ADVERTISEMENT

ವಿಧಾನ ಪರಿಷತ್‌ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2024, 9:12 IST
Last Updated 3 ಜೂನ್ 2024, 9:12 IST
   

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಾದ ಡಾ. ಯತೀಂದ್ರ, ಎನ್‌.ಎಸ್. ಬೋಸರಾಜು, ಕೆ. ಗೋವಿಂದರಾಜು, ಬಿಲ್ಕಿಸ್ ಬಾನು, ಐವನ್ ಡಿಸೋಜ, ವಸಂತ ಕುಮಾರ್, ಜಗದೇವ್ ಗುತ್ತೇದಾರ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.  ಶಿವಕುಮಾರ್, ಸಚಿವರುಗಳು ಇದ್ದರು.

ತಮ ಪಕ್ಷದ ಅಭ್ಯರ್ಥಿಗಳೊಂದಿಗೆ ನಾಮಪತ್ರ ಸಲ್ಲಿಸಿ ನಂತರ ಮಾತನಾಡಿದ ಮುಖ್ಯಮಂತ್ರಿ, ‘ಎಕ್ಸಿಟ್ ಪೋಲ್ ನರೇಂದ್ರ ಮೋದಿ ಫ್ಯಾಂಟಸಿ ಪೋಲ್. ನಾವು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಕರ್ನಾಟಕದಲ್ಲಿ ನಾವು 15ರಿಂದ 20 ಸ್ಥಾನ ಗೆಲ್ಲುತ್ತೇವೆ. ಸಮೀಕ್ಷೆಯನ್ನು ಸಂಪೂರ್ಣ ತಳ್ಳಿ ಹಾಕುತ್ತೇವೆ’ ಎಂದರು.

ADVERTISEMENT

‘ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜಿನಾಮೆಯನ್ನು ನಾವು ಕೇಳಿಲ್ಲ. ಎಸ್‌ಐಟಿ ಮೊನ್ನೆಯಷ್ಟೇ ರಚನೆಯಾಗಿದೆ. ವರದಿ ಏನು ಬರುತ್ತದೆಯೆಂದು ನೋಡೋಣ. ಪ್ರಾಥಮಿಕ ವರದಿ ಬಂದ ನಂತರ ಮುಂದಿನ ತೀರ್ಮಾನ ಮಾಡುತ್ತೇವೆ’ ಎಂದರು.

‘ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾರೆ. ವಿರೋಧ ಪಕ್ಷದವರು ಇರುವುದೇ ಹೋರಾಟ ಮಾಡಲು’ ಎಂದೂ ಹೇಳಿದರು.

‘ವಿಧಾನಸಭೆಯಲ್ಲಿನ ಸಂಖ್ಯಾಬಲದ ಪ್ರಕಾರ ವಿಧಾನ ಪರಿಷತ್ ಚುನಾವಣೆಯಲ್ಲಿಏಳು ಜನರನ್ನು ನಾವು ಕಣಕ್ಕಿಳಿಸಿದ್ದೇವೆ. ಪ್ರತಿಯೊಬ್ಬರು ಗೆಲ್ಲಲು 19-20 ಮತ ಬೇಕು. ಜೆಡಿಎಸ್‌ನವರು ಒಬ್ಬರು, ಬಿಜೆಪಿಯವರು ಮೂರು ಜನರನ್ನು ಕಣಕ್ಕಿಳಿಸುತ್ತಿದ್ದಾರೆ. ನಾಮಪತ್ರ ಪರಿಶೀಲನೆ ನಂತರ ನಾಮಪತ್ರ ಜಾಸ್ತಿಯಾದರೆ ಚುನಾವಣೆ ನಡೆಯಲಿದೆ’ ಎಂದರು.

‘ಮುಂಗಾರು ಆರಂಭವಾಗಿದೆ. ಬೆಂಗಳೂರಲ್ಲಿ ಉತ್ತಮ ಮಳೆಯಾಗಿದೆ. ಆದರೂ ಮಳೆ ಜಾಸ್ತಿಯಾದಾಗ ರಸ್ತೆಯಲ್ಲಿ ನೀರು ತುಂಬಿತು. ನೀರು ಹರಿದು ಹೋಗಲು ವ್ಯವಸ್ಥೆ ಮಾಡಲು ಸೂಚನೆ ಕೊಡಲಾಗಿದೆ. ಅಧಿಕಾರಿಗಳ ಸಭೆ ಕರೆಯಲಾಗುವುದು’ ಎಂದೂ ಹೇಳಿದರು.

ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಡಿ.ಕೆ. ಶಿವಕುಮಾರ್ ಅವರು ಎಲ್ಲ ಅಭ್ಯರ್ಥಿಗಳಿಗೆ ವಿಧಾನಸೌಧದಲ್ಲಿ ಬಿ ಫಾರಂ ವಿತರಿಸಿದರು. ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಕಾಂಗ್ರೆಸ್ ಮುಖಂಡ ಹಂಪನಗೌಡ ಬಾದರ್ಲಿ ಇದ್ದರು.

ಸಿಎಂ, ಡಿಸಿಎಂ, ಎಚ್‌ಡಿಕೆ ಮುಖಾಮುಖಿ

ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ವಿಧಾನಸೌಧದ ಕಾರಿಡಾರ್​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮುಖಾಮುಖಿಯಾದರು.

ತಮ್ಮ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗಾಗಿ ವಿಧಾನಸಭೆ ಕಾರ್ಯದರ್ಶಿಯ ಕೊಠಡಿಯ ಹೊರಗಡೆ ಸಿದ್ದರಾಮಯ್ಯ ನಿಂತಿದ್ದರು. ಪಕ್ಷದ ಅಭ್ಯರ್ಥಿಯ ನಾಮಪತ್ರ ಸಲ್ಲಿಸಿ ಕುಮಾರಸ್ವಾಮಿ ಹೊರಗೆ ಬರುತ್ತಿರುವಾಗ ಇಬ್ಬರೂ ಮುಖಾಮುಖಿಯಾದರು. ಪರಸ್ಪರ ಎದುರಾದಾಗ ಉಭಯ ನಾಯಕರು ಪರಸ್ಪರ ನಮಸ್ಕರಿದರು.

ಇದೇ ವೇಳೆ, ಸಿದ್ದರಾಮಯ್ಯ ಅವರು ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡರ ಜೊತೆ ಕುಶಲೋಪರಿ ವಿಚಾರಿಸಿದರು. ಜಿ.ಟಿ. ದೇವೆಗೌಡರ ಕೈಕುಲುಕಿ ಆತ್ಮೀಯವಾಗಿ ಮಾತನಾಡಿಸಿದರು. 

ಪರಸ್ಪರ ಮುಖ ನೋಡದ ಡಿಕೆಶಿ - ಎಚ್​ಡಿಕೆ: ಇದೇ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಎಚ್‌.ಡಿ ಕುಮಾರಸ್ವಾಮಿ ಕೂಡಾ ಮುಖಾಮುಖಿಯಾದರು. ಆದರೆ, ಉಭಯ ನಾಯಕರು ಮುಖವನ್ನೂ ನೋಡದೇ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.