ಬೆಂಗಳೂರು: ಪರಿಶಿಷ್ಟರ ಕಲ್ಯಾಣ ‘ನಿಧಿ’ಯಡಿ 2014–15ರಿಂದ 2022–23ರ ಅವಧಿಯಲ್ಲಿ ಹಂಚಿಕೆ ಮಾಡಿದ್ದ ಅನುದಾನಕ್ಕೆ ಕತ್ತರಿ ಹಾಕಿ ಅನ್ಯ ಯೋಜನೆಗಳಿಗೆ ₹ 15,553 ಕೋಟಿಗಳನ್ನು ಬಳಸಿಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಖಂಡಿಸಿದ್ದಾರೆ.
ಪರಿಶಿಷ್ಟರ ‘ನಿಧಿ’ ಬಳಕೆ ಕುರಿತು ‘ಪ್ರಜಾವಾಣಿ’ಯ ವಿಶೇಷ ವರದಿಯನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಅವರು, ‘ಶೋಷಿತ ಸಮುದಾಯಗಳನ್ನು ನಿರಂತರ ವಂಚಿಸಿ ಅಧಿಕಾರ ಕಬಳಿಸುತ್ತಾ ಬಂದಿರುವ ಕಾಂಗ್ರೆಸ್ ಈ ಬಾರಿಯ ತನ್ನ ಆಡಳಿತದಲ್ಲಿ (ಮಹಮದ್ ಘಜನಿಯ ಮಾದರಿ) ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾದ ನಿಧಿಯಲ್ಲಿ ₹25,396 ಕೋಟಿಯನ್ನು ತನ್ನ ಗ್ಯಾರಂಟಿ ಯೋಜನೆಗಳಿಗಾಗಿ ಬಳಸಿಕೊಂಡಿರುವುದು ವರದಿಯಾಗಿದೆ. ಇದು ಸಾಮಾಜಿಕ ನ್ಯಾಯವ್ಯವಸ್ಥೆಯ ಮೂಲೋದ್ದೇಶದ ಅಸ್ತಿತ್ವವನ್ನು ಅಲುಗಾಡಿಸಲು ಹೊರಟ ದಲಿತ ದ್ರೋಹಿ ಕ್ರಮವಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಸದ್ಯ ಈಗಾಗಲೇ ಎಸ್.ಟಿ ಸಮುದಾಯದ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿಹೊಡೆದ ಕಾಂಗ್ರೆಸ್ ಸರ್ಕಾರ, ಇದೀಗ ದಲಿತರ ಶ್ರೇಯೋಭಿವೃದ್ಧಿಗೆ ಇಟ್ಟಿರುವ ಹಣವನ್ನೆಲ್ಲ ಅನ್ಯ ಯೋಜನೆಗಳಿಗೆ ಬಳಸಿ ಪರಿಶಿಷ್ಟ ಸಮುದಾಯದ ಕಲ್ಯಾಣ ಕಾರ್ಯಗಳಿಗೆ ‘ಇತಿ ಶ್ರೀ’ ಹಾಡಲು ಹೊರಟಿರುವ ಕ್ರಮವನ್ನು ಬಿಜೆಪಿ ಸಹಿಸುವ ಮಾತೇ ಇಲ್ಲ. ದಲಿತ ಪರ ದನಿ ಎತ್ತಿ ಸದನದ ಒಳಗೆ ಹೊರಗೆ ಹೋರಾಡುವ ಸಂಕಲ್ಪ ತೊಟ್ಟಿದ್ದೇವೆ’ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.