ಬೆಂಗಳೂರು: ಜನಪ್ರತಿನಿಧಿಯಾಗಲು ಅರ್ಹತೆ ಇಲ್ಲದ, ನಾಲ್ಕು ಮತಗಳನ್ನು ಸೆಳೆಯಲು ಶಕ್ತಿ ಇಲ್ಲದ ಬಿ.ಎಲ್. ಸಂತೋಷ್ ಸಭೆ ನಡೆಸುವಂತಹ ದುರ್ಗತಿ ಬಿಜೆಪಿಗೆ ಬಂದಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಬಿಜೆಪಿಯು ತನ್ನ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು (ಆ.31, ಗುರುವಾರ) ಲೋಕಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ಕಾರ್ಯಾಗಾರದ ಸಮಾರೋಪ ನಡೆಸಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಎಕ್ಸ್ (ಟ್ವಿಟರ್)ನಲ್ಲಿ ಹಂಚಿಕೊಂಡಿರುವ ಬಿಜೆಪಿ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಮಾತನಾಡುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದೆ.
ಸಭೆಗೆ ಬಿಜೆಪಿಯ ಪ್ರಮುಖರೇ ಗೈರಾಗಿರುವ ವಿಚಾರವಾಗಿ ಕಾಂಗ್ರೆಸ್, ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿದೆ.
'ಬಿಜೆಪಿ ಶಾಸಕರೆಲ್ಲ ಬಿ.ಎಸ್. ಯಡಿಯೂರಪ್ಪ ಅವರ ಹಿಂದೆ ಹೋಗಿದ್ದೇ ತಡ ಕುಪಿತಗೊಂಡ ಬಿ.ಎಲ್. ಸಂತೋಷ್ ನಾನೇ ಲೀಡರ್ ಎಂಬ ಸಂದೇಶ ರವಾನಿಸಲು ಸಭೆ ನಡೆಸಿದ್ದಾರೆ. ಚುನಾವಣೆಯ ತಂತ್ರಗಾರಿಕೆ ಮಕಾಡೆ ಮಲಗಿ ಹೀನಾಯ ಸೋಲು ಅನುಭವಿಸಿದಾಗ ಇದೇ ಸಂತೋಷ್ ಗಂಟು ಮೂಟೆ ಕಟ್ಟಿಕೊಂಡು ನಾಪತ್ತೆಯಾಗಿದ್ದರು. ಈಗ ಯಡಿಯೂರಪ್ಪ ಅವರಿಗೆ ಸೆಡ್ಡು ಹೊಡೆಯಲು ಮತ್ತೆ ಪ್ರತ್ಯಕ್ಷರಾಗಿ ಸಭೆ ನಡೆಸಿದ್ದಾರೆ. ಅದೇನೇ ಮಾಡಿದರೂ ಬಿಜೆಪಿಗೆ ಮತ್ತೆ ಜೀವ ಬರುವುದಿಲ್ಲ' ಎಂದು ಕುಟುಕಿದೆ.
ಇನ್ನೊಂದು ಪೋಸ್ಟ್‌ನಲ್ಲಿ, 'ಬಿಜೆಪಿ ಪಕ್ಷಕ್ಕೆ ಸಭೆ ಕರೆಯಲು ಒಬ್ಬ ಅಧ್ಯಕ್ಷ ದಿಕ್ಕಿಲ್ಲ. ಶಾಸಕರ ಸಭೆ ನಡೆಸಲು ಒಬ್ಬ ಶಾಸಕಾಂಗ ಪಕ್ಷದ ನಾಯಕನಿಲ್ಲ. ಜನಪ್ರತಿನಿಧಿಯಾಗಲು ಅರ್ಹತೆ ಇಲ್ಲದ, ನಾಲ್ಕು ಮತಗಳನ್ನು ಸೆಳೆಯಲು ಶಕ್ತಿ ಇಲ್ಲದ ಬಿ.ಎಲ್. ಸಂತೋಷ್ ಸಭೆ ನಡೆಸುವ ದುರ್ಗತಿ ಬಂದಿದೆ ಎಂದರೆ ಬಿಜೆಪಿಯು ರಾಜಕೀಯವಾಗಿ ಅದೆಷ್ಟು ದಿವಾಳಿಯಾಗಿರಬಹುದು' ಎಂದು ಛೇಡಿಸಿದೆ. ಹಾಗೆಯೇ, ಸಂತೋಷ್ ನಡೆಸಿರುವ ಸಭೆಯು ಯಡಿಯೂರಪ್ಪ ಅವರಿಗೆ ಸೆಡ್ಡು ಹೊಡೆಯುವುದಕ್ಕಷ್ಟೇ ಸೀಮಿತವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
'ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲು ಸಭೆ ನಡೆಸಬೇಕಿತ್ತು. ನೂತನ ರಾಜ್ಯಾಧ್ಯಕ್ಷರ ನೇಮಕಕ್ಕಾದರೂ ಸಭೆ ನಡೆಸಬೇಕಿತ್ತು. ಆದರೆ ಒಬ್ಬ ವ್ಯಕ್ತಿಯ ಪ್ರತಿಷ್ಠೆಯ ಹಪಹಪಿಯನ್ನು ಸಂತೈಸಲು ಸಭೆ ನಡೆಸಿದೆ! ಬಿಜೆಪಿಯ ಅಸಮದಾನಿತರು ಈ ಸಭೆಯಿಂದ ದೂರ ಉಳಿಯುವ ಮೂಲಕ BJP vs BJP ಕಿತ್ತಾಟ ಮತ್ತೊಮ್ಮೆ ಬಹಿರಂಗವಾಗಿದೆ. ಬಿ.ಎಲ್.ಸಂತೋಷ್ ಅವರಿಗೆ ಅವರಿಗೆ ನಯಾಪೈಸೆ ಕಿಮ್ಮತ್ತಿಲ್ಲ ಎಂಬುದು ಅನಾವರಣಗೊಂಡಿದೆ' ಎಂದು ಜರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.