ಧಾರವಾಡ: ‘ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ಮತ್ತು ಶಾಸಕರ ವೇದಿಕೆಯಲ್ಲಿ ನಿರ್ಧಾರವಾಗುತ್ತದೆ’ ಎಂದು ಎಂದು ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ಪ್ರತಿಕ್ರಿಯಿಸಿದರು.
ಚಂದ್ರಶೇಖರ ಸ್ವಾಮೀಜಿ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಅದೂ ಒಂದು ಕಾಲ ಬರುತ್ತದೆ. ಎರಡು ವರ್ಷಕ್ಕೋ, ಎರಡೂವರೆ ವರ್ಷಕ್ಕೋ ಅದೆಲ್ಲ ಪಕ್ಷದ ವೇದಿಕೆಯಲ್ಲಿ ತೀರ್ಮಾನವಾಗುತ್ತದೆ. ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಪಕ್ಷದಲ್ಲಿ ಎಲ್ಲರಿಗಿಂತ ಬದ್ಧತೆ ಇರುವ ವ್ಯಕ್ತಿ. ಯಾವಾಗ ಯಾರೂ ಮುಖ್ಯಮಂತ್ರಿಯಾಗಬೇಕು, ಸಚಿವರಾಗಬೇಕು’ ಎಂದು ಪಕ್ಷ ನಿರ್ಧರಿಸುತ್ತದೆ’ ಎಂದು ಉತ್ತರಿಸಿದರು.
‘ಕೇಂದ್ರ ಸರ್ಕಾರವು ಪೆಟ್ರೋಲ್ ಬೆಲೆ ಲೀಟರ್‌ಗೆ ₹70 ರಿಂದ ₹100ಕ್ಕೆ ಏರಿಕೆ ಮಾಡಿದಾಗ, ಎಲ್‌ಪಿಜಿ ಸಿಲಿಂಡರ್ ಬೆಲೆ ₹ 400 ರಿಂದ ₹ 1200ಕ್ಕ ಹೆಚ್ಚಳ ಮಾಡಿದಾಗ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮೋದಿ ಅವರಿಗೆ ಕಡಿಮೆ ಮಾಡಲು ಹೇಳಿದ್ರಾ? ಕೇಂದ್ರ, ರಾಜ್ಯದಲ್ಲಿ ಯಾವುದೇ ಸರ್ಕಾರ ರಚನೆಯಾದಾಗ ಬೆಲೆ ಏರಿಕೆ ಮಾಡುತ್ತವೆ. ಬೆಲೆ ಏರಿಕೆ ಮಾಡದೆ ಅಭಿವೃದ್ಧಿ ಮಾಡಲು ಆಗಲ್ಲ. ಬೆಲೆ ಏರಿಕೆ ಮಿತಿಯೊಳಗಿರಬೇಕು. ಸಿದ್ದರಾಮಯ್ಯ ಸರ್ಕಾರವು ಮಿತಿಯನ್ನು ಮೀರಿಲ್ಲ. ಮೋದಿಯವರು ಮಿತಿ ಮೀರಿ ಏರಿಕೆ ಮಾಡಿದ್ದರು’ ಎಂದು ದೂರಿದರು.
‘ಚನ್ನಪಟ್ಟಣ ಉಪಚುನಾವಣೆವನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸಿದ ಕ್ಷೇತ್ರ. ಅಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎಂದರೆ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು, ಪ್ರಯತ್ನ ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.