ಬೆಂಗಳೂರು: ಉಪಮುಖ್ಯಮಂತ್ರಿ ಹುದ್ದೆಗಳ ವಿಚಾರವನ್ನು ಸಚಿವರ ಮೂಲಕ ಮುನ್ನಲೆಗೆ ತಂದವರೇ ಮುಖ್ಯಮಂತ್ರಿ ಸಿದ್ದರಾಮಯ್ಯ. ಮುಖ್ಯಮಂತ್ರಿ– ಉಪಮುಖ್ಯಮಂತ್ರಿ ಹುದ್ದೆಗಳ ಕುರಿತು ಮುಂದಿನ ದಿನಗಳಲ್ಲಿ ಹಾದಿಬೀದಿಗಳಲ್ಲಿ ಹೊಡೆದಾಟ ನಡೆದರೂ ಅಚ್ಚರಿ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರನ್ನು ಬಲಿಕೊಡುವ ಉದ್ದೇಶದಿಂದಲೇ ಮುಖ್ಯಮಂತ್ರಿ ಈ ವಿಚಾರ ಪ್ರಸ್ತಾಪ ಮಾಡಿಸಿದ್ದಾರೆ. ಜನರ ಸಮಸ್ಯೆಗಳನ್ನು ಕೇಳಲು ಇವರಿಗೆ ಸಮಯವೇ ಇಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರು ಎಷ್ಟು ದಿನ ಮುಖ್ಯಮಂತ್ರಿ ಆಗಿರುತ್ತಾರೋ ಗೊತ್ತಿಲ್ಲ. ಈಗ ಅವರ ಬುಡಕ್ಕೇ ಬಂದಿದೆ. ಹೀಗಾಗಿ ರಾಜ್ಯದ ಅಭಿವೃದ್ಧಿ ಮತ್ತು ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಿದರೆ ಉಡಾಫೆ ಉತ್ತರ ಕೊಡುತ್ತಾರೆ. ಜನ ಕಾಂಗ್ರೆಸ್ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರು ಹಾದಿ ಬೀದಿಯಲ್ಲಿ ಹೊಡೆದಾಡುವ ಮಟ್ಟಕ್ಕೆ ಬಂದಿದೆ ಎಂದು ವಿಜಯೇಂದ್ರ ಹೇಳಿದರು.
ಲೋಕಸಭಾ ಚುನಾವಣೆಗೂ ಮೊದಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಒಟ್ಟಿಗೆ ಹೋಗುವುದೇನು, ತಿಂಡಿ ತಿನ್ನಿಸುವುದೇನು ಈಗ ಪರಸ್ಪರ ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಪರಸ್ಪರ ಬುಡ ಕೊಯ್ಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಮುಂದೆ ಏನೇನು ಆಗುತ್ತದೆ ಕಾದು ನೋಡಬೇಕು ಎಂದು ವ್ಯಂಗ್ಯವಾಗಿ ನುಡಿದರು.
‘ನಾವು ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಿರಂತರ ಹೋರಾಟ ಮಾಡುತ್ತೇವೆ. ಇದರ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ಸತ್ಯನಾರಾಯಣ ಅವರು ಆರೋಪಗಳನ್ನು ಮಾಡಿದ್ದಾರೆ. ಆದರೆ ಮಾಜಿ ಸಚಿವ ನಾಗೇಂದ್ರ ಅವರನ್ನು ಇನ್ನೂ ವಿಚಾರಣೆಗೆ ಒಳಪಡಿಸಿಲ್ಲ. ಎಸ್‌ಐಟಿಗೆ ಆ ಧೈರ್ಯವೇ ಇಲ್ಲ. ಈ ವಿಚಾರದಲ್ಲಿ ನ್ಯಾಯಾಲಯ ಸರ್ಕಾರಕ್ಕೆ ಛೀಮಾರಿ ಹಾಕಿದೆ’ ಎಂದು ಅವರು ಕಿಡಿಕಾರಿದರು.
‘ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಯಾರನ್ನೇ ಕಣಕ್ಕೆ ಇಳಿಸಿದರೂ ಸರಿ ಎನ್‌ಡಿಎಯಿಂದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ. ಚನ್ನಪಟ್ಟಣವಲ್ಲದೇ, ಶಿಗ್ಗಾವಿ, ಸಂಡೂರು ಸೇರಿ ಎಲ್ಲ ಉಪಚುನಾವಣೆಗಳಲ್ಲೂ ಗೆಲ್ಲುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.