ADVERTISEMENT

ಕಾಂಗ್ರೆಸ್‌ ಸೇರಿದ ಸಿ.ಪಿ.ಯೋಗೇಶ್ವರ್‌ ರಾಜಕೀಯ ಭವಿಷ್ಯ ಹಾಳು: ಬಿಜೆಪಿಯ ಅಶೋಕ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 11:35 IST
Last Updated 23 ಅಕ್ಟೋಬರ್ 2024, 11:35 IST
ಆರ್. ಅಶೋಕ್
ಆರ್. ಅಶೋಕ್   

ಬೆಂಗಳೂರು: ಸಿ.ಪಿ.ಯೋಗೇಶ್ವರ್‌ ಕಾಂಗ್ರೆಸ್‌ ಸೇರುವ ಮೂಲಕ ತಮ್ಮ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಚನ್ನಪಟ್ಟಣದಲ್ಲಿ ಸ್ಪರ್ಧಿಸಿದರೆ ಅವರಿಗೆ ಲೀಡ್‌ ದೊರೆಯುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

‘ಜೆಡಿಎಸ್‌ ನಾಯಕರು ಕಾರ್ಯಕರ್ತರನ್ನು ಒಪ್ಪಿಸಿ ಸಿ.ಪಿ.ಯೋಗೇಶ್ವರ್‌ ಅವರಿಗೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್‌ ನೀಡಲು ತಯಾರಾಗಿದ್ದರು. ನಾನು ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಅವರಿಗೆ ಬೆಂಬಲ ನೀಡಿದ್ದೆವು. ಅವರಿಗೆ ಟಿಕೆಟ್‌ ಸಿಗಲು ಎಲ್ಲ ಪ್ರಯತ್ನ ಮಾಡಿದ್ದೆವು. ಅವರು ಪಕ್ಷ ತೊರೆಯುವ ಮೂಲಕ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ’ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

ಈಗ ಬಿಜೆಪಿ- ಜೆಡಿಎಸ್‌ ಮೈತ್ರಿ ಇದೆ. ಕೋಲಾರದಲ್ಲಿ ಈ ಹಿಂದೆ ಬಿಜೆಪಿ ಗೆದ್ದಿತ್ತು. ಈ ಲೋಕಸಭಾ ಚುನಾವಣೆಯಲ್ಲಿ ಅಲ್ಲಿ ಜೆಡಿಎಸ್‌ಗೆ ಅವಕಾಶ ನೀಡಲಾಗಿದೆ. ಮಂಡ್ಯದಲ್ಲಿ ಈ ಹಿಂದೆ ಸುಮಲತಾ ಸ್ಪರ್ಧಿಸಿದ್ದರು. ಬಳಿಕ ಎಚ್‌.ಡಿ.ಕುಮಾರಸ್ವಾಮಿ ಅಲ್ಲಿ ಗೆದ್ದರು. ಇಲ್ಲಿ ಬಿಜೆಪಿ, ಜೆಡಿಎಸ್‌ ಎಂಬುದಕ್ಕಿಂತ ಎನ್‌ಡಿಎ ಗೆಲ್ಲಬೇಕು ಎಂಬ ಉದ್ದೇಶ ಇತ್ತು ಎಂದರು.

ADVERTISEMENT

ಆದರೆ ಇವೆಲ್ಲ ಮೈತ್ರಿ, ಒಗ್ಗಟ್ಟನ್ನು ಬದಿಗೆ ಸರಿಸಿ ಕಾಂಗ್ರೆಸ್‌ಗೆ ಸೇರಿರುವುದರಿಂದ ಅವರ ರಾಜಕೀಯ ಭವಿಷ್ಯ ಹಾಳಾಗಿದೆ. ಎನ್‌ಡಿಎದಲ್ಲಿ ಯೋಗೇಶ್ವರ್‌ ಅವರಿಗೆ ಹಿರಿತನವಿತ್ತು. ಈಗ ಕಾಂಗ್ರೆಸ್‌ಗೆ ಸೇರಿ ಕೊನೆಯ ಸಾಲಿನಲ್ಲಿ ನಿಂತಿದ್ದಾರೆ. ಅವರು ಕಾಂಗ್ರೆಸ್‌ಗೆ ಹೋದ ಕೂಡಲೇ ಮಣೆ ಹಾಕಿ ಕೂರಿಸುವುದಿಲ್ಲ. ಡಿ.ಕೆ.ಶಿವಕುಮಾರ್‌ ಅವರು ಯೋಗೇಶ್ವರ್‌ ಅವರನ್ನು ಕರೆಸಿಕೊಂಡು ಕೆಡಿಸಿದ್ದಾರೆ. ಇನ್ನು ಹೇಗೆ ತುಳಿಯಬೇಕೆಂದು ಡಿ.ಕೆ.ಶಿವಕುಮಾರ್‌ ಅವರೇ ಯೋಜನೆ ರೂಪಿಸಿರುತ್ತಾರೆ. ಇವರು ಮುಂದೆ ಬರಲು ಕಾಂಗ್ರೆಸ್‌ನಲ್ಲಿ ಯಾರೂ ಬಿಡುವುದಿಲ್ಲ ಎಂದರು.

ಇದರಲ್ಲಿ ಯಾವುದೇ ತಂತ್ರಗಾರಿಕೆ ಇಲ್ಲ. ಇದು ಜೆಡಿಎಸ್‌ಗೆ ಸೇರಿದ್ದ ಸೀಟು. ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಜೆಡಿಎಸ್‌ಗೆ ಬಿಟ್ಟಿದ್ದು ಎಂದು ಬಿಜೆಪಿಯ ಹಿರಿಯ ನಾಯಕರು ಸೂಚನೆ ನೀಡಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಅವರು ನನ್ನೊಡನೆ ಈ ಬಗ್ಗೆ ಮಾತಾಡಿದ್ದಾರೆ. ನಿನ್ನೆಯೇ ಈ ಬಗ್ಗೆ ನಮಗೆ ಸುಳಿವು ಸಿಕ್ಕಿತ್ತು. ಅವರನ್ನು ಇಲ್ಲಿಯೇ ಉಳಿಸಿಕೊಳ್ಳಬೇಕೆಂದು ಎಲ್ಲ ಪ್ರಯತ್ನ ಮಾಡಲಾಗಿತ್ತು. ಆದರೆ ಅವರೇ ಭವಿಷ್ಯಕ್ಕೆ ಕಲ್ಲು ಹಾಕಿಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದರೆ ಅವರಿಗೆ ಗೆಲ್ಲಲು ಸಾಧ್ಯವೇ ಇಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.