ADVERTISEMENT

ಕಾಂಗ್ರೆಸ್‌ ಪಟ್ಟು– ಮಾತಿನ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 19:35 IST
Last Updated 15 ಮಾರ್ಚ್ 2021, 19:35 IST
ವಿಧಾನ ಪರಿಷತ್‌–ಸಾಂದರ್ಭಿಕ ಚಿತ್ರ
ವಿಧಾನ ಪರಿಷತ್‌–ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಅಪರಾಧಿ ಸ್ಥಾನದಲ್ಲಿರುವ ಸಚಿವರಿಂದ ಉತ್ತರ ಬೇಡ’ ಎಂದು ಕಾಂಗ್ರೆಸ್‌ ಸದಸ್ಯರು ವಿಧಾನ ಪರಿಷತ್‌ನಲ್ಲಿ ಸೋಮವಾರ ಪಟ್ಟು ಹಿಡಿದ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ವಾಗ್ಯುದ್ಧವೇ ನಡೆಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ನ ನಾರಾಯಣ ಸ್ವಾಮಿ, ಆರೋಗ್ಯ ಸಚಿವ ಸುಧಾಕರ್‌ಗೆ ಪ್ರಶ್ನೆ ಕೇಳಬೇಕಿತ್ತು. ಆದರೆ, ಅವರು, ‘ಸಭಾಪತಿಗಳೇ, ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿರುವ ಸಚಿವರಿಂದ ನಮಗೆ ಉತ್ತರ ನಮಗೆ ಬೇಡ’ ಎಂದರು. ಆಗ ಎದ್ದು ನಿಂತ ಸಚಿವ ನಾರಾಯಣ ಗೌಡ, ‘ಎಷ್ಟು ಸಾರಿ ಹೇಳ್ತೀರಾ ಅದನ್ನೇ’ ಎಂದು ಗರಂ ಆದರು. ಅವರಿಗೆ ಸಚಿವ ಬಿ.ಸಿ. ಪಾಟೀಲ ಕೂಡಾ ಸಾಥ್ ನೀಡಿದರು.

ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಆ ವಿಷಯ ಕಡತಕ್ಕೆ ಹೋಗಬಾರದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು.

ADVERTISEMENT

ಮಧ್ಯೆಪ್ರವೇಶಿಸಿದ ಬಿಜೆಪಿಯ ಎನ್.ರ‌ವಿಕುಮಾರ್, ‘ಸೋನಿಯಾ ಹಾಗೂ ರಾಹುಲ್ ಗಾಂಧಿ ತಡೆಯಾಜ್ಞೆ ತಂದಿಲ್ವಾ’ ಎಂದು ಕೆಣಕಿದರು. ‘ಅವರೇನು ಬಟ್ಟೆ ಬಿಚ್ಚಿದ್ದಕ್ಕೆ ತಡೆಯಾಜ್ಞೆ ತಗೊಂಡಿದ್ದಾರೆಯೇ’ ಎಂದು ನಾರಾಯಣ ಸ್ವಾಮಿ ಪ್ರಶ್ನಿಸಿದರು. ಮತ್ತೆ ಕಾಂಗ್ರೆಸ್– ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆಯಿತು.

‘ಮಾನ ಮರ್ಯಾದೆ ಇಲ್ವಾ. ನಾಚಿಕೆ ಇಲ್ವಾ, ಹೋಗ್ರಿ ಆಚೆ’ ಎಂದು ತಡೆಯಾಜ್ಞೆ ತಂದ ಸಚಿವರನ್ನು ಉದ್ದೇಶಿಸಿ ನಾರಾಯಣ ಸ್ವಾಮಿ ಗುಡುಗಿದರು. ಆಗ ಸಚಿವರಾದ ಶಿವರಾಮ ಹೆಬ್ಬಾರ್, ಸುಧಾಕರ್, ನಾರಾಯಣ ಗೌಡ, ಬಿ.ಸಿ. ಪಾಟೀಲ ಎದ್ದು ನಿಂತು ಸಮಜಾಯಿಷಿ ನೀಡಲು ಮುಂದಾದರು.

‘ಪ್ರಶ್ನೆ ಕೇಳುವುದು ಸದಸ್ಯರಿಗೆ ಬಿಟ್ಟಿದ್ದು. ಅವರು ಪ್ರಶ್ನೆ ಕೇಳುವುದಿಲ್ಲ ಎಂದಾದರೆ ಮುಂದಿನ ಪ್ರಶ್ನೆಗೆ ಹೋಗುತ್ತೇನೆ’ ಎಂದು ಸಭಾಪತಿ ಹೇಳಿದಾಗ ಗದ್ದಲ ಕಡಿಮೆ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.