ADVERTISEMENT

ಸುಳ್ಳು ಇತಿಹಾಸ ತುರುಕಿದ ಕಾಂಗ್ರೆಸ್–ಕಮ್ಯುನಿಸ್ಟರು: ಗುರುಪ್ರಕಾಶ್‌ ಪಾಸ್ವಾನ್‌

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 18:49 IST
Last Updated 18 ಜೂನ್ 2022, 18:49 IST
ಬೆಂಗಳೂರಿನ ‘ಸಿಟಿಜನ್ಸ್ ಫಾರ್ ಡೆಮಾಕ್ರಸಿ’ ಶನಿವಾರ ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ, ‘ಪಠ್ಯಪುಸ್ತಕ ಪರಿಷ್ಕರಣೆ, ಸತ್ಯ-ಮಿಥ್ಯೆ’ ವಿಚಾರಗೋಷ್ಠಿಯನ್ನು ಸಿ.ಟಿ.ರವಿ, ತೇಜಸ್ವಿ ಕಟ್ಟಿಮನಿ, ಗುರುಪ್ರಕಾಶ್‌ ಪಾಸ್ವಾನ್‌ ಮತ್ತು ಎಂ.ಮದನಗೋಪಾಲ್‌ ದೀಪ ಬೆಳಗಿಸಿ ಉದ್ಘಾಟಿಸಿದರು.
ಬೆಂಗಳೂರಿನ ‘ಸಿಟಿಜನ್ಸ್ ಫಾರ್ ಡೆಮಾಕ್ರಸಿ’ ಶನಿವಾರ ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಿದ್ದ, ‘ಪಠ್ಯಪುಸ್ತಕ ಪರಿಷ್ಕರಣೆ, ಸತ್ಯ-ಮಿಥ್ಯೆ’ ವಿಚಾರಗೋಷ್ಠಿಯನ್ನು ಸಿ.ಟಿ.ರವಿ, ತೇಜಸ್ವಿ ಕಟ್ಟಿಮನಿ, ಗುರುಪ್ರಕಾಶ್‌ ಪಾಸ್ವಾನ್‌ ಮತ್ತು ಎಂ.ಮದನಗೋಪಾಲ್‌ ದೀಪ ಬೆಳಗಿಸಿ ಉದ್ಘಾಟಿಸಿದರು.   

ಬೆಂಗಳೂರು: ‘ ಕಾಂಗ್ರೆಸ್‌ ಮತ್ತು ಕಮ್ಯುನಿಸ್ಟರ ಕೆಟ್ಟ ಒಡಂಬಡಿಕೆಯ ‍ಪರಿಣಾಮದಿಂದಾಗಿ ಕಳೆದ ಏಳು ದಶಕಗಳಿಂದ ಶಿಕ್ಷಣದಲ್ಲಿ ಸುಳ್ಳು ಇತಿಹಾಸವನ್ನು ತುರುಕುತ್ತಾ ಬರಲಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರರೂ ಆದ ಪಟ್ನಾ ವಿಶ್ವವಿದ್ಯಾಲಯದಕಾನೂನು ಪ್ರಾಧ್ಯಾಪಕ ಗುರುಪ್ರಕಾಶ್‌ ಪಾಸ್ವಾನ್‌ ಆಪಾದಿಸಿದರು.

ಬೆಂಗಳೂರಿನ ‘ಸಿಟಿಜನ್ಸ್ ಫಾರ್ ಡೆಮಾಕ್ರಸಿ’ಶನಿವಾರ ಇಲ್ಲಿ ಆಯೋಜಿಸಿದ್ದ, ‘ಪಠ್ಯಪುಸ್ತಕ ಪರಿಷ್ಕರಣೆ, ಸತ್ಯ-ಮಿಥ್ಯೆ’ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಮಾಡಿರುವುದನ್ನು ಸ್ವಾಗತಿಸುತ್ತೇನೆ’ ಎಂದರು.

‘ಕಾಂಗ್ರೆಸ್‌ ಪಕ್ಷ ಸ್ವಾತಂತ್ರ್ಯ ಹೋರಾಟವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದೆ. ನೆಹರೂ ಕುಟುಂಬದ ಯಜಮಾನಿಕೆಯನ್ನೇ ಗುರಿಯಾಗಿಸಿಕೊಂಡು ಒಂದಂಶದ ಅಜೆಂಡಾದೊಂದಿಗೆ 1947ರ ನಂತರ ಈ ದೇಶದಲ್ಲಿ ಸುಳ್ಳು ಇತಿಹಾಸವನ್ನು ಸೃಜಿಸಲಾಗಿದೆ. ದಲಿತರು, ಕ್ರಾಂತಿಕಾರಿಗಳು ಈ ದೇಶಕ್ಕೆ ಕೊಟ್ಟ ಕೊಡುಗೆ, ತ್ಯಾಗ, ಬಲಿದಾನಗಳನ್ನು ಮರೆಮಾಚಲಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಶಿಕ್ಷಣದಲ್ಲಿ ರಾಜಕಾರಣ ಸೇರಿಸಿದ ಪರಿಣಾಮವೇ ಇವತ್ತು ಸಿಎಎ, 370ನೇ ವಿಧಿ ವಿರೋಧಿಸುವವರು, ಬುರ್ಕಾ, ಹಿಜಾಬ್‌ಗಳ ಪರ ಮಾತನಾಡುವವರು ಹೆಚ್ಚಾಗಿದ್ದಾರೆ. ಆದ್ದರಿಂದ, ಜನರನ್ನು ಜಾಗೃತಗೊಳಿಸಬೇಕಿದೆ. ಇತಿಹಾಸದ ಲೋಪಗಳನ್ನು ಸರಿಪಡಿಸಲು ರಾಜ್ಯ ಸರ್ಕಾರ ಸಂಶೋಧನೆ, ಅನ್ವೇಷಣೆಗೆ ಒತ್ತು ನೀಡಬೇಕಿದೆ’ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸಿ.ಟಿ.ರವಿ ಮಾತನಾಡಿ, ‘ಪಠ್ಯಪುಸ್ತಕ ಪರಿಷ್ಕರಣೆಗೆ
ಅಪಸ್ವರ ಎತ್ತಿರುವವರಿಗೆ ಏನಾದರೂ ಒಂದಷ್ಟು ನೈತಿಕತೆ ಇದ್ದರೆ, ಮೊದಲು ಬರಗೂರು ರಾಮಚಂದ್ರಪ್ಪ ವಿರುದ್ಧ ಹೋರಾಟ ಮಾಡಬೇಕು. ಯಾಕೆಂದರೆ, ಕುವೆಂಪು ಪಾಠಗಳಿಗೆ ಕತ್ತರಿ ಹಾಕಿದ್ದೇ ಬರಗೂರು’ ಎಂದು ಆರೋಪಿಸಿದರು.

‘ಬಸವಣ್ಣ ಹೊಸಧರ್ಮ ಸ್ಥಾಪನೆ ಮಾಡಲಿಲ್ಲ ಬದಲಿಗೆ ಸನಾತನ ಧರ್ಮದ ನಿಜತತ್ವಗಳನ್ನು ಎತ್ತಿಹಿಡಿದರು. ವೇದ ಉಪನಿಷತ್ತುಗಳಲ್ಲಿದ್ದ ಧರ್ಮದ ಸಮಾನತೆಯ ತತ್ವವನ್ನು ವಚನಗಳ ಮೂಲಕ ತೆರೆದಿಟ್ಟರು. ಜಾತ್ಯತೀತರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರು–ಕಮ್ಯುನಿಸ್ಟರು ಇವತ್ತು ಜನಿವಾರ, ಉಡುದಾರ, ಶಿವದಾರಗಳ ಮೂಲಕ ಜಾತಿಗಳನ್ನು ಎತ್ತಿಕಟ್ಟಿ ಸಂಘರ್ಷ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಭಾರತೀಯತೆ ಪುಟಿದೇಳುತ್ತಿರುವುದನ್ನು ಸಹಿಸಲಾಗದೆ ವಿಲವಿಲ ಒದ್ದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಜ್ಜನರು ಮೌನ ಮುರಿದು ಘರ್ಜಿಸಬೇಕಿದೆ’ ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಎಂ.ಮದನಗೋಪಾಲ್ ಹಾಗೂ ಆಂಧ್ರಪ್ರದೇಶದ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ತೇಜಸ್ವಿ ಕಟ್ಟಿಮನಿ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.