ADVERTISEMENT

ಸೆ. 16, 17ರಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ

ಪಿಟಿಐ
Published 4 ಸೆಪ್ಟೆಂಬರ್ 2023, 15:28 IST
Last Updated 4 ಸೆಪ್ಟೆಂಬರ್ 2023, 15:28 IST
   

ನವದೆಹಲಿ: ಹೊಸದಾಗಿ ರಚನೆಗೊಂಡಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯುಸಿ) ಹೈದರಾಬಾದ್‌ನಲ್ಲಿ ಇದೇ 16 ಹಾಗೂ 17ರಂದು ಸಭೆ ಸೇರಲಿದೆ.

ಈ ವರ್ಷಾಂತ್ಯದಲ್ಲಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, 17ರಂದು ನಡೆಯುವ ಸಾರ್ವಜನಿಕ ರ್‍ಯಾಲಿಯಲ್ಲಿ ಕಾಂಗ್ರೆಸ್‌ ಪಕ್ಷದ ಐದು ‘ಗ್ಯಾರಂಟಿ’ಗಳನ್ನು ಘೋಷಣೆ ಮಾಡಲಾಗುತ್ತದೆ. 

ಮಧ್ಯಪ್ರದೇಶ ವಿಧಾನಸಭೆಗೂ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ. ಅಲ್ಲಿನ ಭೋಪಾಲ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟದ ನಾಯಕರ ಸಭೆ ಹಾಗೂ ಸಾರ್ವಜನಿಕ ರ‍್ಯಾಲಿಯನ್ನು ಅಕ್ಟೋಬರ್‌ ಮೊದಲಾರ್ಧದಲ್ಲಿ ನಡೆಸಲು ಯೋಜಿಸಲಾಗಿದೆ. ಈ ಕುರಿತು ಕಳೆದ ವಾರ ಮುಂಬೈಯಲ್ಲಿ ನಡೆದ ‘ಇಂಡಿಯಾ’ ಮೈತ್ರಿಕೂಟದ ಮೂರನೇ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ADVERTISEMENT

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್, ‘16ರಂದು ನಡೆಯುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಾಮಾನ್ಯ ಸದಸ್ಯರು, ಕಾಯಂ ಆಹ್ವಾನಿತರು ಹಾಗೂ ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ’ ಎಂದರು. 

ಮರುದಿನ ವಿಸ್ತೃತ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಅದರಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಹಾಗೂ ಸಂಸದೀಯ ಪಕ್ಷದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. 

ಆ ಬಳಿಕ ಹೈದರಾಬಾದ್‌ ಸಮೀಪ ಬೃಹತ್‌ ಸಾರ್ವಜನಿಕ ರ‍್ಯಾಲಿ ನಡೆಸಲಾಗುತ್ತದೆ. ಇದರಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಪಕ್ಷದ ನಾಯಕ ರಾಹುಲ್‌ ಗಾಂಧಿ ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗುತ್ತದೆ. ಜತೆಗೆ, ತೆಲಂಗಾಣ ಸರ್ಕಾರದ ವಿರುದ್ಧ ಆರೋಪಪಟ್ಟಿಯನ್ನೂ ಬಿಡುಗಡೆ ಮಾಡಲಾಗುತ್ತದೆ. 

ರ‍್ಯಾಲಿಯಲ್ಲಿ ವೈ.ಎಸ್‌.ಶರ್ಮಿಳಾ ಭಾಗವಹಿಸುವ ಸಾಧ್ಯತೆ ಇದೆ. ಅವರ ನೇತೃತ್ವದ ವೈಎಸ್‌ಆರ್‌ ತೆಲಂಗಾಣ ಪಕ್ಷವು ಕಾಂಗ್ರೆಸ್‌ನೊಂದಿಗೆ ವಿಲೀನವಾಗುವ ಸಾಧ್ಯತೆ ದಟ್ಟವಾಗಿದೆ. ಪಕ್ಷವನ್ನು ವಿಲೀನ ಮಾಡುವ ಸಂಬಂಧ ಶರ್ಮಿಳಾ ಅವರು ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರೊಂದಿಗೆ ಕಳೆದ ವಾರ ಸಮಾಲೋಚನೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.