ಚಿಕ್ಕಮಗಳೂರು: ‘ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಲು ಸರ್ಕಾರ ಹೊರಟಿದೆ. ಇನ್ನು ಉಸಿರಾಡುವ ಗಾಳಿಯ ಮೇಲೆ ತೆರಿಗೆ ವಿಧಿಸುವುದಷ್ಟೇ ಬಾಕಿ ಇದೆ. ಅದನ್ನು ಮಾಡಿದರೆ ಕಾಂಗ್ರೆಸ್‌ನವರು ಔರಂಗಜೇಬನ ಅಪ್ಪಂದಿರು ಎಂಬುದನ್ನು ಸಾಬೀತು ಮಾಡಿದಂತೆ ಆಗಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಲೇವಡಿ ಮಾಡಿದರು.
‘ಅಧಿಕಾರಕ್ಕೆ ಬಂದ ಕೂಡಲೇ ಮದ್ಯದ ದರ, ಆಸ್ತಿ ನೋಂದಣಿ ಶುಲ್ಕ, ವಿದ್ಯುತ್ ದರ ಏರಿಸಿದ್ದರು. ಈಗ ನೀರಿನ ದರ ಏರಿಸಲು ಹೊರಟಿದ್ದಾರೆ. ಔರಂಗಜೇಬ ಜಿಜಿಯಾ ತಲೆ ಕಂದಾಯ ವಿಧಿಸುತ್ತಿದ್ದ. ಕಾಂಗ್ರೆಸ್‌ನವರು ಗಾಳಿಗೂ ತೆರಿಗೆ ವಿಧಿಸಲಿ. ಆಗ ತೆರಿಗೆ ವಿಧಿಸಲು ಇನ್ನೇನು ಬಾಕಿ ಉಳಿಯುವುದಿಲ್ಲ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
‘ಜೇಬಿನಲ್ಲಿ ಹಣ ಕದಿಯಬೇಕೆಂದರೆ ಕಳ್ಳರು ವ್ಯಕ್ತಿಯ ಗಮನ ಬೇರೆಡೆ ಸೆಳೆಯಲು ರಸ್ತೆಗೆ ಐದು ರೂಪಾಯಿ ಎಸೆಯುತ್ತಾರೆ. ಅವರು ಅದನ್ನು ತೆಗೆದುಕೊಳ್ಳಲು ಬಗ್ಗಿದಾಗ ಜೇಬಿನಿಂದ ₹500 ಎತ್ತುತ್ತಾರೆ. ಕಾಂಗ್ರೆಸ್‌ನವರು ಗ್ಯಾರಂಟಿ ಹೆಸರಿನಲ್ಲಿ ₹2 ಸಾವಿರ ನೀಡಿ ಜನರ ಗಮನ ಬೇರೆಡೆ ಸೆಳೆದು ಅವರಿಂದಲೇ ₹20 ಸಾವಿರ ವನ್ನು ಕಸಿದುಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.
‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಂಧಿಸಲು ಅದೇನು ಪುಗಸಟ್ಟೆ ಪುನಗಲ್ಲ. ನ್ಯಾಯಾಲಯ ಇದೆ, ಕಾನೂನಿದೆ. 2013ರಿಂದ ಕಾಂಗ್ರೆಸ್ ಆಡಳಿತದಲ್ಲಿ ಇತ್ತು, 2018ರಲ್ಲಿ ಕಾಂಗ್ರೆಸ್ ಬೆಂಬಲದಿಂದಲೇ ಮುಖ್ಯಮಂತ್ರಿ ಆಗಿದ್ದರು. ಆಗ ಏಕೆ ಕುಮಾರಸ್ವಾಮಿ ವಿರುದ್ಧದ ಈ ಪ್ರಕರಣ ಕೆದಕಲಿಲ್ಲ. ಕಾಂಗ್ರೆಸ್ ಹಗರಣಗಳು ಬಹಿರಂಗವಾದ ಬಳಿಕ ಕುಮಾರಸ್ವಾಮಿ ವಿರುದ್ಧದ ಪ್ರಕರಣ ಕೆದಕಲು ಹೊರಟಿದ್ದಾರೆ. ಈ ದ್ವೇಷ ಏಕೆ ಎಂಬುದು ಎಲ್ಲರಿಗೂ ಅರ್ಥವಾಗಿದೆ’ ಎಂದರು.
‘ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಜೋಡೆತ್ತು, ಅಣ್ತಮ್ಮ, ಜನುಮ ಜನುಮದ ಜೋಡಿ ಎಂದೆಲ್ಲಾ ಕರೆದುಕೊಂಡಿದ್ದರು. ಈಗ ಬಿಜೆಪಿ ಜತೆಗೆ ಹೋದ ಕೂಡಲೇ ಕುಮಾರಸ್ವಾಮಿಖಳನಾಯಕರಾದರೆ’ ಎಂದು
ಸಿ.ಟಿ.ರವಿ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.