ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಗುರುವಾರ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆಯಿತು.
ಬಜೆಟ್ ಮೇಲಿನ ಚರ್ಚೆ ವೇಳೆ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ‘ಈ ಯೋಜನೆಯ ಅನುಷ್ಠಾನಕ್ಕೆ ಪ್ರತಿ ವರ್ಷ ₹10 ಸಾವಿರ ಕೋಟಿ ಮೀಸಲಿಡಲಾಗುತ್ತದೆ ಎಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಆದರೆ, ನುಡಿದಂತೆ ನಡೆದಿಲ್ಲ’ ಎಂದು ಟೀಕಿಸಿದರು. ಇದನ್ನು ಕಾಂಗ್ರೆಸ್ ಸದಸ್ಯರು ಅಲ್ಲಗಳೆದರು. ‘ಈ ಬಗ್ಗೆ ಪಕ್ಷದ ಪ್ರಣಾಳಿಕೆಯಲ್ಲೇ ಇದೆ’ ಎಂದು ಬಿಜೆಪಿಯ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಹೇಳಿದರು.
‘ಪ್ರಣಾಳಿಕೆಯ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ಒಂದು ಪುಸ್ತಕದಲ್ಲಿ ಮುದ್ರಣ ದೋಷದಿಂದಾಗಿ ಈ ಅಂಶ ಬಂದಿದೆ. ಅದನ್ನು ಸರಿಪಡಿಸಿದ್ದೇವೆ’ ಎಂದು ಕಾಂಗ್ರೆಸ್‌ನ ಎಂ.ಬಿ.ಪಾಟೀಲ ಸಮಜಾಯಿಷಿ ನೀಡಿದರು. ‘ಜನರಿಗೆ ಭರವಸೆ ನೀಡಲು ಒಂದು ಪ್ರಣಾಳಿಕೆ ಹಾಗೂ ಅನುಷ್ಠಾನಕ್ಕೆ ಇನ್ನೊಂದು ಪ್ರಣಾಳಿಕೆ ಸಿದ್ಧಪಡಿಸಿಕೊಂಡಿದ್ದೀರಾ. ಪದೇ ಪದೇ ಬಣ್ಣ ಬದಲಿಸಬೇಡಿ’ ಎಂದು ಬಿಜೆಪಿ ಸದಸ್ಯರು ಛೇಡಿಸಿದರು.
ಯಾರು ಏನೆಂದರು?
ಈ ಯೋಜನೆಗೆ ₹10 ಸಾವಿರ ಕೋಟಿ ಮೀಸಲಿಡುತ್ತೇವೆ ಎಂದು ಹೇಳಿಲ್ಲ. ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಐದು ವರ್ಷಗಳಲ್ಲಿ ₹50 ಸಾವಿರ ಕೋಟಿ ನೀಡುತ್ತೇವೆ ಎಂದು ಹೇಳಿದ್ದೆವು. ಐದು ವರ್ಷಗಳಲ್ಲಿ ₹58 ಸಾವಿರ ಕೋಟಿ ಬಿಡುಗಡೆ ಮಾಡಿದ್ದೇವೆ. ₹47 ಸಾವಿರ ಕೋಟಿಯ ಕೆಲಸ ಆಗಿದೆ. ಬಿಜೆಪಿ ಅವಧಿಯಲ್ಲಿ ನೀರಾವರಿಗೆ ₹18 ಸಾವಿರ ಕೋಟಿಯಷ್ಟೇ ಖರ್ಚು ಮಾಡಲಾಗಿತ್ತು.
ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ
ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ₹47 ಸಾವಿರ ಕೋಟಿ ಸಾಕು ಎಂದು ನಮ್ಮ ಅವಧಿಯಲ್ಲಿ ಅಂದಾಜಿಸಲಾಗಿತ್ತು. ಆ ಬಳಿಕ ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕೆ ಒಪ್ಪಿಗೆ ಸಿಕ್ಕಿತ್ತು. ಇದರ ಅನುಷ್ಠಾನಕ್ಕೆ ₹50 ಸಾವಿರ ಕೋಟಿ ಮೀಸಲಿಡುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದರು.
ಬಸವರಾಜ ಬೊಮ್ಮಾಯಿ, ಬಿಜೆಪಿ ಶಾಸಕ
***
ನಮ್ಮ ಪ್ರಣಾಳಿಕೆಯ ಘೋಷಣೆಯಂತೆ ನಡೆದುಕೊಂಡಿದ್ದೇವೆ. ನೀರಾವರಿ ಯೋಜನೆಗಳಿಗೆ ₹47,500 ಕೋಟಿ ಖರ್ಚು ಮಾಡಿದ್ದೇವೆ.
ಎಂ.ಬಿ.ಪಾಟೀಲ, ಮಾಜಿ ಜಲಸಂಪನ್ಮೂಲ ಸಚಿವ, ಕಾಂಗ್ರೆಸ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.