ಬೆಂಗಳೂರು: ಬಿಜೆಪಿ ವಿರುದ್ಧ ‘ಮಹಾ ಮೈತ್ರಿ ಕೂಟ’ ರಚಿಸಿ 2024ರ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿದು, ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ತರುವ ಗುರಿಯೊಂದಿಗೆ ಬಿಜೆಪಿ ವಿರೋಧಿಯಾದ 26 ಪಕ್ಷಗಳ 40ಕ್ಕೂ ಹೆಚ್ಚು ಪ್ರಮುಖ ನಾಯಕರು ಮಹತ್ವದ ಚರ್ಚೆ ನಡೆಸಲು ಎರಡನೇ ಬಾರಿಗೆ ಒಂದೇ ಸೂರಿನಡಿ ಇಲ್ಲಿ ಸೇರಿದ್ದಾರೆ.
ಎಲ್ಲ ಪಕ್ಷಗಳ ನಾಯಕರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಉಪಸ್ಥಿತಿಯಲ್ಲಿ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಸೋಮವಾರ ರಾತ್ರಿ ಔತಣಕೂಟದಲ್ಲಿ ಅನೌಪಚಾರಿಕ ಚರ್ಚೆ ನಡೆಸಿದ್ದಾರೆ. ಮಂಗಳವಾರ (ಜೂನ್ 18) ನಡೆಯಲಿರುವ ಸಭೆಯ ಕಾರ್ಯಸೂಚಿ ಕುರಿತು ಸಮಾಲೋಚನೆ ನಡೆಸಿದ್ದಾರೆ.
ಮೈತ್ರಿಕೂಟಕ್ಕೆ ಏನು ಹೆಸರಿಡಬೇಕು? ಕಾರ್ಯಸೂಚಿ ಏನಿರಬೇಕು? ಸದ್ಯದಲ್ಲೇ ಎದುರಾಗಲಿರುವ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಒಗ್ಗೂಡಿ ಯಾವ ರೀತಿ ಕೆಲಸ ಮಾಡಬೇಕು? ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇದೇ 20ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಬಿಜೆಪಿ ವಿರುದ್ಧ ಹೋರಾಡಲು, ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳಲು ಕೂಡಾ ಸಭೆಯಲ್ಲಿ ಪ್ರಯತ್ನಗಳು ನಡೆಯಲಿವೆ ಎಂದು ಗೊತ್ತಾಗಿದೆ.
ಸಭೆಯ ಕುರಿತು ಸೋಮವಾರ ಬೆಳಿಗ್ಗೆ ಮಾಹಿತಿ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ‘ಇದು ವಿರೋಧ ಪಕ್ಷಗಳ ಎರಡನೇ ಸಭೆ. ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ತರುವ (ಗೇಮ್ ಚೇಂಜರ್) ಸಭೆ ಇದಾಗಲಿದೆ’ ಎಂದರು.
‘ಎಲ್ಲ ವಿರೋಧ ಪಕ್ಷಗಳನ್ನು ಏಕಾಂಗಿಯಾಗಿ ಎದುರಿಸಬಲ್ಲೆವು ಎಂದು ಬೀಗುತ್ತಿದ್ದವರು (ಬಿಜೆಪಿ) ಪಟ್ನಾ ಸಭೆ ಬಳಿಕ ಈಗ ಬೇರೆ ಪಕ್ಷಗಳ ಜೊತೆ ಮೈತ್ರಿಗೆ ಮುಂದಾಗಿದ್ದಾರೆ. ಇದು ವಿರೋಧ ಪಕ್ಷಗಳ ಒಗ್ಗಟ್ಟಿನ ಮೊದಲ ಯಶಸ್ಸು’ ಎಂದರು.
‘ಪ್ರಜಾಪ್ರಭುತ್ವದ ರಕ್ಷಣೆ, ಸಾಂವಿಧಾನಿಕ ಹಕ್ಕುಗಳು ಹಾಗೂ ಸ್ವಾಯತ್ತ ಸಂಸ್ಥೆಗಳ ರಕ್ಷಣೆಯ ಸದುದ್ದೇಶದಿಂದ ವಿರೋಧ ಪಕ್ಷಗಳು ಒಂದಾಗಿವೆ. ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಸಾಂವಿಧಾನಿಕ ಸಂಸ್ಥೆಗಳಾದ ಇ.ಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ಅಸ್ತ್ರವಾಗಿ ಬಿಜೆಪಿ ಸರ್ಕಾರ ಬಳಸುತ್ತಿದೆ. ಸಂಸತ್ ಸದಸ್ಯತ್ವದಿಂದ ರಾಹುಲ್ ಗಾಂಧಿ ಅನರ್ಹತೆ, ಮಹಾರಾಷ್ಟ್ರದ ಬೆಳವಣಿಗೆ ಇದಕ್ಕೆ ಸಾಕ್ಷಿ’ ಎಂದರು.
ಈ ಮೈತ್ರಿಕೂಟದ ನಾಯಕ ಯಾರು ಎಂಬ ಪ್ರಶ್ನೆಗೆ, ‘ನಾಯಕತ್ವದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ದೇಶದ ಸಮಸ್ಯೆ ಬಗ್ಗೆ ಗಮನಹರಿಸಿ. ಪ್ರತಿನಿತ್ಯ ಪ್ರಜಾಪ್ರಭುತ್ವದ ಮೇಲೆ ದಾಳಿ ಆಗುತ್ತಿದೆ. ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಪ್ರಧಾನಿ ಮಾತನಾಡುತ್ತಿಲ್ಲ. ಚೀನಾ ಅತಿಕ್ರಮಣವನ್ನು ಸಮರ್ಥನೆ ಮಾಡಿಕೊಳ್ಳುವುದು ಯಾವ ನಾಯಕತ್ವ’ ಎಂದು ಮರು ಪ್ರಶ್ನೆಹಾಕಿದರು.
ಜೈರಾಮ್ ರಮೇಶ್ ಮಾತನಾಡಿ, ‘ಪಟ್ನಾ ಸಭೆ ನಂತರ ಅವರಿಗೆ (ಬಿಜೆಪಿ) ಎನ್‌ಡಿಎ ಮೈತ್ರಿಕೂಟ ನೆನಪಾಗಿದೆ. ಅವರೂ ಮಂಗಳವಾರ ಸಭೆ ನಡೆಸಿ ಮೈತ್ರಿಕೂಟಕ್ಕೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ’ ಎಂದರು.
ಔತಣಕೂಟದಲ್ಲಿ ಯಾರು? ಸಭೆಯಲ್ಲಿ ಭಾಗವಹಿಸಲು ಸೋನಿಯಾ ಗಾಂಧಿ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟಿಎಂಸಿ ಮುಖ್ಯಸ್ಥೆಯೂ ಆಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಷೇಕ್ ಬ್ಯಾನರ್ಜಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಜೆಡಿಯು ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ನ್ಯಾಷನಲ್ ಕಾನ್ಫರೆನ್ಸ್‌ನ (ಎನ್‌ಸಿ) ಒಮರ್ ಅಬ್ದುಲ್ಲ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ದವ್ ಠಾಕ್ರೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮುಂತಾದ ನಾಯಕರು ಸೋಮವಾರ ಸಂಜೆಯೇ ನಗರಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾತ್ರಿ ಆಯೋಜಿಸಿದ್ದ ಔತಣಕೂಟದಲ್ಲಿ ಎಲ್ಲ ನಾಯಕರು ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.