ಬೆಂಗಳೂರು: ‘ಮೈತ್ರಿ ಸರ್ಕಾರ ಪತನಗೊಂಡಿದ್ದಕ್ಕೆ ಮತ್ತೆ ಮತ್ತೆ ಶೋಕಗೀತೆ ಹಾಡುವುದು ಬೇಡ. ಅದೇ ವಿಚಾರ ಪ್ರಸ್ತಾಪಿಸಬಾರದು. ಮುಂದಿನ ದಿನಗಳಲ್ಲಿ ಮೈತ್ರಿ ವಿಚಾರವನ್ನು ಎತ್ತಲೇಬೇಡಿ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.
ಮೈತ್ರಿ ಸರ್ಕಾರ ಪತನದ ನಂತರ ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಆತ್ಮಾವಲೋಕನ ಸಭೆಯಲ್ಲಿ ಅವರು ಈ ರೀತಿ ಹೇಳಿದ್ದಾರೆ ಎನ್ನಲಾಗಿದೆ.
ಸರ್ಕಾರ ಪತನವಾದ ವಿಚಾರವನ್ನು ಪದೇ ಪದೇ ಪ್ರಸ್ತಾಪ ಮಾಡುವುದು ಬೇಡ. ಮೈತ್ರಿಯಿಂದ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಇದರಿಂದ ಯಾವುದೇ ಲಾಭವಾಗಿಲ್ಲ. ಪಕ್ಷದ ವರ್ಚಸ್ಸಿಗೂ ಧಕ್ಕೆಯಾಗಿದೆ. ಕೆಲವರು
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಗೆ ಹೋಗಿದ್ದಾರೆ. ನಮ್ಮ ಮುಂದೆ ನಿಲ್ಲಲು ಹೆದುರುತ್ತಿದ್ದವರು, ಸಣ್ಣಪುಟ್ಟವರೆಲ್ಲ ಮಾತನಾಡುವಂತಾಗಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಮೈತ್ರಿಯಿಂದ ಪಕ್ಷದ ವಿವಿಧ ಹಂತದ ಸಂಘಟನೆಗಳು ಚದುರಿ ಹೋಗಿವೆ.ಶಾಸಕರ ಜತೆಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ದೂರವಾಗಿದ್ದಾರೆ. ಉಳಿದವರು ಅದೇ ದಾರಿ ಹಿಡಿದರೆ ಏನು ಮಾಡುವುದು ಎಂಬ ಆತಂಕ ಕಾಡುತ್ತಿದೆ. ಕೆಲ ಶಾಸಕರ ರಾಜೀನಾಮೆಯಿಂದಾಗಿ ನಿಷ್ಠಾವಂತರನ್ನೂ ಅನುಮಾನದಿಂದ ನೋಡುವಂತಾಗಿದ್ದು, ಪಕ್ಷದ ಒಳಗೆ ಅಪನಂಬಿಕೆ ನಿರ್ಮಾಣವಾಗಿದೆ ಎಂದು ವಸ್ತುಸ್ಥಿತಿಯನ್ನು ಬಿಚ್ಚಿಟ್ಟರು ಎನ್ನಲಾಗಿದೆ.
ಮೈತ್ರಿ ಕಳೆದುಕೊಂಡರೂ ಜೆಡಿಎಸ್ ನಮ್ಮ ಗುರಿಯಲ್ಲ. ಬಿಜೆಪಿಯೇ ಗುರಿಯಾಗಬೇಕು. ಮುಂದಿನ ದಿನಗಳಲ್ಲಿ ವ್ಯಕ್ತಿಗತ ಸಂಘರ್ಷದ ಬದಲು ಬಿಜೆಪಿ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು. ಶಾಸಕರು ರಾಜೀನಾಮೆ ನೀಡಿರುವ ಕ್ಷೇತ್ರಗಳಲ್ಲಿ ಹೊಸಬರು ಈಗಿನಿಂದಲೇ ಕೆಲಸ ಆರಂಭಿಸಿ, ಪಕ್ಷ ಬಲಪಡಿಸುವಂತೆ ಸಲಹೆ ಸಲಹೆ ನೀಡಿದ್ದಾರೆ.
ಸೇರಿಸಿಕೊಳ್ಳಬಾರದು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿರುವ ಅತೃಪ್ತರ ನಡೆಯ ಬಗ್ಗೆ ಸಭೆಯಲ್ಲಿ ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತವಾಗಿದೆ. ಅವರಿಗೆ ಶಿಕ್ಷೆ ಆಗುವವರೆಗೂ ಬಿಡಬಾರದು. ರಾಜೀನಾಮೆ ನೀಡಿ, ಪಕ್ಷ ಬಿಟ್ಟಿದ್ದಕ್ಕೆ ತಕ್ಕ ಶಾಸ್ತ್ರಿ ಆಗಲೇಬೇಕು. ಮುಂದಿನ ದಿನಗಳಲ್ಲಿ ಯಾರೇ ಇಂಥ ಕೆಲಸ ಮಾಡಿದರೂ ಶಿಕ್ಷೆ ಆಗುತ್ತದೆ ಎಂಬ ಎಚ್ಚರಿಕೆಯ ಪಾಠವಾಗಬೇಕು. ಅದಕ್ಕಾಗಿ ಇವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವಂತೆ ಆಗ್ರಹಿಸಲಾಯಿತು ಎನ್ನಲಾಗಿದೆ.
ಮತ್ತೆ ವಾಪಸ್ ಬಂದರೂ ಪಕ್ಷಕ್ಕೆ ಸೇರಿಸಿಕೊಳ್ಳಬಾರದು. ಅವರ ವಿರುದ್ಧ ಕಾನೂನು ಕ್ರಮ ಆಗಬೇಕು. ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿ ಗೆದ್ದು ಶಾಸಕರಾದವರು ಹಣ, ಅಧಿಕಾರದ ಆಮಿಷಕ್ಕೆ ಒಳಗಾಗಿ ಪಕ್ಷಕ್ಕೆ ದ್ರೋಹ ಬಗೆದು ರಾಜೀನಾಮೆ ನೀಡಿದ್ದಾರೆ.ಪಕ್ಷಾಂತರ ನಿಷೇಧ ಕಾಯಿದೆಯಡಿ ಶಾಸಕ ಸ್ಥಾನವನ್ನು ಅನರ್ಹಗೊಳಿಸುವಂತೆ ವಿಧಾನ ಸಭಾಧ್ಯಕ್ಷರ ಮೇಲೆ ಒತ್ತಡ ತರಬೇಕು. ಅವರನ್ನು ಮತ್ತೊಮ್ಮೆ ಭೇಟಿಯಾಗಿ ಮನವಿ ಸಲ್ಲಿಸುವಂತೆ ಬಹುತೇಕರು ಒತ್ತಾಯಿಸಿದ್ದಾರೆ.
ರಾಜೀನಾಮೆ ನೀಡಿದವರು ಉಪಚುನಾವಣೆಯಲ್ಲಿ ಕಣಕ್ಕಿಳಿದರೆ ಸುಮ್ಮನೆ ಬಿಡಬಾರದು. ಸೋಲಿಸಲು ಯಾವ ರೀತಿಯ ಹೊಂದಾಣಿಕೆಯಾದರೂ ಸರಿ.ಸೋತು ಸುಣ್ಣವಾಗುವಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ರಾಜಕೀಯ ಭವಿಷ್ಯ ಇಲ್ಲದಂತೆ ಮಾಡಬೇಕು ಎಂದು ಸಿದ್ದರಾಮಯ್ಯ ಗುಡುಗಿದರು ಎನ್ನಲಾಗಿದೆ.
ಈಗಾಗಲೇ ಕೆಪಿಸಿಸಿ ಪದಾಧಿಕಾರಿಗಳ ವಿವಿಧ ಘಟಕಗಳನ್ನು ವಿಸರ್ಜಿಸಲಾಗಿದ್ದು, ಶೀಘ್ರವೇ ಹೊಸ ಪದಾಧಿಕಾರಿಗಳನ್ನು ನೇಮಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ. ಪಕ್ಷ ಸಂಘಟಿಸಲು ಪದಾಧಿಕಾರಿಗಳನ್ನು ನೇಮಿಸುವಂತೆ ಸಲಹೆ ಮಾಡಲಾಗಿದೆ.
ಮೈತ್ರಿ: ಹೈಕಮಾಂಡ್ ನಿರ್ಧಾರ
‘ಪಕ್ಷ ಸಂಘಟನೆ, ಎಲ್ಲ ನಾಯಕರು ಒಟ್ಟಾಗಿ ಮುನ್ನಡೆಯುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ. ಮೈತ್ರಿ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಿಲ್ಲ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಪ್ರತಿ ಪಕ್ಷ ನಾಯಕನ ಆಯ್ಕೆ ಬಗ್ಗೆ ಚರ್ಚಿಸಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.
ರಾಜೀನಾಮೆ ನೀಡಿ ಪಕ್ಷದಿಂದ ಹೊರಗೆ ಹೋದವರು ವಾಪಸ್ ಬಂದರೂ ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಸಭೆಯ ನಂತರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.