ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಕಾಂಗ್ರೆಸ್ ಪಕ್ಷವು ಬಿಜೆಪಿಯ ಗೆಲುವನ್ನು ನಿರೀಕ್ಷಿಸುತ್ತಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ನಗರದಲ್ಲಿ ಬುಧವಾರ ತಮ್ಮ ಬೆಂಬಲಿಗರ ಸಭೆ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಈಗಾಗಲೇ ಸತ್ತು ಮಲಗಿದೆ. ಕಳೆದ ಚುನಾವಣೆಯಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಯಾರಿಗೂ ಸಿಗದ ಬಹುಮತ ನನಗೆ ಸಿಕ್ಕಿದೆ. ಆ ದಾಖಲೆ ಮೀರುವ ಪ್ರಯತ್ನ ಈ ಬಾರಿ ಆಗಲಿದೆ. ಇದಕ್ಕೆ ಪೂರ್ವ ಪೀಠಿಕೆಯಾಗಿ ಕ್ಷೇತ್ರದಲ್ಲಿ ಕೆಲಸ ಆಗಬೇಕಿದೆ. ಪ್ರತಿ ಬಾರಿಯಂತೆ 2024ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವನ್ನು ನಿರೀಕ್ಷಿಸುತ್ತಿದೆ ಎಂದರು.
ಬೌಲಿಂಗ್ ಇಲ್ಲದಿದ್ದರೆ ಬ್ಯಾಟಿಂಗ್‌ಗೆ ಕಿಮ್ಮತ್ತಿಲ್ಲ. ಉತ್ತಮ ಬೌಲಿಂಗ್ ಮಾಡುವವರಿಗೆ ಸಿಕ್ಸರ್ ಬಾರಿಸಿದರೆ ಮಾತ್ರ ದಾಂಡಿಗನಿಗೆ ಖುಷಿ ಇರುತ್ತದೆ. ಸಿದ್ದರಾಮಯ್ಯನಂತಹ ಬೌಲರ್ ಬಿಜೆಪಿ ವಿರುದ್ಧ ಬೌಲಿಂಗ್ ಮಾಡುತ್ತಿರಬೇಕು. ಹೀಗೆ ಕಾಂಗ್ರೆಸ್ಸಿಗರ ಪ್ರತಿರೋಧವಿದ್ದರೆ ಮಾತ್ರ ಚುನಾವಣಾ ಸಂಗ್ರಾಮ ಇನ್ನಷ್ಟು ಕಳೆಗಟ್ಟುತ್ತದೆ ಎಂದ ಅವರು, ಫೆಬ್ರುವರಿ ಮೊದಲ ವಾರದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಮುಖ್ಯಸ್ಥರ ಭೇಟಿ ಮಾಡಲು ತೀರ್ಮಾನಿಸಿದ್ದೇನೆ. ತಳಮಟ್ಟದವರೆಗೂ ಕಾರ್ಯಕರ್ತರನ್ನು ಸಂಘಟಿಸುತ್ತೇನೆ. ವಿರೋಧಿಗಳು ಏನೇ ಚರ್ಚೆ ಮಾಡಿದರೂ ಚುನಾವಣಾ ಸಂಗ್ರಾಮದ ಒಳಾಂತರಂಗ ಬೇರೆಯೇ ಇದೆ. ಅದಕ್ಕೆ ತಕ್ಕಂತೆ ನಮ್ಮ ಟೀಂ ಈಗಿನಿಂದಲೇ ಕಾರ್ಯತತ್ಪರ ಆಗಬೇಕಿದೆ ಎಂದರು.
ನಂತರ ಪಕ್ಷ ಸಂಘಟನೆ ಸಂಬಂಧ 50ಕ್ಕೂ ಹೆಚ್ಚು ಬೆಂಬಲಿಗರ ಜತೆ ಮಾತುಕತೆ ನಡೆಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.