ಬೆಂಗಳೂರು: ‘ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಲಿ’ ಎಂದು ಕಾಂಗ್ರೆಸ್ಸಿನ ಕೆಲವು ಶಾಸಕರು ಪದೇ ಪದೇ ಹೇಳಿಕೆ ನೀಡುತ್ತಿರುವುದು ದೋಸ್ತಿ (ಜೆಡಿಎಸ್– ಕಾಂಗ್ರೆಸ್) ಸರ್ಕಾರಕ್ಕೆ ಇರಿಸುಮುರಿಸು ಉಂಟುಮಾಡಿದೆ.
ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಶಾಸಕರ ಪೈಕಿ ಕೆಲವರು, ‘ನಮಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ’ ಎಂದು ಹೇಳಿಕೊಂಡಿದ್ದರು. ಆದರೆ, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಅವರೇ ಮುಖ್ಯಮಂತ್ರಿ ಆಗಲಿ’ ಎನ್ನುತ್ತಿರುವುದು ಉಭಯ ಪಕ್ಷಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಬೆನ್ನಲ್ಲೆ, ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬುಧವಾರ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ’ ಎಂಬ ಕಾಂಗ್ರೆಸ್ ಶಾಸಕರ ಹೇಳಿಕೆ ವಿಚಾರ ಈ ವೇಳೆ ಪ್ರಸ್ತಾಪಗೊಂಡಿದ್ದು, ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.
‘ಇಂತಹ ಹೇಳಿಕೆಗಳಿಂದ ಸಮ್ಮಿಶ್ರ ಸರ್ಕಾರ ನಡೆಸುವ ನನಗೆ ಮುಜುಗರವಾಗುತ್ತದೆ. ಇದು ಹೀಗೆ ಮುಂದುವರಿದರೆ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ಶಾಸಕರನ್ನು ಕರೆಸಿ ಮಾತನಾಡಿ’ ಎಂದು ಇಬ್ಬರು ನಾಯಕ
ರಿಗೂ ಕುಮಾರಸ್ವಾಮಿ ತಿಳಿಹೇಳಿದ್ದಾರೆ.
‘ಕೈ’ ಶಾಸಕರ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಎಚ್. ವಿಶ್ವನಾಥ್, ‘ಸರ್ಕಾರ ಬಿದ್ದು ಹೋದರೆ ಏನು ಮಾಡಲು ಸಾಧ್ಯ ಹೇಳಿ. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಸದ್ಯ ಯಾವುದೇ ಮಾರ್ಗ ಇಲ್ಲ’ ಎಂದರು.
‘ಈಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಪರಮೇಶ್ವರ ಕೂಡಾ ಹೇಳಿದ್ದಾರೆ. ಅವರ ಮಾತು ಸರಿ. ಕಾಂಗ್ರೆಸ್ ಮುಖಂಡರು ಹೀಗೆ ಹೇಳುವುದು ಸರಿಯಲ್ಲ’ ಎಂದರು.
‘ಮುಖ್ಯಮಂತ್ರಿಗೆ ಆಹ್ವಾನ’: ಕುಮಾರಸ್ವಾಮಿ ಭೇಟಿ ಬಳಿಕ ಮಾತನಾಡಿದ ಪರಮೇಶ್ವರ, ‘ಚಿಂಚೋಳಿ ಮತ್ತು ಕುಂದಗೋಳ ಕ್ಷೇತ್ರಗಳ ಉಪಚುನಾವಣೆ ವಿಚಾರವಾಗಿ ಚರ್ಚೆ ಮಾಡಲು ಬಂದಿದ್ದೆವು. ಈ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಬರುವಂತೆ ಮುಖ್ಯಮಂತ್ರಿಗೆ ಆಹ್ವಾನ ನೀಡಿದ್ದೇವೆ’ ಎಂದು ಹೇಳಿದರು.
‘ಜನರ ಆಶೀರ್ವಾದ ಇದ್ದರೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬಹುದು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಕೆಲವರು ಆಸೆ ಪಟ್ಟಿರಬಹುದು. ಇದರಲ್ಲಿ ತಪ್ಪೇನಿದೆ’ ಎಂದರು.
ಕುರ್ಚಿ ಖಾಲಿ ಇಲ್ಲ: ‘ಸಿದ್ದರಾಮಯ್ಯ ನಮ್ಮ ನಾಯಕ, ಅದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಈಗ ಸಿ.ಎಂ ಆಗುವ ಪ್ರಶ್ನೆ ಉದ್ಭವಿಸದು, ಈಗ ಕುರ್ಚಿ ಖಾಲಿ ಇಲ್ಲ, ಖಾಲಿ ಆದ ನಂತರ ನೋಡೋಣ’ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಸಿದ್ದರಾಮಯ್ಯ ಮತ್ತೆ ಸಿ.ಎಂ: ಕಾಗಿನೆಲೆ ಶ್ರೀ
ಹೂವಿನಹಡಗಲಿ: ‘ಸಿದ್ದರಾಮಯ್ಯ ಅವರ ಕೊಡುಗೆಯನ್ನು ಅರ್ಥ ಮಾಡಿಕೊಳ್ಳದೇ ಕಳೆದ ಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದ ಜನರಿಗೆ ಈಗ ತಪ್ಪಿನ ಅರಿವಾಗಿದೆ. ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದು ನಿಶ್ಚಿತ’ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
‘ರಾಜ್ಯದ ಜನರ ಆಶಯವೂ ಇದೇ ಆಗಿದೆ. ಶೋಷಿತರು, ಹಿಂದುಳಿದವರಿಗಾಗಿ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಅವರನ್ನು ಗೆಲ್ಲಿಸದೇ ತಪ್ಪು ಮಾಡಿದ್ದೇವೆ ಎಂಬ ಅರಿವು ಜನರಿಗೆ ಆಗಿದೆ’ ಎಂದರು.
‘ಕುರುಬ ಸಮುದಾಯ ಯಾವತ್ತೂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಇರುತ್ತದೆ. ಕಾಂಗ್ರೆಸ್ ಶಾಸಕರು ಸೇರಿದಂತೆ ರಾಜ್ಯದ ಜನತೆಯೂ ಅವರ ನಾಯಕತ್ವವನ್ನು ಬಯಸಿದ್ದಾರೆ’ ಎಂದು ಹೇಳಿದರು.
ಸಿದ್ದರಾಮಯ್ಯ ಮತ್ತೆ ಸಿ.ಎಂ: ಕಾಗಿನೆಲೆ ಶ್ರೀ
ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ಬುಧವಾರ ಕಾಗಿನೆಲೆ ಶಾಖಾ ಮಠ ‘ಏಳುಕೋಟಿಭಕ್ತರ ಕುಟೀರ’ ಉದ್ಘಾಟಿಸಿ ಸಿದ್ದರಾಮಯ್ಯ ಮಾತನಾಡುತ್ತಿದ್ದ ಸಂದರ್ಭದಲ್ಲಿ ‘ನೀವು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು’ ಎಂದು ಸಭಿಕರು
ಜೋರಾಗಿ ಕೂಗಿದರು.
‘ಅಯ್ಯೋ ನಂದೆಲ್ಲಾ ಆಗೋಯ್ತಲ್ಲಯ್ಯಾ’ ಎಂದು ಮಾತು ಆರಂಭಿಸಿದ ಸಿದ್ದರಾಮಯ್ಯ, ‘ರಾಜಕಾರಣದಲ್ಲಿ ಏನೇ ಆಗಬೇಕಾದರೂ ಜನರ ಆಶೀರ್ವಾದ ಬೇಕೇ ಬೇಕು. ಇಲ್ಲದಿದ್ದರೆ ಬರೀ ಬುರುಡೆದಾಸಆಗಬೇಕಾಗುತ್ತದೆ. ಅಧಿಕಾರದಲ್ಲಿ ಕೂಡಿಸುವವರು, ಕೆಳಗೆ ಇಳಿಸುವವರೂ ಜನರೇ ಆಗಿದ್ದಾರೆ’ ಎಂದರು.
ಫಲಿತಾಂಶದ ನಂತರ ಮೈತ್ರಿ ಸರ್ಕಾರ ಪತನ: ರಾವ್
ನವದೆಹಲಿ: ‘ಕಾಂಗ್ರೆಸ್– ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ನಾವು ಕೈ ಹಾಕುವುದಿಲ್ಲ. ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದೇ ಈಗ ನಮ್ಮೆದುರಿರುವ ಗುರಿ’ ಎಂದು ಬಿಜೆಪಿಯ ಕರ್ನಾಟಕ ಉಸ್ತುವಾರಿ ಪಿ.ಮುರುಳೀಧರ ರಾವ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿ ಕನಿಷ್ಠ 22 ಕ್ಷೇತ್ರಗಳಲ್ಲಿ ಜಯಿಸಲಿದೆ. ಚುನಾವಣೆಯನ್ನೇ ಗುರಿಯಾಗಿಸಿಕೊಂಡು ಮಾಡಿರುವ ಮೈತ್ರಿಯ ಉದ್ದೇಶ ಈಡೇರದಿದ್ದಲ್ಲಿ ರಾಜ್ಯ ಸರ್ಕಾರ ಪತನವಾಗುವುದು ಖಚಿತ’ ಎಂದು ಹೇಳಿದರು.
***
ಮಾನ ಮನಸ್ಕರು ಸೇರಿದರೂ ಕಾಂಗ್ರೆಸ್ ಶಾಸಕರ ಸಂಖ್ಯೆ 113 ಆಗುವುದಿಲ್ಲ. ತಕ್ಷಣಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಅವಕಾಶ ಇಲ್ಲ
-ಎಚ್. ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ
ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲಿ ಎನ್ನುವುದು ಈಗ ಅಪ್ರಸ್ತುತ. ಈ ರೀತಿಯ ಹೇಳಿಕೆ ನೀಡಿರುವ ಸಚಿವರ ಜೊತೆ ನಾನು ಮಾತನಾಡುತ್ತೇನೆ
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ನನ್ನ ಮೇಲಿನ ಅಭಿಮಾನದಿಂದ ಮುಖ್ಯಮಂತ್ರಿ ಆಗಲಿ ಎನ್ನುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ. ಜನಾಶೀರ್ವಾದ ಇದ್ದರೆ ಮತ್ತೆ ಮುಖ್ಯಮಂತ್ರಿ ಆಗುವೆ
-ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.