ಬೆಂಗಳೂರು: ರಿಸರ್ವ್ ಬ್ಯಾಂಕಿನಲ್ಲಿರುವುದಕ್ಕಿಂತ ಹೆಚ್ಚು ಹಣ ಬಿಜೆಪಿಗರ ಮನೆಯಲ್ಲಿದೆ! ಒಬ್ಬ ಶಾಸಕರದ್ದೇ ಈ ಪರಿ ಲೂಟಿ ಇರುವಾಗ ಮಂತ್ರಿಗಳ ಲೂಟಿ ಇನ್ನೆಷ್ಟು? ಇಂದು ಅಮಿತ್ ಶಾ ಬರುತ್ತಿರುವುದಕ್ಕೂ, ಈ ನಿಧಿ ಸಂಗ್ರಹಕ್ಕೂ ಸಂಬಂಧವಿದೆಯೇ? ಅಮಿತ್ ಶಾ ಬರುತ್ತಿರುವುದೇ ಇಲ್ಲಿನ 'ಸಂಪತ್ತು' ಕೊಂಡೊಯ್ಯುವುದಕ್ಕಾ? ಎಂದು ಬಿಜೆಪಿಯನ್ನು ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.
ಲಂಚ ಪ್ರಕರಣದಲ್ಲಿ ಕೆಎಸ್ ಡಿಎಲ್ ಅಧ್ಯಕ್ಷರೂ ಆಗಿರುವ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಶಾಂತ್ ಮಾಡಾಳ್ ಮನೆಯಲ್ಲಿ ₹6 ಕೋಟಿ ನಗದನ್ನು ಲೋಕಾಯುಕ್ತ ಪೊಲೀಸರು ಗುರುವಾರ ತಡರಾತ್ರಿ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬಿಜೆಪಿ ವಿರುದ್ಧ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ: ಪ್ರಶಾಂತ್ ಮಾಡಾಳ್ ಮನೆಯಲ್ಲಿ ₹6 ಕೋಟಿ ನಗದು ವಶ
ಕಮಿಷನ್ ಲೂಟಿಗೆ ದಾಖಲೆ ಕೇಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ದಾಖಲೆಗಳು ಕಂತೆ ಕಂತೆಯಾಗಿ ಸಿಕ್ಕಿವೆ ನೋಡಿ. ಈಗ ಕಮಿಷನ್ ಆರೋಪ ಒಪ್ಪುವಿರಾ? ಚುನಾವಣೆ ಖರ್ಚಿಗಾಗಿ ಬಿಜೆಪಿಯ #ElectionCollection ಬಿರುಸಿನಿಂದ ಸಾಗಿದೆ, ಅಧಿಕಾರಾವಧಿ ಮುಗಿಯುತ್ತಿದೆ, ಮತ್ತೆಂದೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ಬಕಾಸುರನಂತೆ ದೋಚಿ ಬಾಚುತ್ತಿದೆ ಎಂದು ಆರೋಪಿಸಿದೆ.
ಶಾಸಕರ ಮನೆಯಲ್ಲಿ ಸಿಕ್ಕ ಹಣದ ರಹಸ್ಯವೇನು? ಈ ಹಣ #PayCMಗೆ ತಲುಪಿಸುವುದಕ್ಕಾ ಅಥವಾ #PayPMಗೆ ತಲುಪಿಸುವುದಕ್ಕಾ? ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವ ಮೊ-ಶಾ ಜೋಡಿಗೆ ಕರ್ನಾಟಕ ಎಟಿಎಂ ಆಗಿದೆಯೇ? ಸಂಪತ್ತಿನ ಕ್ರೋಡೀಕರಣಕ್ಕಾಗಿಯೇ 40% ಕಮಿಷನ್ ಬಗ್ಗೆ ಮೋದಿ, ಶಾ ಮಾತಾಡುತ್ತಿಲ್ಲವೇ? ಎಂದು ಪ್ರಶ್ನಿಸಿದೆ.
"ನಾ ಖಾವುಂಗಾ, ನಾ ಖಾನೆದುಂಗಾ" ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರೇ, ಇಲ್ಲಿರುವುದು ಡಬಲ್ ಇಂಜಿನ್ ಸರ್ಕಾರವಲ್ಲ, ಡಬಲ್ ಲೂಟಿಯ ಸರ್ಕಾರ. ನಿಮ್ಮವರ ಲೂಟಿ ಸಾಧನೆಯನ್ನು ಕಣ್ತುಂಬಿಕೊಳ್ಳಲೆಂದೇ ಕರ್ನಾಟಕಕ್ಕೆ ತಿಂಗಳಿಗೆ ಮೂರು ಬಾರಿ ಬರುತ್ತಿರುವಿರಾ? "ಶಭಾಷ್" ಎಂದು ಬಿಜೆಪಿ ಭ್ರಷ್ಟರ ಬೆನ್ನು ತಟ್ಟಿ ಹೋಗುವಿರಾ? ಎಂದು #ElectionCollection ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಪ್ರಶ್ನೆ ಮಾಡಿದೆ.
ಇದನ್ನೂ ಓದಿ: ₹40 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಸೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.