ADVERTISEMENT

ಆರ್‌ಟಿಐ ಕಾರ್ಯಕರ್ತರನ್ನು ಬಗ್ಗು ಬಡಿಯಲು ಪಟ್ಟಿ ತಯಾರಿ: ಅಶ್ವತ್ಥನಾರಾಯಣ ಕಿಡಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2023, 12:27 IST
Last Updated 3 ಅಕ್ಟೋಬರ್ 2023, 12:27 IST
ಡಾ. ಸಿ.ಎನ್. ಅಶ್ವತ್ಥನಾರಾಯಣ
ಡಾ. ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: ‘ಕಾಂಗ್ರೆಸ್ ಸರ್ಕಾರ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಬಗ್ಗು ಬಡಿಯಲು ಮುಂದಾಗಿದ್ದು, ಇದಕ್ಕಾಗಿ  ಮಾಹಿತಿ ಹಕ್ಕು ಅಡಿ ವಿವರ ಪಡೆಯುವ ಎಲ್ಲ ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸಲು ವಿವಿಧ ಇಲಾಖೆಗಳಿಗೆ ಸೂಚನೆ ನೀಡಿದೆ‘ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.

ಇದು ಕಾನೂನಿನ ಉಲ್ಲಂಘನೆ ಮಾತ್ರವಲ್ಲ, ಅಧಿಕಾರದ ದುರ್ಬಳಕೆಯೂ ಆಗಿದೆ ಎಂದು ಅವರು ಮಂಗಳವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಆರ್‌ಟಿಐ ಕಾರ್ಯಕರ್ತರ ಪಟ್ಟಿ ಮಾಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ. ಆದರೆ, ತಾವು ಮಾಡುವ ಅಕ್ರಮಗಳ ಕರ್ಮಕಾಂಡಗಳ ರಕ್ಷಣೆಗಾಗಿ ಮತ್ತು ಆರ್‌ಟಿಐ ಕಾನೂನಿನ ಉದ್ದೇಶವನ್ನು ವಿಫಲಗೊಳಿಸಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ‘ ಎಂದು ಹೇಳಿದರು.

ADVERTISEMENT

‘ಮಾಹಿತಿ ಪಡೆಯುವ ಕಾರ್ಯಕರ್ತರನ್ನು ಬೆದರಿಸುವುದು, ಹೆದರಿಸುವುದಲ್ಲದೇ ಅಧಿಕಾರದ ದುರ್ಬಳಕೆ ಮಾಡಿ ಕೇಸುಗಳನ್ನು ಹಾಕುತ್ತಿದ್ದಾರೆ. ಕಾರ್ಯಕರ್ತರ ಚಲನವಲನ ತಪಾಸಣೆ ಮಾಡುವ ಮೂಲಕ ಗದಾ ಪ್ರಹಾರಕ್ಕೆ ಮುಂದಾಗಿದೆ. ಬಾಯಿಮಾತಿನಲ್ಲಿ ಮಾತ್ರ ಪಾರದರ್ಶಕ ಸರ್ಕಾರ‘ ಎಂದು ಅಶ್ವತ್ಥನಾರಾಯಣ ಕಿಡಿಕಾರಿದರು.

‘ಹಿಂದೆ ಲೋಕಾಯುಕ್ತವನ್ನು ಮುಚ್ಚಿದ್ದರು. ಈಗ ಆರ್‌ಟಿಐ ಕಾನೂನು ನಿಷ್ಕ್ರಿಯ ಮಾಡಲು ಪ್ರಯತ್ನ ನಡೆಸಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ದಿನದಿಂದಲೇ ಭ್ರಷ್ಟಾಚಾರ ಆರಂಭವಾಗಿದೆ. ಕಾನೂನು–ಸುವ್ಯವಸ್ಥೆ ಸಂಪೂರ್ಣ ಕುಸಿಯುತ್ತಿದೆ. ಜನರ ರಕ್ಷಣೆ ಮಾಡುವಲ್ಲಿ ಮತ್ತು ಪೊಲೀಸರ ರಕ್ಷಣೆಯಲ್ಲೂ ಸರ್ಕಾರ ಸಂಪೂರ್ಣ ವಿಫಲವಾಗಿದೆ‘ ಎಂದು ಹರಿಹಾಯ್ದರು.

‘ಮುಖ್ಯಮಂತ್ರಿಯವರು ತಮ್ಮ ಆಡಳಿತ ವಿಫಲತೆ ಕಾರಣಕ್ಕಾಗಿ ರಾಜೀನಾಮೆ ನೀಡಿ ಸರ್ಕಾರವನ್ನು ವಿಸರ್ಜಿಸಬೇಕು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರು ಆಡಳಿತ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಪೊಲೀಸ್‌ ವರ್ಗಾವಣೆಯಲ್ಲೂ ವಿಫಲತೆ ಕಾಣುತ್ತಿದೆ‘ ಎಂದೂ ಅವರು ದೂರಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಮಾತನಾಡಿ, ‘ಅತಿ ಹೆಚ್ಚಿನ ಮಾಹಿತಿ ಅರ್ಜಿ ಹಾಕುವವರ ವಿವರ ಕೊಡಿ ಎಂದು ಸರ್ಕಾರದ ಉಪ ಕಾರ್ಯದರ್ಶಿ ಸೂಚಿಸಿದ್ದಾರೆ. ಮಾಹಿತಿ ಹಕ್ಕು ಕಾನೂನಿಗೆ ವ್ಯತಿರಿಕ್ತವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ‘ ಎಂದರು.

‘ಸರ್ಕಾರವು ಮಾಹಿತಿಗಳನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಇದು ಕಾಯ್ದೆಗೆ ವಿರುದ್ಧವಾಗಿದೆ. ಹಗರಣಗಳು ಬಹಿರಂಗ ಆಗಬಾರದು ಎಂಬ ಉದ್ದೇಶ ಇದರಡಿ ಇದ್ದಂತಿದೆ. ಇದು ಭ್ರಷ್ಟಾಚಾರಕ್ಕೆ ಪೂರಕವಾಗಿದೆ‘ ಎಂದು ಹೇಳಿದರು.

ಮುಖಂಡ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ ರಾವ್ ಮಾತನಾಡಿ, ‘ಈ ಸರ್ಕಾರ ಪ್ರಶ್ನಿಸುವವರನ್ನು ಹತ್ತಿಕ್ಕುವ ಕೆಲಸ ಆರಂಭಿಸಿದೆ‘ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.