ADVERTISEMENT

‘ಸಾಂದರ್ಭಿಕ ಶಿಶು /14 ತಿಂಗಳ ಮಗು’ ಅರ್ಥಾತ್‌‘ಮೈತ್ರಿ vs ಬಿಜೆಪಿ’ ಡ್ರಾಮಗೆ ತೆರೆ

ಕರ್‌ ‘ನಾಟಕ’ ಸರ್ಕಾರ ಸರ್ಕಸ್ | ‘ಮೈತ್ರಿ’ ಪತನದವರೆಗಿನ ಘಟನಾವಳಿ

ಶಿವಕುಮಾರ ಜಿ.ಎನ್.
Published 30 ಜುಲೈ 2019, 19:47 IST
Last Updated 30 ಜುಲೈ 2019, 19:47 IST
   

ಈ ವರ್ಷದ ಜುಲೈ ತಿಂಗಳು ಕರ್ನಾಟಕ ರಾಜ್ಯ ರಾಜಕಾರಣ ಸದಾ ನೆನಪಿನಲ್ಲಿ ಇರಿಸಿಕೊಳ್ಳುವ ತಿಂಗಳು.ಬಿಜೆಪಿ ನಾಯಕರು ಮೈತ್ರಿ ಸರ್ಕಾರಕ್ಕೆ ಅಂತಿಮ ಮೊಳೆ ಹೊಡೆದ ತಿಂಗಳು,ಆಂತರಿಕ ಭಿನ್ನಮತದಿಂದ ಹಳಸಿದ್ದ ಮೈತ್ರಿ ಹೋಳಾದ ತಿಂಗಳು, ‘ಸಾಂದರ್ಭಿಕ ಶಿಶು’ವಾಗಿ ಮುಖ್ಯಮಂತ್ರಿ ಗಾದಿಗೆ ಏರಿದ್ದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ 14 ತಿಂಗಳ ಮಗುವಾಗಿದ್ದಾಗ ಸಂಭವಿಸಿದ ರಾಜಕೀಯ ಸಂಕ್ಷೋಭೆಯಲ್ಲಿ ಪತನವಾದ ತಿಂಗಳು.ಈ ತಿಂಗಳಲ್ಲಿ ರಾಜ್ಯ ರಾಜಕಾರಣದ ರಂಗಮಂಚದ ಮೇಲೆ ನಡೆದ ಹಲವು ಅಂಕಗಳ ಬೃಹತ್ ನಾಟಕದ(ರಾಜಕೀಯ ವಿದ್ಯಮಾನ) ಸಮಗ್ರ ನೋಟ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ...

***

‘ವಿಷಕಂಠ’ನಾಗಿ ಕುಮಾರಸ್ವಾಮಿ ನೋವುಂಡು, ಕಣ್ಣೀರು ಹಾಕಿ, ಬಿಜೆಪಿ ಉರುಳುಸಿತ್ತಿದ್ದ ದಾಳಗಳನ್ನು ಸತತ 14 ತಿಂಗಳು ಹಾಗೂ ಹೀಗೂ ಸಾಗಹಾಕಿದರು. ‘ಬೂದಿ ಮುಚ್ಚಿದ ಕೆಂಡ’ದಂತಿದ್ದ ‘ಮೈತ್ರಿ’ಯಲ್ಲಿನ ಅಸಮಾಧಾನ ಕಾಂಗ್ರೆಸ್‌ ಶಾಸಕ ರಮೇಶ ಜಾರಕಿಹೊಳಿ ಮೂಲಕ ಹೊಗೆಯಾಡಲು ಆರಂಭಿಸಿ, ಕೊನೆಗೆ ಜೆಡಿಎಸ್‌–ಕಾಂಗ್ರೆಸ್‌ನ 16 ಶಾಸಕರು ರಾಜೀನಾಮೆ ನೀಡುವ ಮೂಲಕ ಬೆಂಕಿಯೇ ಹೊತ್ತಿಕೊಂಡಿತು. ಆ ಬೆಂಕಿಗೆ ಪೆಟ್ರೋಲ್ ಸುರಿಯಲು ಬಿಜೆಪಿಗೆ ಕಷ್ಟವಾಗಲಿಲ್ಲ. ಆದರೆ ನೀರು ಸುರಿಸಿ ಆರಿಸುವ ಮೈತ್ರಿ ನಾಯಕರ ಪ್ರಯತ್ನ ಫಲ ಕೊಡಲಿಲ್ಲ.

ADVERTISEMENT

ಹಲವು ತಿಂಗಳು ತಾಲೀಮು ನಡೆಸಿದ್ದ ರಾಜಕೀಯ ನಾಟಕಕ್ಕೆಜುಲೈ 1ರಂದು ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್‌ ರಾಜೀನಾಮೆ ನೀಡುವ ಮೂಲಕ ನಾಂದಿಪದ ಕೇಳಿಸಿತು.ಜುಲೈ 23ರ ರಾತ್ರಿ 8ಕ್ಕೆ ಸಿಎಂ ಕುಮಾರಸ್ವಾಮಿ ರಾಜಿನಾಮೆ ನೀಡುವ ಮೂಲಕ ತೆರೆಬಿತ್ತು.

ಈ ನಾಟಕದ ಹೆಸರನ್ನು ಕೆಲವರು,‘ಆಡಿಸಿ ನೋಡು ಬೀಳಿಸಿ ನೋಡು’ ಸರಣಿಯ‘ಸಾಂದರ್ಭಿಕ ಶಿಶು / 14 ತಿಂಗಳ ಮಗು’ ಎಂದರು. ಇನ್ನೂ ಕೆಲವರು, ‘ಮೈತ್ರಿ vs ಬಿಜೆಪಿ’ ಎಂದು ಮತ್ತೊಂದು ಹೆಸರಿನಿಂದ ಕರೆದರು.ಹೆಸರು ಯಾವುದಾದರೇನು, ನಟರು ಮಾತ್ರ ಅವರೇ.ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ ವಿಧಾನಸಭೆಯ ಕಲಾಪದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಳೆದ ಗುರುವಾರ ಮಂಡಿಸಿದ ವಿಶ್ವಾಸಮತ ಯಾಚನೆ ಮೇಲಿನ ಚರ್ಚೆ ಸತತ ನಾಲ್ಕು ದಿನ ನಡೆಯಿತು. ಸಿಎಂ ಭಾಷಣದ ಬಳಿಕ ಅಂತಿಮವಾಗಿ ಮತಕ್ಕೆ ಹಾಕಿದಾಗ ಸರ್ಕಾರದ ಪರವಾಗಿ 99 ಮತ ಪಡೆದ ‘ಮೈತ್ತಿ’ಯು 105 ಮತ ಪಡೆದ ವಿಪಕ್ಷ ಬಿಜೆಪಿ ವಿರುದ್ಧ ಬಿದ್ದುಹೋಯಿತು.

ಸಿಎಂ ಎದುರಿಸಿದ ದಿನಾಂಕ 23ರ ಮೂರು ದಿನಗಳು

ಒಟ್ಟು ನಾಟಕದಲ್ಲಿ ಗಮನ ಸೆಳೆದದ್ದು ಮಾತ್ರ 23ನೇ ತಾರೀಖು. ಇದುಕುಮಾರಸ್ವಾಮಿ ಪಾಲಿಗೆಶುಭವೂ ಹೌದು, ಅಶುಭವೂ ಹೌದು. ಮೇ 23, 2018ರಲ್ಲಿಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರದ ಕಾರಣ 23ಅವರಿಗೆ ಶುಭದಿನ. ಇದಾಗಿ ಸರಿಯಾಗಿ ಒಂದು ವರ್ಷದ ನಂತರ ಅಂದರೆಮೇ 23, 2019ರ ಲೋಕಸಭಾ ಚುನಾವಣೆಯ ಫಲಿತಾಂಶದ ದಿನ ಪುತ್ರ ನಿಖಿಲ್‌ ಸೋಲುಕಂಡದ್ದು, ಮನಸ್ಸಿಗೆ ಘಾಸಿಯುಂಟು ಮಾಡಿತು. ಇದೇ ಜುಲೈ 23ರಂದು ‘ವಿಶ್ವಾಸ’ ಕಳೆದುಕೊಂಡು ಮೈತ್ರಿ ಸರ್ಕಾರ ಬಿದ್ದು, ಸಿಎಂ ಸ್ಥಾನದಿಂದ ನಿರ್ಗಮಿಸಿದರು. ಇದು ಕುಮಾರಸ್ವಾಮಿ ಅವರ ರಾಜಕೀಯ ಜೀವನದಲ್ಲಿ 23ರ ಕರಾಮತ್ತು.

ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದ ಘಟನಾವಳಿಗಳ ಸರಣಿ ಹೀಗಿದೆ:

ಜುಲೈ 1 – ಕಾಂಗ್ರೆಸ್‌ ಶಾಸಕರಾದ ಆನಂದ್‌ ಸಿಂಗ್‌, ರಮೇಶ್ ಜಾರಕಿಹೊಳಿ ರಾಜೀನಾಮೆ.

ಬಳ್ಳಾರಿಯ ವಿಜಯನಗರ ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್‌ ಅವರು ಜುಲೈ 1ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಬಳಿಕ ಅಲ್ಲಿಂದ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ ಅವರಿಗೂ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಆನಂದ್‌ ಸಿಂಗ್‌ ರಾಜೀನಾಮೆಯಿಂದ ರಾಜ್ಯ ರಾಜಕೀಯದಲ್ಲಿ ಸಂಚನ ಸೃಷ್ಟಿಯಾಯಿತು. ಆದರೆ, ಸ್ಪೀಕರ್‌ ಮಾತ್ರ, ‘ನನಗ್ಯಾವ ಶಾಸಕರೂ ರಾಜೀನಾಮೆ ನೀಡಿಲ್ಲ’ ಎಂದು ಹೇಳಿದ್ದರು.

ಆನಂದ್‌ ಸಿಂಗ್‌ ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್‌ ಅವರ ಕಾರ್ಯದರ್ಶಿಗೆ ತಲುಪಿಸಿದ್ದರು. ಆದರೆ, ಸ್ಪೀಕರ್‌ ಅವರು ಇದನ್ನು ನಿರಾಕರಿಸಿ, ‘ನನ್ನನ್ನು ಯಾರೂ ಭೇಟಿಯಾಗಿ ರಾಜೀನಾಮೆ ಕೊಟ್ಟಿಲ್ಲ. ಒಂದು ವೇಳೆ ಯಾವುದೇ ಶಾಸಕ ರಾಜೀನಾಮೆ ನೀಡಿದರೆ, ಪರಾಮರ್ಶೆ ಮಾಡಿ ಅಂಗೀರಿಸಲಾಗುವುದು’ ಎಂದು ತಿಳಿಸಿದ್ದರು.

ಅದೇ ದಿನ ರಮೇಶ ಜಾರಕಿಹೊಳಿ ರಾಜೀನಾಮೆ

ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ರಾಜೀನಾಮೆ ಪರ್ವ ಶುರುವಾಗಿ, ಆನಂದ್‌ ಸಿಂಗ್‌ ರಾಜೀನಾಮೆ ಬೆನ್ನಲ್ಲೇ ಅದೇ ದಿನ ಬೆಳಗಾವಿ ಜಿಲ್ಲೆಯ ಗೋಕಾಕ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಮೇಶ್‌ ಜಾರಕಿಹೊಳಿ ರಾಜೀನಾಮೆ ನೀಡಿದರು. ತಮ್ಮ ರಾಜೀನಾಮೆ ಪತ್ರವನ್ನು ಅವರು ಸಭಾಧ್ಯಕ್ಷರಿಗೆ ಫ್ಯಾಕ್ಸ್‌ ಮೂಲಕ ಕಳುಹಿಸಿದ್ದರು. ಮರುದಿನ ಖುದ್ದಾಗಿ ಭೇಟಿ ಮಾಡಿ ಸಲ್ಲಿಸುವುದಾಗಿ ಹೇಳಿದ್ದರು.

ಈ ವೇಳೆ ಪ್ರತಿಕ್ರಿಯಿಸಿದ್ದ ವಿಧಾನಸಭೆ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌, ‘ರಾಜೀನಾಮೆ ಪತ್ರವನ್ನು ಫ್ಯಾಕ್ಸ್‌ ಮೂಲಕ ಕಳುಹಿಸಲು ನಾವು ಅಂಚೆ ಇಲಾಖೆ ಅಲ್ಲ’ ಎಂದಿದ್ದರು.

ತಮ್ಮ ರಾಜೀನಾಮೆಗೂ ಮೊದಲು ಮಾತನಾಡಿದ್ದ ರಮೇಶ್‌ ಜಾರಕಿಹೊಳಿ, ‘ಯಾವಾಗ ರಾಜೀನಾಮೆ ನೀಡುತ್ತೇನೆ ಎಂದು ಶೀಘ್ರದಲ್ಲಿಯೇ ತಿಳಿಸುತ್ತೇನೆ. ಆದರೆ ಒಬ್ಬನೇ ರಾಜೀನಾಮೆ ಕೊಟ್ಟರೆ ಏನೂ ಪ್ರಯೋಜನವಿಲ್ಲ. ಒಂದಿಷ್ಟು ಜನ ಸೇರಿ ಗುಂಪಾಗಿ ರಾಜೀನಾಮೆ ನೀಡುತ್ತೇವೆ’ ಎಂದು ಬಂಡಾಯದ ವರಸೆ ಮುಂದುವರೆಸಿದ್ದರು.

ಸಿಎಂ ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸದಲ್ಲಿದ್ದಾಗ ರಾಜೀನಾಮೆ ಪರ್ವ ಆರಂಭವಾಯಿತು. ಈ ವೇಳೆ ಅಮೆರಿಕದಿಂದಲೇ ಪ್ರತಿಕ್ರಿಯಿಸಿದ್ದ ಸಿಎಂ, ಟ್ವೀಟ್‌ ಮಾಡಿ, ‘ನಾನು ಇಲ್ಲಿಂದ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹಗಲುಗನಸು ಕಾಣುತ್ತಿದೆ’ ಎಂದು ಹೇಳಿದ್ದರು.

ಜುಲೈ 6 – ಹಿರಿಯ ರಾಜಕಾರಣಿ ರಾಮಲಿಂಗಾ ರೆಡ್ಡಿ ಸೇರಿ 11 ಶಾಸಕರ ರಾಜೀನಾಮೆ

ರಾಜೀನಾಮೆ ಪರ್ವದ ಎರಡನೇ ಹಂತದಲ್ಲಿ ಜುಲೈ 6ರಂದು ಕಾಂಗ್ರೆಸ್‌ನ 8, ಜೆಡಿಎಸ್‌ನ ಮೂವರು ಸೇರಿ 11 ಶಾಸಕರು ಸ್ಪೀಕರ್‌ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದರು. ಅಂದು ಸ್ಪೀಕರ್‌ ಕಾರ್ಯನಿಮಿತ್ತ ಕಚೇರಿಯಿಂದ 12.30ಕ್ಕೆ ಕಚೇರಿಯಿಂದ ತೆರಳಿದ್ದರು. ಆಗ ಶಾಸಕರು ಸ್ಪೀಕರ್ ಅವರ ಕಾರ್ಯದರ್ಶಿಗೆರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದರು.

ತಾವು ಕಚೇರಿಯಲ್ಲಿ ಇಲ್ಲದ ಕಾರಣ ರಾಜೀನಾಮೆ ಪತ್ರಗಳನ್ನು ಸ್ವೀಕರಿಸಿ, ಶಾಸಕರಿಗೆ ಸ್ವೀಕೃತಿ ಪತ್ರ ನೀಡುವಂತೆ ನಮ್ಮ ಕಚೇರಿಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ತಿಳಿಸಿದ್ದರು.

ಅಂದು ರಾಜೀನಾಮೆ ಸಲ್ಲಿಸಿದವರು...

ಕಾಂಗ್ರೆಸ್‌ ಶಾಸಕರು– ಬೆಂಗಳೂರುಬಿ.ಟಿ.ಎಂ ಲೇಔಟ್‌ನ ರಾಮಲಿಂಗಾ ರೆಡ್ಡಿ, ಹಿರೇಕೆರೂರು ಕ್ಷೇತ್ರದ ಬಿ.ಸಿ.ಪಾಟೀಲ್‌, ಮಸ್ಕಿ ಕ್ಷೇತ್ರದ ಪ್ರತಾಪಗೌಡ ಪಾಟೀಲ್‌, ಯಲ್ಲಾಪುರ ಕ್ಷೇತ್ರದಶಿವರಾಮ ಹೆಬ್ಬಾರ್‌, ಅಥಣಿ ಕ್ಷೇತ್ರದ ಮಹೇಶ್‌ ಕುಮಠಳ್ಳಿ, ಯಶವಂತಪುರ ಕ್ಷೇತ್ರದ ಎಸ್.ಟಿ.ಸೋಮಶೇಖರ್, ಕೆ.ಆರ್‌.ಪುರಂ ಕ್ಷೇತ್ರದಭೈರತಿ ಬಸವರಾಜ್‌ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರದ ಎನ್‌.ಮುನಿರತ್ನ.

ಜೆಡಿಎಸ್‌ ಶಾಸಕರು– ಪಕ್ಷದ ಮಾಜಿ ಅಧ್ಯಕ್ಷ, ಹುಣಸೂರು ಕ್ಷೇತ್ರದ ಶಾಸಕ ಎಚ್‌.ವಿಶ್ವನಾಥ್‌, ಕೃಷ್ಣರಾಜಪೇಟೆಯ ನಾರಾಯಣ ಗೌಡ, ಮಹಾಲಕ್ಷ್ಮೀ ಲೇಔಟ್‌ನ ಕೆ.ಗೋಪಾಲಯ್ಯ.

ಮೊದಲು ರಾಜೀನಾಮೆ ನೀಡಿದ್ದ ಇಬ್ಬರು ಹಾಗೂ ಇಂದು ನೀಡಿದ್ದ 11 ಮಂದಿ ಸೇರಿ 13 ಶಾಸಕರ ರಾಜೀನಾಮೆಯಿಂದಾಗಿ ಸರ್ಕಾರದ ಬೇರು ಸಡಿಲವಾದ ಲಕ್ಷಣಗಳು ಗೋಚರಿಸಿದವು.

ಜುಲೈ 07– ಸಿಎಂ ಕುಮಾರಸ್ವಾಮಿ ಬೆಂಗಳೂರಿಗೆ ವಾಪಸ್‌

ರಾಜ್ಯದಲ್ಲಿ ರಾಜೀನಾಮೆ ಪರ್ವ ಮುಂದುವರಿದ್ದರಿಂದ ಅಮೆರಿಕದಲ್ಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಹಿಂದಿರುಗಿದರು. ರಾಜೀನಾಮೆ ನೀಡಿ ಅದಾಗಲೇ ಮುಂಬೈಗೆ ತೆರಳಿದ್ದ ಶಾಸಕರನ್ನು ವಾಪಸ್‌ ಕರೆತರುವ ಮಾರ್ಗಗಳ ಕುರಿತು ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರ ಜತೆಗೂಡಿ ಸಭೆ, ಚರ್ಚೆ ನಡೆಸಿದರು.

ಜುಲೈ 08– ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಇಬ್ಬರು ಪಕ್ಷೇತರರ ರಾಜೀನಾಮೆ

ಮೈತ್ರಿ ಸರ್ಕಾರಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯುಂಟು ಮಾಡಿದ್ದು ಜುಲೈ 8ರಂದು ಮತ್ತಿಬ್ಬರ ರಾಜೀನಾಮೆ. ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ಮತ್ತು ಮೈತ್ರಿ ಸರ್ಕಾರದನೂತನ ಸಚಿವರಾದಎಚ್‌.ನಾಗೇಶ್ ಮತ್ತು ಆರ್‌.ಶಂಕರ್‌ ಅವರು ಅಂದು ಸಂಜೆ 6ಕ್ಕೆ ರಾಜೀನಾಮೆ ಸಲ್ಲಿಸಿದರು. ಜೂನ್‌ 14ರಂದು ಮೈತ್ರಿ ಸರ್ಕಾರದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾಗಿದ್ದರು. ಈ ಇಬ್ಬರೂ ಸರ್ಕಾರಕ್ಕೆ ತಾವು ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುವುದಾಗಿ ಘೋಷಿಸಿ, ಮುಂಬೈನಲ್ಲಿ ತಂಗಿದ್ದ 11 ಅತೃಪ್ತ ಶಾಸಕರ ಗುಂಪು ಸೇರಿಕೊಂಡರು.

ಜುಲೈ 09 – ರೋಷನ್‌ಬೇಗ್‌ ರಾಜೀನಾಮೆ; 8 ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದ ಸ್ಪೀಕರ್

ಮೈತ್ರಿ ಪಡೆಯಲ್ಲಿ ಅಸಮಾಧಾನಗೊಂಡ ಶಾಸಕರ ಪಟ್ಟಿಯಲ್ಲಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಆರ್‌.ರೋಷನ್‌ ಬೇಗ್‌ ಜುಲೈ 9ರಂದು ಸ್ಪೀಕರ್‌ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದರು.‘ಎಂದಿನಂತೆ ನಾನು ಕಾಂಗ್ರೆಸ್‌ನಲ್ಲೇ ಇದ್ದೇನೆ. ಆದರೆ, ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇನೆ. ನಾನು ಮುಂಬೈ ಅಥವಾ ಗೋವಾಕ್ಕೆ ಹೋಗಲ್ಲ. ಬೆಂಗಳೂರಿನಲ್ಲೇ ಇರುತ್ತೇನೆ. ರಾಜ್ಯ ಹಜ್‌ ಸಮಿತಿ ಅಧ್ಯಕ್ಷನಾಗಿ ನನ್ನ ಕರ್ತವ್ಯವನ್ನು ಮುಂದುವರಿಸುತ್ತೇನೆ’ ಎಂದು ಹೇಳಿದರು. ಇದೇ ವೇಳೆ ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎಂಬ ಆರೋಪವನ್ನು ತಳ್ಳಿಹಾಕಿದ್ದರು. ಇದೇ ದಿನ ಸ್ಪೀಕರ್‌ ರಮೇಶ್‌ಕುಮಾರ್‌ ಈ ಮೊದಲು ರಾಜೀನಾಮೆ ಸಲ್ಲಿಸಿದ್ದವರ ಪೈಕಿ 8 ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲಎಂದು ಹೇಳಿದ್ದರು.

ಜುಲೈ 10 – ಮುಂಬೈಗೆ ಹಾರಿದ ಡಿಕೆಶಿ, ಮತ್ತಿಬ್ಬರುಕಾಂಗ್ರೆಸ್‌ ಶಾಸಕರರಾಜೀನಾಮೆ

ಮುಂಬೈನಹೋಟೆಲ್‌ನಲ್ಲಿ ನೆಲೆಸಿದ್ದ ಅತೃಪ್ತ ಶಾಸಕರನ್ನು ಮನವೊಲಿಸಿ ಕರೆತರಲು ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ಜೆಡಿಎಸ್‌ನ ಶಾಸಕರು ಮುಂಬೈಗೆ ಹೋಗಿದ್ದರು. ಆದರೆ, ಈ ವೇಳೆಗಾಗಲೇ ಅತೃಪ್ತರು ತಮಗೆ ರಕ್ಷಣೆ ಕೊಡುವಂತೆ ಕೊರಿ ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಹಾಗಾಗಿ, ಹೋಟೇಲ್‌ನ ಹೊರಗೆ ಶಿವಕುಮಾರ್ ಮತ್ತು ಇತರ ಶಾಸಕರನ್ನು ಪೊಲೀಸರು ತಡೆದು ನಿಲ್ಲಿಸಿದ್ದರು.

ಹೊಟೆಲ್‌ನ ಹೊರಗೆ ನಿಂತುಕೊಂಡೇ ಇಡ್ಲಿ–ವಡೆ ತಿಂದಿದ್ದ ಡಿ.ಕೆ.ಶಿವಕುಮಾರ್‌ ಮತ್ತು ತಂಡ, ಸತತ ನಾಲ್ಕಾರು ಗಂಟೆ ಒಳಗೆ ಹೋಗಲು ಅನುಮತಿ ನೀಡುವಂತೆ ಪೊಲೀಸರ ಜತೆ ಮಾತನಾಡಿದರು. ಅದಕ್ಕೆ ಅವಕಾಶ ಸಿಗದಿದ್ದಾಗ ಹನಿಯುತ್ತಿದ್ದ ಮಳೆಯಲ್ಲಿ ಛತ್ರಿ ಹಿಡಿದು ಕಾದು ಕುಳಿತರು. ಈ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನೂ ಜಾರಿಗಳಿಸಲಾಗಿತ್ತು. ನಿಷೇಧಿತ ಪ್ರದೇಶದಲ್ಲಿದ್ದ ಡಿ.ಕೆ.ಶಿವಕುಮಾರ್‌, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಇಲ್ಲಿಂದ ತೆರಳಿದ್ದ ನಾಲ್ವರನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ ಕಳಿಸಿದರು.

ರೌಡಿಗಳೊಂದಿಗೆ ಬಂದಿಲ್ಲ : ಡಿಕೆಶಿ

‘ನನ್ನ ಭಯ ಬಿಜೆಪಿಯವರಿಗೂ, ನಮ್ಮ ಶಾಸಕರಿಗೂ, ಯಾರಿಗೂ ಬೇಡ. ನಾನು ಯಾವ ರೌಡಿಯನ್ನು ಕರೆದುಕೊಂಡು ಬಂದಿಲ್ಲ. ನಮ್ಮ ಶಾಸಕರೊಂದಿಗೆ ಬಂದಿದ್ದೇನೆ’ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಅಂದು ಮುಂಬೈನಲ್ಲಿ ಪೊಲೀಸರಿಗೆ ಹೇಳಿದ್ದರು. ‘ಬಿಜೆಪಿಯ ನಾಯಕರು ಬಲವಂತವಾಗಿ ದೂರು ಕೊಡಿಸಿದ್ದಾರೆ. ನಮ್ಮ ಶಾಸಕರು ಕರೆಯದೆ ನಾವು ಬರುತ್ತೇವೆಯೇ. ಗಂಡ–ಹೆಂಡತಿ ಜಗಳವನ್ನು ನಾವು ಸರಿಪಡಿಸಿಕೊಳ್ಳುತ್ತೇವೆ. ಆದರೆ, ನಮ್ಮನ್ನು ಬಲವಂತವಾಗಿ ಗಡಿಪಾರು ಮಾಡುತ್ತಿದ್ದಾರೆ. ನಮ್ಮ ಶಾಸಕರು ಶೀಘ್ರದಲ್ಲೇ ನಮ್ಮ ಜತೆ ಬರುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಆಶಯ ವ್ಯಕ್ತಪಡಿಸಿದ್ದರು.

ಟ್ರಬಲ್‌ ಶೂಟರ್‌ ಎಂದೇ ಗುರುತಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್‌ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬರಿಗೈನಲ್ಲಿ ಹಿಂದಿರುಗಿದ್ದರು. ಈ ನಡುವೆ ಬೆಂಗಳೂರಿನಲ್ಲಿ ಮತ್ತೆ ಇಬ್ಬರು ಕಾಂಗ್ರೆಸ್‌ ಶಾಸಕರು ತಮ್ಮ ರಾಜೀನಾಮೆಯನ್ನು ಸ್ಪೀಕರ್‌ಗೆ ಸಲ್ಲಿದರು. ಈ ಎಲ್ಲಾ ಬೆಳವಣಿಗೆಗಳಿಗೆ ಸಿಎಂ ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಆಕ್ಷೇಪ ವ್ಯಕ್ತಪಡಿದ್ದರು.

ಸುಪ್ರೀಂ ಕದ ತಟ್ಟಿದ ಅತೃಪ್ತರು

ಮುಂಬೈನಲ್ಲಿದ್ದ 10 ಅತೃಪ್ತ ಶಾಸಕರು ‘ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು ನಮ್ಮ ರಾಜೀನಾಮೆ ಸ್ವೀಕರಿಸುವ ಪ್ರಕ್ರಿಯೆನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ’ ಎಂದು ದೂರಿ ಅರ್ಜಿ ಸಲ್ಲಿಸುವ ಮೂಲಕ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು.ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೋಗೊಯಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರು ಶಾಸಕರ ಪರ ಸಲ್ಲಿಸಿದ್ದ ತುರ್ತು ಅರ್ಜಿಯ ವಿಚಾರಣೆಯನ್ನು ಜುಲೈ 11ರಂದು ನಡೆಸುವುದಾಗಿ ಭರವಸೆ ನೀಡಿತು.

ಜುಲೈ 11 – ಶಾಸಕರ ಮನವಿ ಆಲಿಸಿದ ಸುಪ್ರೀಂ ಕೋರ್ಟ್, ಸ್ಪೀಕರ್‌ ಭೇಟಿಗೆ ನಿರ್ದೇಶನ

ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜುಲೈ 11ರಂದು ಬೆಳಿಗ್ಗೆ ನಡೆಸಿದ ಸುಪ್ರೀಂ ಕೋರ್ಟ್‌, ಅದೇ ದಿನ ಸಂಜೆ 6ರ ಒಳಗೆ ಸ್ಪೀಕರ್‌ ಅವರ ಮುಂದೆ ಹಾಜರಾಗುವಂತೆ ನಿರ್ದೇಶನ ನೀಡಿತು. ಅವರ ರಾಜೀನಾಮೆ ಬಗ್ಗೆ ಸ್ಪೀಕರ್‌ ನಿರ್ಧಾರ ತೆಗೆದುಕೊಳ್ಳಬೇಕು ಎಂದೂ ನ್ಯಾಯಮೂರ್ತಿಗಳಾದ ರಂಜನ್‌ ಗೋಗೊಯಿ, ದೀಪಕ್ ಗುಪ್ತಾ ಮತ್ತು ಅನಿರುದ್ಧ ಬೋಸ್‌ ಅವರನ್ನೊಳಗೊಂಡ ಪೀಠ ಹೇಳಿತು. ಜತೆಗೆ, ಶಾಸಕರಿಗೆ ರಕ್ಷಣೆ ನೀಡುವಂತೆ ಕರ್ನಾಟಕ ರಾಜ್ಯ ಉನ್ನತ ಪೊಲೀಸ್ ಅಧಿಕಾರಿಗೆ ನಿರ್ದೇಶನವನ್ನೂ ನೀಡಿತು.

ಅದೇ ದಿನ ಶಾಸಕರು ಮುಂಬೈನಿಂದ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಬಂದರು. ಮತ್ತೆ ಹೊಸದಾಗಿ ರಾಜೀನಾಮೆ ಪತ್ರಗಳನ್ನು ಸಲ್ಲಿಸಲು ಸ್ಪೀಕರ್‌ ಅವರನ್ನು ಭೇಟಿಯಾದರು. ವಿಮಾನ ನಿಲ್ದಾಣದಿಂದ ವಿಧಾನ ಸೌಧಕ್ಕೆ ಬಸ್‌ನಲ್ಲಿ ಬಂದು ತಲುಪಿದಾಗ ಸಂಜೆ 6.03ಕ್ಕೆ.ಸ್ಪೀಕರ್‌ ಕಚೇರಿ ತಲುಪಿದ್ದು 6.07ಕ್ಕೆ.

ಶಾಸಕರ ರಾಜೀನಾಮೆಯನ್ನು ಸೂಕ್ಷ್ಮ ಹಾಗೂ ಕೂಲಂಕಷವಾಗಿ ಪರಿಶೀಲಿಸಿ, ಖುದ್ದು ವಿಚಾರಣೆಗೆ ಹಾಜರಾಗಲು ದಿನ ಗೊತ್ತು ಮಾಡಿ ಸೂಚಿಸಲಾಗುವುದು. ಬಳಿಕ ಕ್ರಮ ಕೈಗೊಳ್ಳಲಾಗುವುದು ಹಾಗೂ ರಾಜೀನಾಮೆ ಸಲ್ಲಿಕೆ ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಿಸಿರುವುದಾಗಿ ಸ್ಪೀಕರ್‌ ರಮೇಶ್‌ಕುಮಾರ್‌ ಅಂದು ಸಂಜೆ ಮಾಧ್ಯಮಗಳಿಗೆ ತಿಳಿಸಿದರು.

ವಿಪ್ ಜಾರಿ

ಈ ನಡುವೆ ಮೈತ್ರಿ ಸರ್ಕಾರದ ಶಾಸಕರು ಜುಲೈ 12ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಮ್ಮ ಸದಸ್ಯರಿಗೆ ವಿಪ್‌ ಜಾರಿಮಾಡಿದವು.

ವಿಧಾನಸೌಧ ಸುತ್ತ ನಿಷೇಧಾಜ್ಞೆ ಜಾರಿ

‘ರಾಜಕಾರಣದ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ಕೆಲ ಮಾಹಿತಿಯನ್ನು ಕಲೆ ಹಾಕಲಾಗಿದೆ. ವಿಧಾನಸೌಧದ ಒಳಗೆ ಹಾಗೂ ಹೊರಗಡೆ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ’ ಎಂದು ಗುಪ್ತದಳದ ಅಧಿಕಾರಿಗಳು, ನಗರ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್‌ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಆ ಬಗ್ಗೆ ಪರಿಶೀಲನೆ ನಡೆಸಿದ್ದ ಅಲೋಕ್‌ಕುಮಾರ್, ಗುರುವಾರದಿಂದ (ಜುಲೈ 11) ಭಾನುವಾರದವರೆಗೆ (ಜುಲೈ 14) ವಿಧಾನಸೌಧ ಸುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದರು.

ಜುಲೈ 12 – ಮುಂಗಾರು ಅಧಿವೇಶನದಲ್ಲಿ ವಿಶ್ವಾಸಮತ ಮಂಡಿಸಿದ ಕುಮಾರಸ್ವಾಮಿ

ಮುಂಗಾರು ಅಧಿವೇಶನದಮೊದಲ ದಿನ ಅತೃಪ್ತ ಶಾಸಕರು ಕಲಾಪಕ್ಕೆ ಹಾಜರಾಗುತ್ತಾರೆ ಎಂಬ ನಿರೀಕ್ಷೆಯಲ್ಲಿ ಮೈತ್ರಿ ನಾಯಕರಿದ್ದರು.ಆದರೆ, ಅವರು ಬರಲಿಲ್ಲ.ಅಧಿವೇಶನ ನಡೆಯುವ ಮೊದಲು ತಂದೆ ದೇವೇಗೌಡರ ಮನೆಗೆ ಧಾವಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸುದೀರ್ಘ ಚರ್ಚೆ ನಡೆಸಿ ದೇವೇಗೌಡರ ಸಲಹೆ ಪಡೆದರು.ಈ ನಡುವೆ ಯಾರೂ ನಿರೀಕ್ಷೆ ಮಾಡದ ಬೆಳವಣಿಗೆಯೊಂದು ನಡೆಯಿತು. ಸದನದಲ್ಲಿ ವಿಶ್ವಾಸಮತ ಯಾಚಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ‘ಇಂದು ಅನಿವಾರ್ಯವಾಗಿ ನಾನು ಈ ಮಾತು ಹೇಳ್ತಿದ್ದೀನಿ. ಸದನದ ಬೆಂಬಲ ಇದ್ದರೆ ಮಾತ್ರ ನಾನು ಈ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯ. ನಾನು ಸ್ವಪ್ರೇರಣೆಯಿಂದ ವಿಶ್ವಾಸಮತ ಮಂಡಿಸಲು ನಿರ್ಧರಿಸಿದ್ದಾರೆ. ನನಗೆ ಸಮಯ ಕೊಡಿ. ಅಂತ ಕೋರುತ್ತೇನೆ’ ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿದರು. ಚರ್ಚೆಗಳ ಬಳಿಕ ಕಲಾಪವನ್ನು ಸೋಮವಾರಕ್ಕೆ (ಜುಲೈ 15) ಮುಂದೂಡಲಾಯಿತು.

ರಾಜೀನಾಮೆ ಹಿಂಪಡೆಯಲ್ಲ: ಶಾಸಕ ಬಿ.ಸಿ.ಪಾಟೀಲ್, ಬೈರತಿ ಬಸವರಾಜ್‌

ಈ ನಡುವೆ ಮುಂಬೈನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅತೃಪ್ತ ಶಾಸಕರಾದ ಬಿ.ಸಿ.ಪಾಟೀಲ್‌ ಮತ್ತು ಬೈರತಿ ಬಸವರಾಜ್, ‘ಯಾವುದೇ ಕಾರಣಕ್ಕೆ ರಾಜೀನಾಮೆಯನ್ನು ಹಿಂಪಡೆಯುವುದಿಲ್ಲ, ಮತ್ತೆ ಮಾತೃ ಪಕ್ಷಕ್ಕೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು. ‘ನಾವು ನಮ್ಮ ಅಚಲ ನಿರ್ಧಾರಕ್ಕೆ ಬದ್ದರಾಗಿದ್ದೇವೆ, ನಾವೆಲ್ಲ ಒಟ್ಟಾಗಿದ್ದೇವೆ’ ಎಂದು ಬೈರತಿ ಬಸವರಾಜ್‌ ಹೇಳಿದ್ದರು.

ದೇವರು ಕೊಟ್ಟ ಸರ್ಕಾರ, ಉಳಿಯುತ್ತೆ: ರೇವಣ್ಣ

ಮೈಸೂರಿನಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಸಚಿವ ಎಚ್‌.ಡಿ.ರೇವಣ್ಣ, ‘ಕುಮಾರಸ್ವಾಮಿ ಅವರಿಗೆ ದೇವರು ಆಶೀರ್ವಾದ ಮಾಡಿ ಕೊಟ್ಟಿರುವ ಸರ್ಕಾರ ಇದು. ಏನು ಮಾಡಿದ್ರೂ ಬಿದ್ದು ಹೋಗಲ್ಲ. ಉಳಿಯುತ್ತೆ’ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದರು. ‘ನಮ್ಮ ಬಗ್ಗೆ ಮಾತನಾಡಿಲ್ಲ ಅಂದ್ರೆ ಕೆಲವರಿಗೆ ಊಟ ಸೇರಲ್ಲ’ ಎಂದು ಆಕ್ಷೇಪಿಸಿದರು.

ಶಾಸಕರು ಮುಂಬೈಗೆ ಏಕೆ ಹೋದರು: ರಮೇಶ್‌ಕುಮಾರ್

ಸಂವಿಧಾನ ನನಗೆ ನೀಡಿರುವ ಅಧಿಕಾರದ ಪ್ರಕಾರ ವಿವೇಚನೆ ಬಳಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ. ನನ್ನ ಮೇಲೆ ನನಗೆ ವಿಶ್ವಾಸವಿದೆ ಎಂದು ಸ್ಪೀಕರ್ ರಮೇಶ್‌ಕುಮಾರ್ ಹೇಳಿದರು. ‘ನಿನ್ನೆ ಮುಂಬೈನಿಂದ ಅವರು ಹೇಗೆ ಬಂದರು? ಅವರಿಗೆ ಎಂಥ ಭದ್ರತೆ ಕೊಡಲಾಯಿತು? ಅವರು ಮುಂಬೈಗೆ ಯಾವಾಗ ಹೋದರು? ಏಕೆ ಹೋದರು? ಸುಪ್ರೀಂಕೋರ್ಟ್‌ ಅನುಮತಿ ಪಡೆದು ಅವರು ಇಲ್ಲಿಗೆ ಬರಬೇಕಾ? ಅವರು ನನ್ನ ಬಗ್ಗೆ ಏನು ಅಂದುಕೊಂಡಿದ್ದಾರೆ?’ ಎಂದೂ ಪ್ರಶ್ನಿಸಿದರು.

ಸುಪ್ರೀಂಕೋರ್ಟ್‌ ಸುದೀರ್ಘ ವಿಚಾರಣೆ: ಯಥಾಸ್ಥಿತಿ ಕಾಪಾಡಲು ಸೂಚನೆ

ಕರ್ನಾಟಕ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಯಥಾಸ್ಥಿತಿ ಕಾಪಾಡಲು ಸೂಚಿಸಿ, ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ (ಜುಲೈ 16) ಮುಂದೂಡಿತು.‘ಈ ಪ್ರಕರಣದಲ್ಲಿ ಸಂವಿಧಾನಾತ್ಮಕ ಅಂಶಗಳು ಅಡಕವಾಗಿದ್ದು, ಹೆಚ್ಚಿನ ವಿಚಾರಣೆ ಅಗತ್ಯ’ ಎಂದು ಪೀಠವು ಅಭಿಪ್ರಾಯಪಟ್ಟಿತು. ಶಾಸಕರ ಪರ ಮುಕುಲ್ ರೋಹಟ್ಗಿ, ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಮುಖ್ಯಮಂತ್ರಿ ಪರ ವಕೀಲ ರಾಜೀವ್ ಧವನ್ ವಾದ ಮಂಡಿಸಿದರು. ‘ಶಾಸಕರ ರಾಜೀನಾಮೆಯನ್ನು ಅಂಗೀಕಾರಿಸುವಅಥವಾ ಅವರನ್ನು ಅನರ್ಹಗೊಳಿಸುವ ನಿರ್ಧಾರ ಮಾಡಬೇಡಿ.ಯಥಾಸ್ಥಿತಿ ಕಾಪಾಡಿ’ ಎಂದು ನ್ಯಾಯಪೀಠ ಸೂಚಿಸಿತು.

ಮೂರೂಪಕ್ಷಗಳ ಶಾಸಕರು ರೆಸಾರ್ಟ್‌ಗೆ

ರಾಜ್ಯ ರಾಜಕಾರಣ ಮತ್ತೊಂದು ತಿರುವು ಪಡೆದು, ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಶಾಸಕರು ರೆಸಾರ್ಟ್‌ ರಾಜಕಾರಣದ ಮೊರೆ ಹೋದರು. ಬಿಜೆಪಿ ಸದಸ್ಯರು ಯಲಹಂಕದ ರಾಜಾನುಕುಂಟೆ ಸಮೀಪದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದರು.

ಜುಲೈ 13 – ಎಂಟಿಬಿ ನಾಗರಾಜ್ ಜತೆ ಕಾಂಗ್ರೆಸ್‌ ಮುಖಂಡರ ಸಭೆ

ಕಾಂಗ್ರೆಸ್‌ನ ಹಿರಿಯ ನಾಯಕರು ತಮ್ಮ ಪಕ್ಷದ ಇಬ್ಬರು ಅತೃಪ್ತ ಶಾಸಕರಾದ ಎಂಟಿಬಿ ನಾಗರಾಜ್‌ ಮತ್ತು ಕೆ.ಸುಧಾಕರ್‌ ಅವರ ಮನವೊಲಿಸಲು ಯತ್ನಿಸಿದರು. ಬೆಳ್ಳಂಬೆಳಿಗ್ಗೆ ನಾಗರಾಜ್ ಮನೆಗೆ ಧಾವಿಸಿದ್ದ ಡಿ.ಕೆ.ಶಿವಕುಮಾರ್ ಮತ್ತು ಇತರ ನಾಯಕರು ಮನವೊಲಿಸಲು ಸತತ ಪ್ರಯತ್ನ ನಡೆಸಿದರು. ‘ರಾಜೀನಾಮೆಯನ್ನು ಹಿಂಪಡೆಯುವಂತೆ ನಮ್ಮ ನಾಯಕರು ಕೇಳಿದ್ದಾರೆ. ಆ ಬಗ್ಗೆ ನಿರ್ಧರಿಸುವೆ. ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರನ್ನು ಭೇಟಿ ಮಾಡಿದ ಬಳಿಕವೇ ನನ್ನ ಅಂತಿಮ ನಿರ್ಧಾರ ಹೇಳುವೆ’ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದರು.

ಜುಲೈ 13 – ಎಂಟಿಬಿ ನಾಗರಾಜ್‌ ಯೂ ಟರ್ನ್‌; ಮುಂಬೈಗೆ ಹಾರಿ ಅತೃಪ್ತರ ಜತೆ ಸೇರ್ಪಡೆ, ಮೈತ್ರಿಗೆ ಆತಂಕ

ಮೈತ್ರಿ ನಾಯಕರನ್ನು ಭೇಟಿ ಮಾಡಿದ ವೇಳೆ ರಾಜೀನಾಮೆ ಹಿಂಪಡೆಯು ನಿರ್ಧಾರ ಪರಿಶೀಲಿಸುವದಾಗಿ ಹೇಳಿದ್ದ ಎಂಟಿಬಿ ನಾಗರಾಜ್‌, ಜುಲೈ 13ರಂದು ಬೆಳಿಗ್ಗೆ ವಿಶೇಷ ವಿಮಾನದಲ್ಲಿ ಮುಂಬೈಗೆ ಹಾರಿದರು. ನಾಗರಾಜ್‌ ಅವರು ಸುಧಾರಕ್‌ ಜತೆ ಮಾತನಾಡಿ ಮನವೊಲಿಸುವರು ಎಂಬ ನಿರೀಕ್ಷೆಯಲ್ಲಿದ್ದ ಮೈತ್ರಿ ನಾಯಕರು, ರಾಜ್ಯದ ಶಾಸಕರ ಪೈಕಿ ಹೆಚ್ಚು ಶ್ರೀಮಂತರಾಗಿರುವ ಎಂಟಿಬಿ ನಾಗರಾಜ್‌ ಅವರು ಬಿಜೆಪಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತ ಸಂತೋಷ್‌ ಅವರ ಜತೆಗೆ ವಿಮಾನ ಹತ್ತುತ್ತಿರುವ ಮತ್ತು ಈ ವೇಳೆ ಆರ್‌.ಅಶೋಕ್‌ಅವರೂ ಕಾಣಿಸಿಕೊಂಡ ದೃಶ್ಯಗಳು, ಪೋಟೊಗಳ ಸುದ್ದಿಯನ್ನು ನೋಡಿ ಮತ್ತಷ್ಟು ಆತಂಕಕ್ಕೆ ಒಳಗಾದರು.

ಜುಲೈ 15 – ಬಿಜೆಪಿಯಿಂದ ಅವಿಶ್ವಾಸದ ದಾಳ; ವಿಶ್ವಾಸಕ್ಕೆ ದಿನ ಗೊತ್ತು ಮಾಡಿದ ‘ಮೈತ್ರಿ’

ಕಲಾಪ ಆರಂಭವಾಗುತ್ತಿದ್ದಂತೆ ಸರ್ಕಾರಕ್ಕೆ ವಿಶ್ವಾಸಮತ ಇಲ್ಲ, ಅಲ್ಪಮತಕ್ಕೆ ಕುಸಿದಿದೆ. ನಮ್ಮ ಬಳಿ ಶಾಸಕರ ಸಂಖ್ಯೆ 105 ಇದೆ ಎಂದು ವಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಪ್ರಸ್ತಾಪಿಸಿದರು. ಅವಿಶ್ವಾಸ ನಿರ್ಣಯ ಕುರಿತ ಪ್ರಸ್ತಾಪವನ್ನು ಬಿಜೆಪಿ ಮುಂದು ಮಾಡುತ್ತಿದ್ದಂತೆ ಅನಿವಾರ್ಯವಾಗಿ ನಾವೇ ವಿಶ್ವಾಸಮತ ಯಾಚಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು. ಅದಕ್ಕೆ ಸ್ಪೀಕರ್‌ ಗುರುವಾರ (ಜುಲೈ 18) ಬೆಳಿಗ್ಗೆ 11ಕ್ಕೆ ಸಮಯ ನಿಗದಿ ಮಾಡಿದರು. ಇದರಿಂದಾಗಿ ಅತೃಪ್ತರ ಮನವೊಲಿಕೆಗೆ ಮೈತ್ರಿ ನಾಯಕರಿಗೆ ಇನ್ನೂ ಎರಡು ದಿನ ಕಾಲಾವಕಾಶ ಲಭಿಸಿತು.

‘ಅತ್ಯಂತ ವಿಶ್ವಾಸದಲ್ಲಿ ಇರುವುದರಿಂದಲೇ ವಿಶ್ವಾಸ ಮತ ಯಾಚನೆಯ ನಿರ್ಧಾರವನ್ನು ಪ್ರಕಟಿಸಿದ್ದೇನೆ. ಗೆಲ್ಲುತ್ತೇನೆ; ಕಾದು ನೋಡಿ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದರು. ‘ವಿಶ್ವಾಸ ಇಲ್ಲದೇ ವಿಶ್ವಾಸ ಮತ ಯಾಚಿಸಲು ಯಾರಾದರೂ ಮುಂದಾಗುತ್ತಾರೆಯೇ? ನಾವು ವಿಶ್ವಾಸ ಮತ ಯಾಚನೆಯಲ್ಲಿ ಗೆದ್ದೇ ಗೆಲ್ಲುತ್ತೇವೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದರು.‘ಕುಮಾರಸ್ವಾಮಿ ಬಹುಮತ ಕಳೆದುಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರ ಗುರುವಾರ ಪತನವಾಗುವುದು ನಿಶ್ಚಿತ’ ಎಂದು ಬಿಜೆಪಿ ನಾಯಕ ಯಡಿಯೂರಪ್ಪ ಗುಡುಗಿದ್ದರು.

‘ತಕ್ಷಣಕ್ಕೆ ಶಾಸಕರ ರಾಜೀನಾಮೆ ಅಂಗೀಕರಿಸುವುದಿಲ್ಲ. ವಿಚಾರಣೆ ನಡೆಸಿದ ಬಳಿಕ ತೀರ್ಮಾನಿಸುವೆ’ ಎಂದು ಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್ ಹೇಳಿದ್ದರಿಂದಾಗಿ ಮೈತ್ರಿ ಸರ್ಕಾರಕ್ಕೆ ತಾತ್ಕಾಲಿಕ ಜೀವದಾನ ಸಿಕ್ಕಿತ್ತು.

‘ಸರ್ಕಾರ ಪತನವಾಗಿಯೇ ಹೋಯಿತು’ ಎಂಬಂತಹ ಸ್ಥಿತಿ ನಿರ್ಮಾಣವಾಗುತ್ತಿರುವ ಬೆನ್ನಲ್ಲೇ, ಸರ್ಕಾರ ಉಳಿಸಿಕೊಳ್ಳುವ ಸಣ್ಣಪುಟ್ಟ ಅವಕಾಶಗಳು ಮೈತ್ರಿಕೂಟಕ್ಕೆ ತೆರೆದುಕೊಳ್ಳುತ್ತಿದ್ದವು. ಆದರೆ ಅತ್ತ ಮುಂಬೈನಲ್ಲಿ ಮೊಕ್ಕಾಂ ಮಾಡಿದ್ದಅತೃಪ್ತ ಶಾಸಕರು, ‘ರಾಜೀನಾಮೆಯ ತಮ್ಮ ನಿರ್ಧಾರ ಅಚಲ’ ಎಂದು ಖಚಿತವಾಗಿಯೇ ಹೇಳುತ್ತಿದ್ದರು. ಇದರಿಂದ ಬಿಜೆಪಿ ನಾಯಕರ ಹುಮ್ಮಸ್ಸು ಹೆಚ್ಚುತ್ತಿತ್ತು, ನಾಲ್ಕೈದು ದಿನಗಳೊಳಗೆ ಹೊಸ ಸರ್ಕಾರ ರಚಿಸುವ ಭರವಸೆಯಲ್ಲಿ ಕಾರ್ಯಾಚರಣೆ ಮುಂದುವರಿಸಿತ್ತು.

ಶಾಸಕ ರೋಷನ್ ಬೇಗ್ ವಶಕ್ಕೆ

ಐಎಂಎ ಸಮೂಹ ಕಂಪನಿ ವಿರುದ್ಧ ದಾಖಲಾಗಿರುವ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು, ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಸೋಮವಾರ ರಾತ್ರಿ ವಶಕ್ಕೆ ಪಡೆದರು. ಕಂಪನಿ ಮಾಲೀಕ ಮನ್ಸೂರ್ ಖಾನ್ ಅವರಿಂದ ಹಣ ಪಡೆದ ಆರೋಪ ಎದುರಿಸುತ್ತಿದ್ದ ರೋಷನ್ ಬೇಗ್ ಅವರಿಗೆ ಜುಲೈ 19ರಂದು ವಿಚಾರಣೆಗೆ ಬರುವಂತೆ ಎಸ್ಐಟಿ ನೋಟಿಸ್ ನೀಡಿತ್ತು.

ಜುಲೈ 16 – ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ಶಿಫ್ಟ್‌

ರಾಜೀನಾಮೆ ಪರ್ವ ಮುಂದುವರಿದಿದ್ದರಿಂದ ಎಚ್ಚೆತ್ತ ಕಾಂಗ್ರೆಸ್‌ ತನ್ನೆಲ್ಲಾ ಶಾಸಕರನ್ನು ಬೆಂಗಳೂರಿನ ಯಶವಂತಪುರದಲ್ಲಿನ ತಾಜ್‌ ವೆಸ್ಟೆಂಡ್ ಹೋಟೆಲ್‌ನಿಂದ ನಗರದ ಹೊರವಲಯದ ದೇವನಹಳ್ಳಿ ಸಮೀಪದ ರೆಸಾರ್ಟ್‌ಗೆ ಶಿಫ್ಟ್ಮಾಡಿತು. ಇದೇ ವೇಳೆ ಎಐಸಿಸಿಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ಕಾಂಗ್ರೆಸ್‌ ನಾಯಕರು ಮತ್ತು ಮುಖ್ಯಮಂತ್ರಿ ಜತೆ ಸಭೆ ನಡೆಸಿದರು. ‘ಈ ಮಧ್ಯೆ, ರಾಜೀನಾಮೆ ಅಂಗೀಕರಿಸಲು ಸ್ಪೀಕರ್‌ ಉದ್ದೇಶಪೂರ್ವಕವಾಗಿ ತಡಮಾಡುತ್ತಾರೆ. ಕೂಡಲೇ ರಾಜೀನಾಮೆ ಅಂಗೀಕರಿಸುವಂತೆ ನಿರ್ದೇಶನ ನೀಡಬೇಕು’ ಎಂದು ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದಸುಪ್ರೀಂ ಕೋರ್ಟ್‌ ತನ್ನ ಆದೇಶವನ್ನು ಜುಲೈ 17ರಂದು ನೀಡುವುದಾಗಿ ಪ್ರಕಟಿಸಿತು.

ಈ ವೇಳೆ ಪ್ರತಿಕ್ರಿಯಿಸಿದ್ದ ಸ್ಪೀಕರ್‌ ರಮೇಶ್‌ಕುಮಾರ್‌, ನಾನು ಸವಾಲು ಹಾಕುವುದಿಲ್ಲ. ಸಂವಿಧಾನದ ಪ್ರಕಾರ ನಾನು ನನ್ನ ಕರ್ತವ್ಯವನ್ನು ನಿರ್ವಹಿಸುವೆ ಎಂದು ಹೇಳಿದ್ದರು.

ಜುಲೈ 17 – ಅತೃಪ್ತ ಶಾಸಕರಿಗೆ ಸದನಕ್ಕೆಬರುವಂತೆ ಒತ್ತಡ ಹಾಕುವಂತಿಲ್ಲ –ಸುಪ್ರೀಂ

‘ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್‌ ನಿರ್ಧರಿಸಬೇಕು’ ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿತು. ಸಂವಿಧಾನದ 190ನೇ ವಿಧಿ ಅನ್ವಯ ಶಾಸಕರ ರಾಜೀನಾಮೆಯನ್ನು ಸ್ಪೀಕರ್‌ ನಿರ್ಣಯಿಸಬೇಕು. ಅದಕ್ಕೆ‌ ಕಾಲಮಿತಿ ನಿಗದಿಗೊಳಿಸಿಲ್ಲ. ಹಾಗಾಗಿ ರಾಜೀನಾಮೆ ಕುರಿತು ಮಧ್ಯಸ್ಥಿಕೆ ವಹಿಸುವುದಿಲ್ಲ. ಶಾಸಕರನ್ನು ಅಧಿವೇಶನದಲ್ಲಿ ಭಾಗವಹಿಸುವಂತೆ ಒತ್ತಾಯ ಮಾಡಬಾರದು ಎಂದು ಸುಪ್ರೀಂಕೋರ್ಟ್‌ ಹೇಳಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನುಗಳ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ವಿಸ್ತೃತ ಪರಮಾರ್ಶೆಯ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿತು.ಕರ್ನಾಟಕ ವಿಧಾನಸಭೆಯ ಸ್ಪೀಕರ್ ‘ಸೂಕ್ತ ಮತ್ತು ನಿರ್ದಿಷ್ಟ ಕಾಲಮಿತಿ’ಯಲ್ಲಿ ಅತೃಪ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ವಿಚಾರ ಇತ್ಯರ್ಥಪಡಿಸಬೇಕು ಎಂದು ಸುಪ್ರೀಂಕೋರ್ಟ್‌ ಇಂದು ತನ್ನ ಮಧ್ಯಂತರ ತೀರ್ಪಿನಲ್ಲಿ ನಿರ್ದೇಶಿಸಿತು.

ಈ ನಡುವೆ ಮಾಧ್ಯಮಗಳ ಎದರು ಮಾತನಾಡಿದ್ದ ಅತೃಪ್ತ ಶಾಸರು, ನಾವು ರಾಜೀನಾಮೆ ನೀಡಿದ್ದೇವೆ. ಸುಪ್ರೀಂ ಕೋರ್ಟ್‌ ಒತ್ತಡ ಹಾಕುವಂತಿಲ್ಲ ಎಂಬ ಆದೇಶವನ್ನೂ ನೀಡಿದೆ. ಹೀಗಾಗಿ, ವಿಧಾನಸಭೆ ಕಲಾಪಕ್ಕೆ ಹಾಜರಾಗುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದ್ದರು.

ನಮ್ಮ ಕ್ಷೇತ್ರದ ಶಾಸಕರು ಕಾಣೆಯಾಗಿದ್ದಾರೆ ಅವರನ್ನು ಹುಡುಕಿಕೊಡಿ ಎಂದು ಹಲವು ಜಿಲ್ಲೆಗಳಲ್ಲಿ ಜಿಲ್ಲಾ ಕಾಂಗ್ರೆಸ್‌ ನಾಯಕರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದರು. ವಿಶ್ವಾಸಮತ ಯಾಚನೆ ವೇಳೆ ‘ದೋಸ್ತಿ’ ಪಕ್ಷಗಳು ಹೆಣೆಯಬಹುದಾದ ತಂತ್ರಗಳಿಗೆ ‘ಕಮಲ’ ಪಡೆ ವಿಧಾನಸಭೆಯಲ್ಲೇ ಪ್ರತಿ ದಾಳ ಉರುಳಿಸಲು ಸಿದ್ಧತೆ ನಡೆಸಿತು.

ದೇವರ ಮೊರೆ

ಮುಂದಿನ ಸರ್ಕಾರ ರಚಿಸಲು ಯಾವುದೇ ಅಡ್ಡಿಯಾಗದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ದೇವರಲ್ಲಿ ಮೊರೆ ಹೋಗಿದರು. ಇದಕ್ಕಾಗಿ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿಸಿದ್ದರು. ಬುಧವಾರ ಪೂರ್ಣಾಹುತಿಯಲ್ಲಿ ಅವರು ಭಾಗವಹಿಸಿದ್ದರು. ಸುಪ್ರೀಂ ಕೋರ್ಟ್‌ ತೀರ್ಪು ಹೊರಬೀಳುವ ಸಮಯಕ್ಕೆ ಸರಿಯಾಗಿ ಬುಧವಾರ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ನಗರದ ಶೃಂಗೇರಿ ಶಂಕರಮಠದಲ್ಲಿ ಶಾರದಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಗ್ರಹಣ ಕೊನೆಗೊಂಡ ಕಾರಣ ಜನರು ದೇವಸ್ಥಾನಕ್ಕೆ ತೆರಳಿದಂತೆ ಈ ನಾಯಕರೂ ತೆರಳಿದ್ದರು.

ಜುಲೈ 18 – ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್‌, ವಿಶ್ವಾಸ ಮತಕ್ಕೆ ಹಾಕಲು ಬಿಜೆಪಿ ಅಹೋರಾತ್ರಿ ಪ್ರತಿಭಟನೆ

ಶಾಸಕ ರಾಮಲಿಂಗಾ ರೆಡ್ಡಿ ಅವರು ತಮ್ಮ ರಾಜೀನಾಮೆಯನ್ನು ಜುಲೈ 18ರಂದು ವಾಪಸ್‌ ಪಡೆದು, ಕಲಾಪಕ್ಕೆ ಹಾಜರಾದರು.

ವಿಧಾನಸೌಧ ಸುತ್ತಮುತ್ತ ಪೊಲೀಸ್ ಸರ್ಪಗಾವಲು

ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಗುರುವಾರ ವಿಶ್ವಾಸಮತ ಯಾಚಿಸಲಿರುವ ಹಿನ್ನಲೆಯಲ್ಲಿ ವಿಧಾನಸೌಧ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ವಿಧಾನಸೌಧ ಎಲ್ಲ ದ್ವಾರಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎರಡು ಕಿ.ಮೀ ಪರಿಧಿಯಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಬಂದೋಬಸ್ತ್ ಗಾಗಿ 1,000 ಪೊಲೀಸರನ್ನು ನಿಯೋಜಿಸಲಾಗಿತ್ತು.

‘ಸುಪ್ರೀಂ’ ಆದೇಶದಿಂದ ಹಕ್ಕು ಮೊಟಕು

‘ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದಿಲ್ಲ. ಆದರೂ, 15 ಶಾಸಕರು ಸದನಕ್ಕೆ ಬರಬೇಕಿಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ಇದರಿಂದ ನನ್ನ ಹಕ್ಕು ಮೊಟಕು ಮಾಡಿದಂತಾಗಿದೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆಯ ಪ್ರಸ್ತಾವ ಮಂಡಿಸಿದರು. ಈ ವೇಳೆ, ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ‍‍ಪ್ರಸ್ತಾಪಿಸಿದರು. ಆಗ ಸಿದ್ದರಾಮಯ್ಯ ಅವರು ಕ್ರಿಯಾಲೋಪ ಎತ್ತಿ ಪಕ್ಷಾಂತರ ನಿಷೇಧ ಕಾಯ್ದೆಯ ವ್ಯಾಪ್ತಿಯ ಬಗ್ಗೆ ‍‍ಪ್ರಸ್ತಾಪಿಸಿದರು.

‘ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಪಕ್ಷದಿಂದ ವಿಪ್‌ ನೀಡಲಾಗಿದೆ. ಆದರೆ, 15 ಶಾಸಕರು ಸದನಕ್ಕೆ ಹಾಜರಾಗಬೇಕು ಎಂದು ಒತ್ತಡ ಹೇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಹಾಗಿದ್ದರೆ, ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲಾಗಿದೆಯೇ’ ಎಂದೂ ಅವರು ಪ್ರಶ್ನಿಸಿದರು.

ಇಂದೇ ವಿಶ್ವಾಸ ಮತ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಬಿಜಪಿ ಸ್ಪೀಕರ್‌ಗೆ ಮನವಿ ಮಾಡಿತು. ಈ ಮಧ್ಯೆ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ, ಇಂದೇ ವಿಶ್ವಾಸ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಿಎಂಗೆ ನಿರ್ದೇಶ ನೀಡಬೇಕು ಎಂದು ರಾ‌ಜ್ಯಪಾಲರಿಗೆ ಮನವಿ ಮಾಡಿತು. ದಿನದ ಅಂತ್ಯದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ರಾಜ್ಯಪಾಲರು ಸ್ಪೀಕರ್‌ಗೆ ಸಂದೇಶವನ್ನೂ ಕಳುಹಿಸಿದರು.ರಾಜ್ಯಪಾಲರು ಮಧ್ಯೆ ಪ್ರವೇಶಿಸಬಾರದು ಎಂದು ಕಾಂಗ್ರೆಸ್, ಜೆಡಿಎಸ್‌ ನಾಯಕರು ಆಕ್ಷೇಪಿಸಿದರು. ಕಾಂಗ್ರೆಸ್‌ನ ಶಾಸಕ ಶ್ರೀಮಂತ ಪಾಟೀಲ್‌ ಅವರನ್ನು ಬಿಜೆಪಿ ಅಪಹರಿಸಿದೆ ಎಂದು ಕಾಂಗ್ರೆಸ್‌ ಆರೋಪಿಸಿತು. ಅದಕ್ಕೆ ಸ್ಪೀಕರ್‌, ನಾಳೆಯೊಳಗೆ ವರದಿ ನೀಡಿ ಎಂದು ಗೃಹ ಸಚಿವರಿಗೆ ಸೂಚಿಸಿದರು.

ಅಹೋರಾತ್ರಿ ಸದನದಲ್ಲಿರಲು ಬಿಜೆಪಿ ನಿರ್ಧಾರ

ಸಂಜೆಯಾದರೂಚರ್ಚೆ ಮಗಿಯದಿದ್ದಾಗ ಸ್ಪೀಕರ್‌ ಕಲಾಪ ಮುಂದೂಡಿದರು. ಮತಕ್ಕೆ ಹಾಕುವಂತೆ ಪಟ್ಟು ಹಿಡಿದ ಬಿಜೆಪಿ ಸದನಲ್ಲಿ ಅಹೋರಾತ್ರಿ ಧರಣಿ ಮಾಡುವುದಾಗಿ ಯಡಿಯೂರಪ್ಪ ಘೋಷಿಸಿದರು. ವಿಧಾನಸೌಧಕ್ಕೆ ಊಟ ತರಿಸಿಕೊಂಡು, ಊಟ ಮಾಡಿ, ಅಹೋರಾತ್ರಿ ಅಲ್ಲೇ ಇದ್ದು ಧರಣಿ ಮಾಡಿದರು. ವಿಶ್ವಾಸಮತ ಪ್ರಕ್ರಿಯೆಯನ್ನು ಜುಲೈ 19ರ ಮಧ್ಯಾಹ್ನ 1.30ರ ಒಳಗೆ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿ ಸಂದೇಶ ಕಳುಹಿಸಿದರು.

ವಿಧಾನಸಭೆ ಕಲಾಪ: ರಾಜ್ಯಪಾಲರ ಪ್ರತಿನಿಧಿಗಳ ಕಣ್ಗಾವಲು

ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿರುವ ರಾಜ್ಯಪಾಲರು ರಂಗಪ್ರವೇಶ ಮಾಡಿದರು.

ಗುರುವಾರ ಬೆಳಿಗ್ಗೆ ಕಲಾಪ ಆರಂಭವಾಗುವ ಹೊತ್ತಿಗೆ ರಾಜ್ಯಪಾಲರ ಪ್ರತಿನಿಧಿಗಳೂ ಸದನಕ್ಕೆ ಬಂದಿದ್ದು, ನಿಯಮಿತವಾಗಿ ಕಲಾಪದ ವರದಿಯನ್ನು ರವಾನಿಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೂ ಎಲ್ಲ ವಿವರಗಳನ್ನು ದಾಖಲಿಸಿಕೊಂಡರು. ಸದನದಲ್ಲಿ ನಡೆಯುತ್ತಿದ್ದ ಚರ್ಚೆ, ವಿದ್ಯಮಾನಗಳು, ಸಭಾಧ್ಯಕ್ಷರ ನಡೆ, ಮೈತ್ರಿ ಪಕ್ಷಗಳ ಶಾಸಕರ ನಡವಳಿಕೆಗಳನ್ನು ದಾಖಲಿಸಿಕೊಂಡು ವರದಿ ಸಲ್ಲಿಸಿದರು.

ಸದನಕ್ಕೆ ಖಂಡಿತ ಬರುವುದಿಲ್ಲ: ರಾಮಲಿಂಗಾ ರೆಡ್ಡಿ ವಿರುದ್ಧ ಅತೃಪ್ತ ಶಾಸಕರ ಆಕ್ರೋಶ

‘ರಾಮಲಿಂಗಾ ರೆಡ್ಡಿ ನಮಗೆ ಮೋಸ ಮಾಡಿದ್ದಾರೆ. ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಹೇಳಿ ಈಗ ವಾಪಸ್ ಪಡೆದಿದ್ದಾರೆ. ನಾವು ಯಾವುದೇ ಕಾರಣಕ್ಕೂ ಅವರನ್ನು ಹಿಂಬಾಲಿಸುವುದಿಲ್ಲ, ಸದನಕ್ಕೆ ಬರುವುದಿಲ್ಲ’ ಎಂದು ಅತೃಪ್ತ ಶಾಸಕರು ಹೇಳಿದ್ದಾರೆ.

ಜುಲೈ 19 – ರಾಜ್ಯಪಾಲರ ಎರಡನೇ ಗಡುವು ಮುಗಿಯಿತು

ಸದನ ಆರಂಭವಾಗುತ್ತಿದ್ದಂತೆ, ಇಂದೇ ಮತಕ್ಕೆ ಹಾಕುವ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿಯಿತಾದರೂ, ಕಾಂಗ್ರೆಸ್‌–ಜೆಡಿಎಸ್‌ನ ಶಾಸಕರು ಚರ್ಚೆ, ಆರೋಪಗಳನ್ನು ಮುಂದುವರಿಸಿದ್ದರಿಂದ ರಾಜ್ಯಪಾಲರು ನೀಡಿದ್ದ ಎರಡನೇ ಗಡುವು ಮುಗಿದು,ಚರ್ಚೆ ಮುಂದುವರಿಯಿತು. ಶುಕ್ರವಾರ ಮಧ್ಯಾಹ್ನ 1.20ರೊಳಗೆ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ವಿರುದ್ಧ ಜೆಡಿಎಸ್‌–ಕಾಂಗ್ರೆಸ್‌ ಶಾಸಕರು ಕಿಡಿಕಾರಿದರು. ವಿಧಾನಸಭೆಯಲ್ಲಿ ಶುಕ್ರವಾರ ಮೈತ್ರಿ ಸದಸ್ಯರು, ‘ರಾಜ್ಯಪಾಲರು ಬಿಜೆಪಿ ಪಕ್ಷಪಾತಿಯಂತೆ ವರ್ತಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಗೋ ಬ್ಯಾಕ್‌ ಗವರ್ನರ್’ ಎಂದೂ ಘೋಷಣೆ ಕೂಗಿದರು.

ಶಾಸಕರಿಗೆ ಕೋಟಿ ಕೋಟಿ ಆಮಿಷ: ಬಿಜೆಪಿ ವಿರುದ್ಧ ಕಾಂಗ್ರೆಸ್–ಜೆಡಿಎಸ್ ಆರೋಪ

ಶಾಸಕರಿಗೆ ಕೋಟಿ ಕೋಟಿ ಆಮಿಷವೊಡ್ಡಿ ಖರೀದಿ ಮಾಡಲಾಗುತ್ತಿದೆ ಎಂದು ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಹಲವು ಸದಸ್ಯರು ವಿಧಾನಸಭೆಯಲ್ಲಿ ಗಂಭೀರ ಆರೋಪ ಮಾಡಿದರು.

ವಿಶ್ವಾಸಮತ ನಿರ್ಣಯದ ಚರ್ಚೆಯ ವೇಳೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ನಮ್ಮ ಶಾಸಕ ಮಹದೇವು (ಪಿರಿಯಾಪಟ್ಟಣ) ಅವರಿಗೆ ಬಿಜೆಪಿಯವರು ಕರೆ ಮಾಡಿ ₹40 ಕೋಟಿಯಿಂದ ₹50 ಕೋಟಿಯ ಆಮಿಷ ಒಡ್ಡಿದ್ದರು. ಕಾಂಗ್ರೆಸ್‌ನ ಬಿ.ಸಿ.ಪಾಟೀಲ ಅವರು ಆಡಿಯೊವನ್ನೇ ಬಿಡುಗಡೆ ಮಾಡಿದ್ದರು. ಅದು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಶ್ರೀನಿವಾಸ ಗೌಡರಿಗೆ ₹5 ಕೋಟಿ ಕಳುಹಿಸಿದ್ದರು’ ಎಂದು ಪ್ರಸ್ತಾಪಿಸಿದರು.

ಮತ್ತೊಂದು ಪತ್ರ ರವಾನಿಸಿದ ರಾಜ್ಯಪಾಲರು ಸಂಜೆ 6.30ರ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದರು. ಈ ಸೂಚನೆ ಬಂದರೂ ಕಲಾಪ ರಾತ್ರಿ 8.30ರ ವರೆಗೂ ಮುಂದುವರಿಯಿತು. ಅಂತಿಮವಾಗಿ ವಿಶ್ವಾಸವನ್ನು ಮತಕ್ಕೆ ಹಾಕಲು ಸಾಧ್ಯವಾಗದ ಕಾರಣ, ಸೋಮವಾರ ವಿಶ್ವಾಸ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಡುವಂತೆ ಸಿದ್ದರಾಮಯ್ಯ ಮತ್ತು ಸಿಎಂಗೆ ಸ್ಪೀಕರ್‌ ಕೇಳಿದರು. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದರು. ಬಳಿಕ, ಸ್ಪೀರಕ್‌ ಕಲಾಪವನ್ನು ಜುಲೈ 22ರ ಬೆಳಿಗ್ಗೆ 11ಕ್ಕೆ ಮುಂದೂಡಿದರು.

ಜುಲೈ 20 – ಜೆಡಿಎಸ್‌–ಕಾಂಗ್ರೆಸ್‌ ನಾಯಕರ ನಿರಂತರ ಸಭೆ

ವಿಶ್ವಾಸಮತ ಸಾಬೀತುಪಡಿಸಲು ಇರುವ ದಾರಿಗಳು ಯಾವುವು? ಏನೆಲ್ಲಾ ಕಾರ್ಯತಂತ್ರ ರೂಪಿಸಬಹುದು. ಅತೃಪ್ತರ ಮನವೊಲಿಕೆಗೆ ಏನೆಲ್ಲಾ ಮಾಡಬಹುದು ಎಂಬ ಕುರಿತು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಸಬೆ ಮೇಲೆ ಸಭೆಗಳನ್ನು ನಡೆಸಿದರು. ಇತ್ತ, ಯಡಿಯೂರಪ್ಪ ಮಾತನಾಡಿ, ಮೈತ್ರಿ ಸರ್ಕಾರ ರಾಜ್ಯಪಾಲರ ಆದೇಶವನ್ನು ಪಾಲಿಸದೆ ಉಲ್ಲಂಘಿಸಿದೆ ಎಂದು ಆರೋಪಿಸಿದರು.ಈ ನುಡುವೆ ಸುಪ್ರೀಂ ಕೊರ್ಟ್‌ ನೀಡಿದ್ದ ಮಧ್ಯಂತರ ತೀರ್ಪಿನಲ್ಲಿ ಪಕ್ಷದ ಶಾಸಕಾಂಗ ನಾಯಕರು ವಿಪ್‌ ನೀಡಲು ಇರುವ ಅಧಿಕಾರದ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮತ್ತೆ ಅರ್ಜಿ ಸಲ್ಲಿಸಿದರು.

ಜುಲೈ 21 – ಸುಪ್ರೀಂ ಕೋರ್ಟ್‌ ಕದ ತಟ್ಟಿದ ಪಕ್ಷೇತರರು

ತಾವು ಮೈತ್ರಿಗೆ ನೀಡಿದ್ದ ಬೆಂಬಲವನ್ನು ಹಿಂಪಡೆದು, ಮೈತ್ರಿ ಸರ್ಕಾರದ ಸಂಪುಟ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದ ಇಬ್ಬರು ಪಕ್ಷೇತರ ಶಾಸಕರಾದ ಎಚ್‌.ನಾಗೇಶ್‌ ಮತ್ತು ಆರ್‌.ಶಂಕರ್‌ ಅವರು ಜುಲೈ 21ರಂದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದರು.ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ. ಆದ್ದರಿಂದ, ಕೂಡಲೇ ಪೂರ್ವಗೊಳಿಸುವಂತೆ ಮುಖ್ಯಮಂತ್ರಿಗೆ ನಿರ್ದೇಶ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

‘ಮೈತ್ರಿ’ಗೆ ಕೈಕೊಟ್ಟ ಬಿಎಸ್‌ಪಿಯ ಮಹೇಶ್‌

ವಿಧಾನಸಭೆಯ ಕಲಾಪದಲ್ಲಿ ಸೋಮವಾರ ನಡೆಯಲಿರುವ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಕ್ಷೇತ್ರದ ಬಿಎಸ್‌ಪಿಯ ಶಾಸಕ ಎನ್‌.ಮಹೇಶ್‌ ಹೇಳದರು.ಈ ಮೂಲಕ ‘ಮೈತ್ರಿ’ ಪಡೆಗೆ ಕೊನೆ ಗಳಿಗೆಯಲ್ಲಿ ಕೈಕೊಟ್ಟರು. ಬಿಎಸ್‌ಪಿಯ ಮುಖ್ಯಸ್ಥೆ ಮಾಯಾವತಿ ಅವರ ನಿರ್ದೇಶನದ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದ್ದರು. ಸಂಜೆಯಾಗುತ್ತಿದ್ದಂತೆ ಮಾಯಾವತಿ ಅವರು ಸದನಕ್ಕೆ ಹಾಜರಾಗುವ ಮೂಲಕ ಮೈತ್ರಿಗೆ ಮತಹಾಕುವಂತೆ ಸೂಚಿಸಿದರು.

ಜುಲೈ 22 – ತಡರಾತ್ರಿವರೆಗೆ ನಡೆದ ಕಲಾಪ, ಮತ್ತೊಮ್ಮೆ ಮುಂದೂಡಿಕೆ

ಬಿಜೆಪಿ ನಿಯೋಗ ಸ್ಪೀಕರ್‌ ಕಚೇರಿಗೆ ತೆರಳಿ ಕೆ.ಆರ್‌.ರಮೇಶ್‌ಕುಮಾರ್‌ ಅವರನ್ನು ಭೇಟಿ ಮಾಡಿತು.11 ಗಂಟೆಗೆ ಆರಂಭವಾಗಬೇಕಿದ್ದ ಕಲಾಪ ಮಧ್ಯಾಹ್ನ 12 ಆದರೂ ಆರಂಭವಾಗಲಿಲ್ಲ. ದಿನದ ಕಲಾಪ ಆರಂಭವಾಗುತ್ತಿದ್ದಂತೆ, ಸ್ಪೀಕರ್‌ ರಮೇಶ್‌ಕುಮಾರ್‌ ಅವರು ವಿಶ್ವಾಸಮತ ಪ್ರಕ್ರಿಯೆಯನ್ನು ಈ ದಿನದ ಅಂತ್ಯದೊಳಗೆ ಮುಗಿಸಬೇಕು ಎಂದು ಹೇಳಿದರು. ಚರ್ಚೆಯನ್ನು ಪೂರ್ಣಗೊಳಿಸಿ ಮತಕ್ಕೆ ಹಾಕಿ. ಈ ಮೂಲಕ ಸದನದ ಘನತೆಯನ್ನು ಎತ್ತಿಹಿಡಿಯಿರಿ. ಸಮಯ ಪಾಲನೆ ಮಾಡಿ ಎಂದು ಸೂಚಿಸಿದರು.

ಚರ್ಚೆಗೆ ಸಮಯ ಬೇಕು: ಎಚ್‌ಡಿಕೆ

‘ಅನೈತಿಕ, ಕಾನೂನು ಬಾಹಿರ ವಿಧಾನಗಳಿಂದ ಅಧಿಕಾರಕ್ಕೆ ಬರಲು ಬಿಜೆಪಿ ಹಾತೊರೆಯುತ್ತಿದ್ದು, ನನ್ನ ರಾಜೀನಾಮೆಗೆ ಒತ್ತಾಯಿಸುತ್ತಿದೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ‘ಅಧಿಕಾರಕ್ಕೆ ಅಂಟಿಕೊಳ್ಳುವ ಉದ್ದೇಶ ಹೊಂದಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ. ಆದರೆ ವಿಶ್ವಾಸಮತ ನಿರ್ಣಯದ ಮೇಲೆ ವಿಸ್ತೃತ ಚರ್ಚೆ ನಡೆಯಲು ಹೆಚ್ಚು ಸಮಯ ಕೇಳಿದ್ದು, ಬಿಜೆಪಿಯ ಅನೈತಿಕ ಮಾರ್ಗಗಳ ಕುರಿತು ಶಾಸಕರು ಮಾತನಾಡಬೇಕಿದೆ. ಪ್ರಜಾಪ್ರಭುತ್ವ, ಸಂವಿಧಾನದ ಮೂಲತತ್ವ, ಆಶಯಗಳನ್ನೇ ಬುಡಮೇಲು ಮಾಡಲು ಹೊರಟಿರುವುದು ಇಡೀ ದೇಶಕ್ಕೆ ಅರಿವಾಗಿದೆ’ ಎಂದು ತಿಳಿಸಿದರು.

ಕೊನೆಯ ದಾಳ ಉರುಳಿಸಿದ ಡಿಕೆಶಿ

ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಜೆಡಿಎಸ್ ನಾಯಕರು ಸಿದ್ಧರಾಗಿದ್ದಾರೆ ಎಂದುಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ‘ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ, ಜಿ.ಪರಮೇಶ್ವರ, ನನ್ನ ಹೆಸರನ್ನು ಜೆಡಿಎಸ್ ಮುಖಂಡರು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ವರಿಷ್ಠರ ಜತೆಗೂ ಜೆಡಿಎಸ್ ಮುಖಂಡರು ಮಾತುಕತೆ ನಡೆಸಿದ್ದಾರೆ’ ಎಂದು ಹೇಳಿದರು. ಈ ಮೂಲಕ ಮುಂಬೈನಲ್ಲಿರುವ ಅತೃಪ್ತರ ಮನವೊಲಿಸುವ ಕೊನೆಯ ಯತ್ನ ಮಾಡಿದರು.

ವಿಪ್‌ ನೀಡುವ ಜವಾಬ್ದಾರಿ ಮೊಟಕು ಮಾಡುವುದಿಲ್ಲ: ಸ್ಪೀಕರ್‌ ರೂಲಿಂಗ್

‘ಪಕ್ಷದ ನಾಯಕರ ವಿಪ್‌ ನೀಡುವ ಜವಾಬ್ದಾರಿ ಮೊಟಕು ಮಾಡುವುದಿಲ್ಲ’ ಎಂದು ಸ್ಪೀಕರ್ ರಮೇಶ್‌ ಕುಮಾರ್ ಸ್ಪಷ್ಟವಾಗಿ ರೂಲಿಂಗ್ ನೀಡಿದರು. ‘10ನೇ ಶೆಡ್ಯೂಲ್‌ನಲ್ಲಿ ಶಾಸಕಾಂಗ ಪಕ್ಷದ ನಾಯಕರಿಗೆ ನೀಡಿರುವ ಜವಾಬ್ದಾರಿಯನ್ನು ಮೊಟಕು ಮಾಡುವ ಕೆಲಸ ನಾವು ಮಾಡುವುದಿಲ್ಲ’ ಎಂದು ವಿಪ್‌ ವಿಷಯವಾಗಿ ಸಿದ್ದರಾಮಯ್ಯ ಅವರು ಎತ್ತಿದ್ದ ಕ್ರಿಯಾಲೋಪ ಕುರಿತು ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು ರೂಲಿಂಗ್‌ ನೀಡಿದರು.

ಸಿಎಂ ಕುಮಾರಸ್ವಾಮಿ ನಕಲಿ ರಾಜೀನಾಮೆ ಪತ್ರ: ಚರ್ಚೆಗೆ ಗ್ರಾಸ

‘ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಿದ್ದಾರೆ’ ಎಂಬ ಪತ್ರ ವ್ಯಾಪಕವಾಗಿ ಹರಿದಾಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿತು. ವಿಶ್ವಾಸಮತದ ಮೇಲಿನ ಚರ್ಚೆ ವೇಳೆ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂಬ ನಕಲಿ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಚಾರ ನನ್ನ ಗಮನಕ್ಕೆ ಬಂದಿದೆ’ ಎಂದು ಹೇಳಿದರು.

ರಾತ್ರಿ 9 ಆದರೂ ಕಲಾಪ ಮುಗಿಯಲಿಲ್ಲ. ಕಾಂಗ್ರೆಸ್ ಸದಸ್ಯರು ನಾವೂ ಮಾತನಾಡಬೇಕಿದೆ ಎನ್ನುತ್ತಲೇ ರಾತ್ರಿ 9.30ರಿಂದ 11.30ರವರೆಗೆ ಮೇಲಿಂದ ಮೇಲೆ ಪ್ರತಿಭಟನೆ ನಡೆಸಿದರು. ಕೊನೆಗೆ ‘ವಯಸ್ಸಾದವರು,ಸಕ್ಕರೆ ಕಾಯಿಲೆ ಇರುವವರು, ಹೆಣ್ಣುಮಕ್ಕಳು ಇದ್ದೇವೆ. ಕಲಾಪ ನಾಳೆಗೆ ಮುಂದೂಡಿ’ ಎಂದು ಪಟ್ಟು ಹಿಡಿದರು. ಬಿಜೆಪಿ ರಾತ್ರಿ 12, ಬೆಳಗಿನಜಾವ 2 ಆದರೂ ಸರಿ ನಾವು ಕೂರುತ್ತೇವೆ. ಇವತ್ತೇ ಮತಕ್ಕೆ ಹಾಕಿ ಎಂದು ಪಟ್ಟು ಹಿಡಿಯಿತು. ಇವುಗಳ ಮಧ್ಯೆ ಸಮಯ 11.40 ಗಡಿ ದಾಟಿತು. ಮಂಗಳವಾರ ಸಂಜೆ 4ಕ್ಕೆ ಮತಕ್ಕೆ ಹಾಕುವಂತೆ ಚರ್ಚೆ ಮುಗಿಸಿ ಎಂದು ಹೇಳಿದರು. ಆ ವೇಳೆಗೆ ಸಿಎಂ, ಡಿಸಿಎಂ ಆಸನದಲ್ಲಿ ಇರಲಿಲ್ಲ. ಸಿದ್ದರಾಮಯ್ಯ ಮಾತನಾಡಿ, ರಾತ್ರಿ 8ರ ವರೆಗೆ ಸಮಯ ಕೇಳಿದರು. ಅದು ಆಗಲ್ಲ ಎಂದು ಸ್ಪೀಕರ್‌ ಹೇಳಿದಾಗ, ಆರು ಗಂಟೆಯವರೆಗಾದರೂ ಕೊಡಿ ಎಂದರು. ಆಗ ಸ್ಪೀಕರ್‌, ನಾಲ್ಕು ಗಂಟೆಗೆ ಚರ್ಚೆ ಮುಗಿಸಿ, 4ರಿಂದ 5ಕ್ಕೆ ಸಿಂಎ ಮಾತನಾಡಲಿ. 5ರಿಂದ 6ರ ಮಧ್ಯೆ ಮತಕ್ಕೆ ಹಾಕುವ ಪ್ರಕ್ರಿಯೆ ಮುಗಿಸಿಲಾಗುವುದು. ಇದಕ್ಕೆ ಎಲ್ಲರು ಬದ್ಧರಾಗಬೇಕು ಎಂದು ಹೇಳಿದರು.ಕಲಾಪವನ್ನು ಜುಲೈ 23ರ ಬೆಳಿಗ್ಗೆ 10ಕ್ಕೆ ಮುಂದೂಡಿದರು.

ತುರ್ತು ವಿಚಾರಣೆ ಅಸಾಧ್ಯ ಎಂದ ಸುಪ್ರೀಂ ಕೋರ್ಟ್‌

ಇಂದು ಸಂಜೆ 5 ಗಂಟೆಯ ಒಳಗೆ ವಿಶ್ವಾಸಮತ ಯಾಚಿಸಲು ಸೂಚಿಸಬೇಕು ಎಂದು ವಕೀಲ ಮುಕುಲ್ ರೋಹಟಗಿ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೊರ್ಟ್‌, ಇಂದು ವಿಚಾರಣೆ ಮಾಡಲು ಆಗುವುದಿಲ್ಲ. ಮಧ್ಯಪ್ರವೇಶ ಸಾಧ್ಯವಿಲ್ಲ ಸ್ಪಷ್ಟಪಡಿಸಿತು.ನಾಳೆ ವಿಚಾರಣೆಗೆ ಪರಿಗಣಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಭರವಸೆ ನೀಡಿದರು.

ಜುಲೈ 23 – ವಿಶ್ವಾಸಗಳಿಸುವಲ್ಲಿ ಕುಮಾರಸ್ವಾಮಿ ವಿಫಲ; ಮೈತ್ರಿ ಸರ್ಕಾರ ಪತನ

ವಿಧಾನಸಭೆ ಕಲಾಪ 10.05ಕ್ಕೆ ಆರಂಭವಾಯಿತು.ಮೈತ್ರಿ ನಾಯಕರು ಮತ್ತು ಶಾಸಕರು ಸದನಕ್ಕೆ ಬಾರದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್, ‘ನಾನು ಮನೆಗೆ ನಿಮ್ಮ ಜತೆಗೇ ತಡವಾಗಿ ಹೋಗಿದ್ದೇನೆ. ನಾನೂ ಯುವಕನಲ್ಲ, ನನಗೂ 70–72 ವರ್ಷ ವಯಸ್ಸಾಗಿದೆ. ಸದನಕ್ಕೆ ಬೇಗ ಬರಬೇಕಿತ್ತು ಎಂದರು. ಮಧ್ಯಾಹ್ನ 12 ಆದರೂ ವಿಧಾನಸಭೆಗೆ ಹಾಜರಾಗದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ‌ ಮೊಕ್ಕಾಂ ಮಾಡಿದ್ದರು. ‘ಡಿಯರ್‌ ಬಾಂಬೆ ಫ್ರೆಂಡ್ಸ್‌’ ನಿಮ್ಮ ಕನಸು ಈಡೇರಲ್ಲ. ಹನುಮಂತನೇ ಹಗ್ಗ ಕಡಿಯುವಾಗ ಶಾವಿಗೆ ಕೇಳಿದ ಎಂಬಂತೆ ಸಂದಿಗ್ಧತೆ.ಹೀಗೆ ಬರೆದ ಚೀಟಿಯೊಂದು ಸದನದಲ್ಲಿ ಶಾಸಕರೊಬ್ಬರ ಟೇಬಲ್‌ ಮೇಲಿತ್ತು.

ಅಂದು ಸದನದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.‘ನನ್ನನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸಬೇಕು ಎಂದು ಬಿಜೆಪಿ ಸಂಚು ಹೂಡುತ್ತಿದೆ’ ಎಂದು ಶಿವಕುಮಾರ್ ಆರೋಪಿಸಿದರು.ಅತೃಪ್ತ ಶಾಸಕರ ವಿರುದ್ಧ ಸಚಿವ ಸಾ.ರಾ.ಮಹೇಶ್ ‘ನೀನೇ ಸಾಕಿದಾ ಗಿಣಿ’ ಪದ್ಯ ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯಾಹ್ನ 3.17ಕ್ಕೆ ಕಲಾಪಕ್ಕೆ ಬಂದರು.‘ಪಕ್ಷೇತರ ಶಾಸಕರು ಹೇಗೆ ನಮ್ಮ ವಿರುದ್ಧ ಕೈ ಎತ್ತುತ್ತಾರೋ ನೋಡ್ತೀವಿ, 5–6 ಗಂಟೆ ವೇಳೆಗೆ ಎಲ್ಲ ಮುಕ್ತಾಯವಾಗಲಿದೆ’ ಎಂದುಡಿ.ಕೆ. ಶಿವಕುಮಾರ್ ಗುಡುಗಿದರು.

‘104 ಜನ ಇದ್ದೀರಿ ನೀವು (ಬಿಜೆಪಿ). ಪ್ರಬಲ ವಿರೋಧ ಪಕ್ಷವಾಗಿ ನೀವು ಕಾರ್ಯನಿರ್ವಹಿಸಬಹುದಾಗಿತ್ತು. ಆದರೆ ಸಂವಿಧಾನ ವಿರೋಧಿ ಮಾರ್ಗದ ಮೂಲಕ ಸರ್ಕಾರ ರಚನೆಗೆ ಮುಂದಾಗಿದ್ದೀರಿ. ಜಗತ್ತು ಪ್ರಳಯವಾದರೂ ಸರಿ, ರಾಜೀನಾಮೆ ಕೊಟ್ಟವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ’ ಎಂದು ಸಿದ್ದರಾಮಯ್ಯ ಸಿಟ್ಟಿನಿಂದ ನುಡಿದರು.

‘ಬಿಜೆಪಿಗೆ ಸ್ವಾಗತ. ಯೋಗ್ಯತೆಗೆ ತಕ್ಕಂತೆ ಸ್ಥಾನಮಾನ ನೀಡಲಾಗುವುದು’ ಎನ್ನುವ ಬಿಜೆಪಿ ಶಾಸಕ ಸಿ.ಟಿ.ರವಿ ಟ್ವೀಟ್ ಪ್ರಸ್ತಾಪಿಸಿದ ಕುಮಾರಸ್ವಾಮಿ, ‘ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮತ್ತು ಕೆಟ್ಟ ಸಂದೇಶ ಕಳುಹಿಸುವ ಯೋಗ್ಯತೆಯೇ ತಾನೆ ನಿಮಗೆ ಬೇಕಿರುವುದು’ ಎಂದು ಪ್ರಶ್ನಿಸಿದರು. ವಿದ್ಯುನ್ಮಾನ ಮಾಧ್ಯಮಗಳ ವಿರುದ್ಧ ಹರಿಹಾಯ್ದ ಸಿಎಂ, ಮುದ್ರಣ ಮಾಧ್ಯಮ ಸ್ವಲ್ಪ ಮಟ್ಟಿಗೆ ನೈತಿಕತೆ ಉಳಿಸಿಕೊಂಡಿದೆ. ಈ ಸುದ್ದಿವಾಹಿನಿಗಳ ವರದಿಯಿಂದ ಜೀವನ ನಡೆಸುವುದೇ ಕಷ್ಟ ಎಂಬಂತಾಗಿದೆ ಎಂದು ದೂರಿದರು. ತಮ್ಮ ಸಾಧನೆಗಳು, ರಾಜೀನಾಮೆ ನೀಡಿರುವವರ ಕ್ಷೇತ್ರಗಳಿಗೆ ಮಂಜೂರು ಮಾಡಿದ ಅನುದಾನಗಳನ್ನು ಮುಖ್ಯಮಂತ್ರಿ ಎಳೆಎಳೆಯಾಗಿ ಬಿಡಿಸಿಟ್ಟರು.

ಉರುಳಿತು ಸರ್ಕಾರ

ಸಿಎಂ ಮಾತು ಮುಗಿದ ಬಳಿಕ, ಮತಕ್ಕೆ ಹಾಕಲು ಸ್ಪೀಕರ್‌ ಬೆಲ್‌ ಮಾಡಿದರು.ಧ್ವನಿಮತದ ಮೂಲಕ ವಿಶ್ವಾಸಮತ ಪ್ರಕ್ರಿಯೆ ನಡೆಯಿತು. ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ವಿನಂತಿ ಮೇರೆಗೆ ಮತಕ್ಕೆ(ಡಿವಿಜನ್‌) ಹಾಕಲಾಯಿತು. ವಿಶ್ವಾಸಮತ ನಿರ್ಣಯದ ಪರವಾಗಿ (ಮೈತ್ರಿ ಸರ್ಕಾರ) 99 ಮತಗಳು, ನಿರ್ಣಯದ ವಿರುದ್ಧವಾಗಿ 105 ಮತಗಳು ಬಂದವು. 20 ಶಾಸಕರು ಗೈರಾಗಿದ್ದರು. ಕುಮಾರಸ್ವಾಮಿ ಅವರು ಮಂಡಿಸಿದ ವಿಶ್ವಾಸಮತವು ಬಿದ್ದುಹೋಗಿದೆ ಎಂದು ಸ್ಪೀಕರ್‌ ಪ್ರಕಟಿಸಿದರು.ಈ ಮೂಲಕ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿತು. ಮುಖ್ಯಮಂತ್ರಿ ಅಧಿಕಾರದಿಂದ ಎಚ್.ಡಿ. ಕುಮಾರಸ್ವಾಮಿ ನಿರ್ಗಮಿಸಿದರು. ಬಳಿಕ, ರಾಜ್ಯಪಾಲರ ಬಳಿಗೆ ತೆರಳಿ ರಾಜೀನಾಮೆ ಸಲ್ಲಿಸಿದರು.

ಬಿಜೆಜೆ ಸದಸ್ಯರು ತಮ್ಮ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸದನಲ್ಲಿ ವಿಜಯದ ನಗೆ ಬೀರಿದರು. ಯಡಿಯೂರಪ್ಪ ತಮ್ಮ ಎಂದಿನ ಶೈಲಿಯಲ್ಲಿ ಕೈ ಎತ್ತಿ ವಿಜಯದ ಸಂಕೇತ ತೋರಿಸಿದರು. ಈ ಎಲ್ಲಾ ಬೆಳವಣಿಗೆಗಳ ಮೂಲಕ ‘ಮೈತ್ರಿ’ಯ ಅಳಿವು ಉಳಿವಿನ ಬೃಹತ್ನಾಟಕಕ್ಕೆ ತೆರೆಬಿತ್ತು.

ಇದೀಗ ಸರ್ಕಾರ ರಚನೆ ಉಮೇದಿನಲ್ಲಿ ಬಿಜೆಪಿ ಇದೆ. ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಬಿ.ಎಸ್‌.ಯಡಿಯೂರಪ್ಪ ಉತ್ಸುಕರಾಗಿದ್ದಾರೆ.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.