅನೇಕ‌ ಜನ ನಮ್ಮ ಸಂಪರ್ಕದಲ್ಲಿದ್ದು, ಸೂಕ್ತ ಸಮಯದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಳ್ಳಲಿದ್ದಾರೆ’ ಎಂದು ಕೆಪಿಎಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿರುವ ಮಾತು ತೆರೆಮರೆಯಲ್ಲಿ ನಡೆಯುತ್ತಿರುವ ‘ಪಕ್ಷಾಂತರ’ ಸಿದ್ಧತೆಗೆ ಪುಷ್ಟಿ ನೀಡಿದೆ.

ರಾಜ್ಯದಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲಲೇಬೇಕೆಂಬ ಗುರಿ ಇಟ್ಟುಕೊಂಡಿರುವ ಕಾಂಗ್ರೆಸ್‌ ನಾಯಕರು, ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದಾರೆ. ಸಚಿವರು ಕಣಕ್ಕಿಳಿಯಲು ನಿರಾಕರಿಸುತ್ತಿರುವುದು ಈ ನಾಯಕರ ತಲೆನೋವು ಹೆಚ್ಚಿಸಿದೆ. ಹೀಗಾಗಿ, ಬಿಜೆಪಿಯಿಂದ ಜಿಗಿಯಬಹುದಾದ ಕಲಿಗಳ ಮೇಲೆ ಈ ನಾಯಕರ ದೃಷ್ಟಿ ಬಿದ್ದಿದೆ.

ADVERTISEMENT

ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಟಿಕೆಟ್‌ ನಿರೀಕ್ಷೆಯಲ್ಲಿರುವ ಮಾಜಿ ಸಚಿವ ಡಾ.ಕೆ. ಸುಧಾಕರ್, ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್‌ ಖಚಿತವಾದರೆ ಬಿಜೆಪಿ ತ್ಯಜಿಸಿ ‘ಕೈ’ ಹಿಡಿಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಈ ಸಚಿವರ ಮಾತೃಪಕ್ಷ ಸೇರ್ಪಡೆಯ ಇಂಗಿತಕ್ಕೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಈಗಾಗಲೇ ಹಸಿರು ನಿಶಾನೆ ತೋರಿಸಿದ್ದಾರೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ದಟ್ಟವಾಗಿದೆ. ಬೆಂಗಳೂರು ಉತ್ತರದಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ. ಮಾಜಿ ಸಚಿವ ಪಕ್ಷಕ್ಕೆ ಮರಳಿದರೆ ಬಿಜೆಪಿಯ ಈ ಭದ್ರ ನೆಲೆಯನ್ನು ಅಲುಗಾಡಿಸಬಹುದೆಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದು. 

ಇನ್ನು, ಇದೇ ಜೂನ್‌ 17ಕ್ಕೆ ವಿಧಾನ ಪರಿಷತ್‌ ಸದಸ್ಯತ್ವ ಅವಧಿ ಮುಗಿಯಲಿರುವ ಬಿಜೆಪಿಯ ತೇಜಸ್ವಿನಿ ಗೌಡ ಅವರು ‘ಕೈ’ ಟಿಕೆಟ್‌ ಸಿಕ್ಕಿದರೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕಿಳಿಯಲು ಮನಸ್ಸು ಮಾಡಿದ್ದಾರೆ. ಹಾಲಿ ಸಂಸದ ಪ್ರತಾಪ್‌ ಸಿಂಹ ಅವರಿಗೆ ಈ ಬಾರಿ ಟಿಕೆಟ್‌ ಕೈತಪ್ಪಲಿದೆ ಎನ್ನುವುದು ಬಿಜೆಪಿಯ ಆಂತರಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆ. ಪ್ರತಾಪ್‌ ಸಿಂಹ ಅವರಿಗೆ ಟಿಕೆಟ್‌ ನಿರಾಕರಿಸುವುದಾದರೆ ತಮ್ಮನ್ನು ಪರಿಗಣಿಸುವಂತೆ ತೇಜಸ್ವಿನಿ ಗೌಡ ಈಗಾಗಲೇ ಪಕ್ಷದ ಹಿರಿಯ ನಾಯಕರಿಗೆ ಮನವಿ ಮಾಡಿದ್ದಾರೆ. ಆದರೆ, ಅವರ ಬಯಕೆಗೆ ನಾಯಕರಿಂದ ಸಕಾರಾತ್ಮಕ ಸ್ಪಂದನ ಸಿಕ್ಕಿಲ್ಲ. ಹೀಗಾಗಿ, ಟಿಕೆಟ್‌ ನೀಡಿದರೆ ಕಣಕ್ಕಿಳಿಯಲು ಸಿದ್ಧವೆಂದು ಕಾಂಗ್ರೆಸ್‌ ನಾಯಕರಿಗೆ ತೇಜಸ್ವಿನಿ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

ಇನ್ನು, ಬಿಜೆಪಿಯ ಕೆ. ಜಯಪ್ರಕಾಶ ಹೆಗ್ಡೆ ಅವರಿಗೆ ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್‌ ನೀಡಲು ಕಾಂಗ್ರೆಸ್‌ ಮುಂದಾಗಿದೆ. ಈ ಟಿಕೆಟ್‌ಗೆ ವಕೀಲ ಸುಧೀರ್‌ ಮುರೊಳ್ಳಿ ಅವರು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಆದರೆ, ‘ಕಮಲ’ ಪಕ್ಷ ಬಿಟ್ಟು ಬಂದರೆ ಹೆಗ್ಡೆ ಅವರ ‘ಕೈ’ ಮೇಲಾಗುವ ಸಾಧ್ಯತೆಯೇ ಹೆಚ್ಚು ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.