ADVERTISEMENT

ಕೈ–ಕಮಲ: ನಾಯಕತ್ವ ಬದಲಾವಣೆ ಸದ್ದು

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 4:44 IST
Last Updated 30 ಜೂನ್ 2024, 4:44 IST
ಕಾಂಗ್ರೆಸ್‌, ಬಿಜೆಪಿ
ಕಾಂಗ್ರೆಸ್‌, ಬಿಜೆಪಿ    

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಿತ್ತುಕೊಳ್ಳಬೇಕೆಂಬ ಕಾರಣಕ್ಕೆ ಸಮುದಾಯವಾರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬ ಕೂಗು ಎಬ್ಬಿಸಲಾಗಿದೆ ಎಂಬ ಚರ್ಚೆ ಕಾಂಗ್ರೆಸ್‌ನಲ್ಲಿ ಬಲವಾಗುತ್ತಿದೆ. 

‘ಒಬ್ಬರಿಗೆ ಒಂದೇ ಹುದ್ದೆ’ ಎಂಬುದು ಕಾಂಗ್ರೆಸ್‌ ನೀತಿ. ಆದರೆ, ರಾಜ್ಯದಲ್ಲಿ ಪಕ್ಷದ ಹೊಣೆಗಾರಿಕೆ ಹೊತ್ತಿರುವವರೇ ಈ ನೀತಿಯನ್ನು ಒಡೆದು ಆಳುತ್ತಿದ್ದಾರೆ. ಇದು ಸರಿಯಲ್ಲ. ಹೀಗಾಗಿ, ಡಿ.ಕೆ. ಶಿವಕುಮಾರ್‌ ಅವರು ಉಪ ಮುಖ್ಯಮಂತ್ರಿ ಹುದ್ದೆ ಇಲ್ಲವೇ ಪಕ್ಷದ ಅಧ್ಯಕ್ಷರ ಹುದ್ದೆ ಯಾವುದಾದರು ಒಂದರಲ್ಲಿ ಮಾತ್ರ ಮುಂದುವರಿಯಬೇಕು ಎನ್ನುವುದು ಸಿದ್ದರಾಮಯ್ಯ ಆಪ್ತ ಬಣದ ಸಚಿವರು, ಶಾಸಕರ ಪ್ರತಿಪಾದನೆ. ಈ ಪೈಕಿ ಕೆಲವರು, ಹೈಕಮಾಂಡ್‌ ನಾಯಕರ ಮೇಲೆ ಒತ್ತಡವನ್ನೂ ಹೇರುತ್ತಿದ್ದಾರೆ ಎನ್ನಲಾಗಿದೆ.

ಉಪ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಡುತ್ತಿರುವ ವರ್ಗ, ಕೆಪಿಸಿಸಿ ಅಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿರುವುದೇ ಕಾರಣ ಎಂಬ ಊಹಾಪೋಹಗಳೂ ಇವೆ. ಲೋಕಸಭೆ ಚುನಾವಣೆಗೆ ಮೊದಲು ಹೆಚ್ಚುವರಿ ಉಪ ಮುಖ್ಯಮಂತ್ರಿ ಬೇಕೇಬೇಕೆಂಬ ಆಗ್ರಹದ ಹಿಂದೆ ಸಮುದಾಯಗಳನ್ನು ಸೆಳೆಯುವ ಲೆಕ್ಕಾಚಾರಗಳಿದ್ದವು. ಆದರೆ, ಚುನಾವಣೆ ಮುಗಿದ ಮೇಲೂ ಹೀಗೆ ಧ್ವನಿ ಎತ್ತಿದವರ ಹಿಂದೆ ಬೇರೆಯದೇ ಲೆಕ್ಕಾಚಾರಗಳಿವೆ ಎಂದೂ ವಿಶ್ಲೇಷಿಸಲಾಗಿದೆ.

ADVERTISEMENT

ಲೋಕಸಭೆ ಚುನಾವಣೆಗೆ ಮೊದಲೇ ಮೂರು ಉಪ ಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸ ಬೇಕೆಂದು ಪಟ್ಟು ಹಿಡಿದಿದ್ದ ಸಹಕಾರ ಸಚಿವ ಕೆ.ಎನ್‌. ರಾಜಣ್ಣ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಬೇಕು ಎಂದು ಪರೋಕ್ಷವಾಗಿ ಆಗ್ರಹಿಸಿದ್ದಾರೆ. ಅಲ್ಲದೆ, ‘ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡುವುದಾದರೆ ನಾನೂ ಕೂಡ ಆಕಾಂಕ್ಷಿ. ಅದಕ್ಕಾಗಿ ಸಚಿವ ಸ್ಥಾನ ಬಿಟ್ಟು ಕೆಲಸ ಮಾಡಲು ಸಿದ್ಧ’ ಎಂದಿದ್ದಾರೆ. ‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹೆಸರು ಘೋಷಿಸುವ ಸಂದರ್ಭದಲ್ಲಿಯೇ ಪಕ್ಷದ ವರಿಷ್ಠರು, ಲೋಕಸಭೆ ಚುನಾವಣೆ ಮುಗಿಯುವರೆಗೆ ಕೆಪಿಸಿಸಿ ಅಧ್ಯಕ್ಷರು ಮುಂದುವರಿಯಲಿದ್ದಾರೆ ಎಂದಿದ್ದರು’ ಎಂದೂ ರಾಜಣ್ಣ ನೆನಪಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹೀನಾಯ ಸೋಲುಂಡಿದೆ. ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗ ನಾಯಕರೆಂದು ಬಿಂಬಿಸಿಕೊಂಡರೂ, ಆ ಸಮುದಾಯದ ಮತಗಳು ಪಕ್ಷದ ಕಡೆಗೆ ವಾಲಲಿಲ್ಲ.‌ ತಮ್ಮನನ್ನೇ ಗೆಲ್ಲಿಸಿಕೊಳ್ಳಲು ಡಿ.ಕೆ. ಶಿವಕುಮಾರ್‌ ವಿಫಲರಾಗಿದ್ದಾರೆ. ಆರ್ಥಿಕ ಸವಾಲಿನ ನಡುವೆಯೂ ‘ಗ್ಯಾರಂಟಿ’ ಯೋಜನೆಗಳನ್ನು ಸರ್ಕಾರ ಅನುಷ್ಠಾನ ಮಾಡಿದ್ದು, ಲಕ್ಷಾಂತರ ಕುಟುಂಬಗಳಿಗೆ ತಲುಪಿದೆ. ಹಾಗಿದ್ದರೂ, ಚಾಮರಾಜನಗರ ಬಿಟ್ಟರೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಗೆಲುವು ಸಿಕ್ಕಿಲ್ಲ. ಈ ಯೋಜನೆ ಫಲ ನೀಡಿರುವ ವಿಚಾರವನ್ನು ಮನೆ ಮನೆ ತಲುಪಿಸುವಲ್ಲಿ ಪಕ್ಷ ವಿಫಲವಾಗಿದೆ. ಕೆಪಿಸಿಸಿ ಅಧ್ಯಕ್ಷರೂ ಮತ್ತು ಜಿಲ್ಲಾಧ್ಯಕ್ಷರ (ಡಿಸಿಸಿ) ಮಧ್ಯೆ ಸಮನ್ವಯ ಇರದೇ, ಪಕ್ಷವನ್ನು ಸಮರ್ಥವಾಗಿ ಮುನ್ನಡೆಸದೆ ಇರುವುದೇ ಕಾರಣ. ಈ ಕಾರಣಕ್ಕೆ ಅಧ್ಯಕ್ಷರನ್ನು ಬದಲಿಸಬೇಕು ಎಂಬ ವಾದವನ್ನು ಒಂದು ಬಣ ಹೈಕಮಾಂಡ್ ಮುಂದೆ ಇಟ್ಟಿದೆ ಎಂದೂ ಪಕ್ಷದ ಮೂಲಗಳು ಹೇಳಿವೆ.

ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೂಲಕ ರಾಜ್ಯ ಕಾಂಗ್ರೆಸ್‌ನ್ನು ಹಿಡಿದಲ್ಲಿಟ್ಟುಕೊಂಡಿರುವ ಡಿ.ಕೆ ಶಿವಕುಮಾರ್, ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದರಷ್ಟೆ ‘ಅಧಿಕಾರ ಹಂಚಿಕೆ’ ಸೂತ್ರದಡಿ ಆ ಗಾದಿಗೇರಲು ಸಾಧ್ಯ ಎನ್ನುವುದು ಅವರಿಗೂ ಗೊತ್ತಿದೆ. ಅದಕ್ಕೆ ಪೂರಕವಾಗಿ ಧ್ವನಿ ಎತ್ತಿರುವ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ, ‘ಡಿ.ಕೆ. ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಿ, ನಂತರ ಒಂದು ಡಜನ್ ಉಪ ಮುಖ್ಯಮಂತ್ರಿ ಮಾಡಲಿ. ಕೆಪಿಸಿಸಿ ಅಧ್ಯಕ್ಷರನ್ನು ಮುಖ್ಯಮಂತ್ರಿ ಮಾಡುವುದು ಪದ್ಧತಿ’ ಎಂದಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರನ್ನು ಬದಲಿಸುವುದಾದರೆ, ಆ ಸ್ಥಾನವನ್ನು ತಮ್ಮ ಸಮುದಾಯಕ್ಕೆ ನೀಡಬೇಕೆಂಬ ದಾಳವನ್ನು ಲಿಂಗಾಯತ ನಾಯಕರು ಉರುಳಿಸಿದ್ದಾರೆ. ಸಚಿವರಾದ ಈಶ್ವರ ಖಂಡ್ರೆ, ಎಂ.ಬಿ. ಪಾಟೀಲ ಅವರ ಹೆಸರನ್ನೂ ಮುನ್ನಲೆಗೆ ಬಿಟ್ಟಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ವೇಳೆಗೆ ಕಾಂಗ್ರೆಸ್‌ ರಾಜ್ಯ ಘಟಕದಲ್ಲಿ ಬದಲಾವಣೆಯ ತುರ್ತಿನ ಬಗ್ಗೆಯೂ ಮಾತುಗಳು ಎದ್ದಿವೆ.

ಬಿಜೆಪಿ: ನಾಯಕತ್ವ ಬದಲಾವಣೆ ಗುಸುಗುಸು

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಬಾಹುಳ್ಯದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ನಿರೀಕ್ಷಿತ ಸಂಖ್ಯೆಯಲ್ಲಿ ಗೆಲುವು ಸಾಧಿಸದಿರುವ ಕಾರಣಕ್ಕಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಹೊಣೆ ಮಾಡಿ, ನಾಯಕತ್ವ ಬದಲಾವಣೆಗೆ ಮಾಡಬಹುದು ಎಂಬ ಚರ್ಚೆ ಕಮಲ ಪಾಳಯದಲ್ಲಿ ಕಾವು ಪಡೆಯುತ್ತಿದೆ.

2019ರ ಚುನಾವಣೆಯ ಫಲಿತಾಂಶದಂತೆ 25 ಸ್ಥಾನ ಗೆಲ್ಲಿಸುವ ಗುರಿಯನ್ನು ವರಿಷ್ಠರು ನೀಡಿದ್ದರಾದರೂ, 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಬಿಜೆಪಿಯಲ್ಲಿತ್ತು. ಆದರೆ, ಲಿಂಗಾಯತ ಮತದಾರರು ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲೇ ಬಿಜೆಪಿ ಸೋತಿರುವುದರಿಂದ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಈ ಮಧ್ಯೆಯೇ ಸಕ್ರಿಯವಾಗಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಬಣ, ಲೋಕಸಭಾ ಚುನಾವಣೆಯಲ್ಲಿನ ಹಿನ್ನಡೆಯನ್ನು ವಿಜಯೇಂದ್ರ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ತಲೆಗೆ ಕಟ್ಟಲು ಪ್ರಯತ್ನ ನಡೆಸುತ್ತಿದೆ ಎನ್ನುತ್ತಾರೆ ಬಿಜೆಪಿಯ ಕೆಲವು ನಾಯಕರು.

‘ಚುನಾವಣಾ ಫಲಿತಾಂಶದ ಕುರಿತು ಚರ್ಚಿಸಲು ವಿಜಯೇಂದ್ರ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಹಿನ್ನ ಡೆಯ ಬಗ್ಗೆ ಪ್ರಸ್ತಾಪಿಸಿ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಫಲಿತಾಂಶವನ್ನು ಸಮರ್ಥಿಸಿಕೊಳ್ಳಲು ವಿಜಯೇಂದ್ರ ಪ್ರಯತ್ನಿಸಿದ್ದಾರೆ. ಆದರೆ, ಅದನ್ನು ಒಪ್ಪದ ಅಮಿತ್‌ ಶಾ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ’ ಎಂಬ ಮಾತು ಬಿಜೆಪಿಯಲ್ಲಿ ಕೇಳಿಬರುತ್ತಿದೆ.

ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಸೋಲಿನ ಕುರಿತು ಅಮಿತ್‌ ಶಾ ಪ್ರಸ್ತಾಪಿಸಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ಅವರ ಬೆಂಬಲಿಗರೇ ಬಂಡಾಯ ಎದ್ದು, ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ್ದಾರೆ ಎಂಬ ವರದಿಗಳು ತಮಗೆ ತಲುಪಿವೆ ಎಂಬ ಮಾಹಿತಿಯನ್ನು ವಿಜಯೇಂದ್ರ ಜತೆ ಹಂಚಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕದ ಐದು ಕ್ಷೇತ್ರಗಳಲ್ಲಿ ಲಿಂಗಾಯತರ ಪ್ರಾಬಲ್ಯವಿದ್ದು, ಬಿಜೆಪಿ ಸರ್ಕಾರ ಇದ್ದಾಗ ಈ ಭಾಗಕ್ಕೆ ಆದ್ಯತೆಯನ್ನೂ ನೀಡಿತ್ತು. ಈ ಎಲ್ಲ ಕ್ಷೇತ್ರಗಳನ್ನೂ ಕಾಂಗ್ರೆಸ್‌ ಕಿತ್ತುಕೊಂಡಿದ್ದು, ಪಕ್ಷಕ್ಕೆ ಹಿನ್ನಡೆಯಾಗಿದೆ. ಇವೆಲ್ಲವನ್ನೂ ಗಮನಿಸಿದರೆ, ಲಿಂಗಾಯತ ಮತದಾ ರರ ಮೇಲೆ ಬಿಜೆಪಿ ಹಿಡಿತ ಕಳೆದುಕೊಂಡಿರುವುದು ಕಾಣಿಸುತ್ತಿದೆ ಎಂಬರ್ಥದಲ್ಲೂ ಮಾತನಾಡಿದ್ದಾರೆ ಎಂಬ ಚರ್ಚೆಯೂ ಜೋರಾಗಿದೆ.

ತುಮಕೂರಿನಲ್ಲಿ ಕೂಡ ಯಡಿಯೂರಪ್ಪ ಬೆಂಬಲಿಗ ರೆಂದು ಗುರುತಿಸಿಕೊಂಡವರು ವಿ.ಸೋಮಣ್ಣ ಪರ ಕೆಲಸ ಮಾಡಲಿಲ್ಲ. ಸಂಘಪರಿವಾರದವರ ಬೆಂಬಲ ಮತ್ತು ಜೆಡಿಎಸ್‌ನ ಮತಗಳು ಪರಿವರ್ತನೆಯಿಂದ ಪಕ್ಷ ಗೆದ್ದಿರುವ ಮಾಹಿತಿಯನ್ನು ಅಮಿತ್‌ ಶಾ ಪ್ರಸ್ತಾಪಿಸಿದರು ಎಂದೂ ಪಕ್ಷದ ಮೂಲಗಳು ಹೇಳಿವೆ.

ಒಕ್ಕಲಿಗ ಮತದಾರರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದ್ದರೂ, ಅದಕ್ಕೆ ಆರ್‌. ಅಶೋಕ ಕೊಡುಗೆ ಇಲ್ಲ ಎಂಬ ವಿಶ್ಲೇಷಣೆ ಬಿಜೆಪಿಯೊಳಗೆ ನಡೆದಿದೆ. ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡ ಕಾರಣದಿಂದ ಎಚ್.ಡಿ. ಕುಮಾರ ಸ್ವಾಮಿ ಅವರ ಪ್ರಭಾವದಿಂದ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎಂಬ ವಾದವನ್ನು ಪಕ್ಷದ ಹಲವರು ಮುಂದಿಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.