ಬೆಂಗಳೂರು: ಮಂಡ್ಯದ ಮೈಸೂರು ಸಕ್ಕರೆ ಕಂಪನಿಗೆ(ಮೈಷುಗರ್) ಬಿಡುಗಡೆ ಮಾಡಲು ಬಾಕಿ ಇರುವ ₹ 46.25 ಕೋಟಿಯನ್ನು ಕೂಡಲೇ ಬಿಡುಗಡೆ ಮಾಡಿ ಕಬ್ಬು ನುರಿಯುವ ಕೆಲಸಕ್ಕೆ ಚಾಲನೆ ಕೊಡಿಸಬೇಕು ಎಂದು ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶನಿವಾರ ಭೇಟಿ ಮಾಡಿದ ದಿನೇಶ್, ‘ಈ ಹಿಂದೆ ₹3.75 ಕೋಟಿ ಬಿಡುಗಡೆ ಮಾಡಲಾಗಿದೆ. ಉಳಿದ ಹಣವನ್ನು ಕೊಡಿಸಿ’ ಎಂದೂ ಕೋರಿದರು.
‘ಬಾಕಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು’ ಎಂದು ದಿನೇಶ್ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಜನರ ಜೀವನಾಧಾರವಾಗಿರುವ ಮೈಷುಗರ್ ಪುನಾರಂಭ ಹಾಗೂ ಪುನಶ್ಚೇತನಕ್ಕಾಗಿ ಈ ಸಾಲಿನ ಬಜೆಟ್‌ನಲ್ಲಿ ₹ 50 ಕೋಟಿ ಮೀಸಲಿಡಲಾಗಿದೆ. ಮೊದಲ ಹಂತದಲ್ಲಿ ₹ 15 ಕೋಟಿ ಬಿಡುಗಡೆಗೊಳಿಸಲಾಗುವುದು ಎಂಬ ಆಶ್ವಾಸನೆಯನ್ನು ಸರ್ಕಾರ ನೀಡಿತ್ತು. ಕಾರ್ಖಾನೆಯಲ್ಲಿ ಸಾಕಷ್ಟು ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಂದರೆಗಳು ಇವೆ. ಕಾರ್ಖಾನೆ ಆರಂಭವಾಗದೆ ಸುಮಾರು 2 ವರ್ಷಗಳು ಕಳೆದಿವೆ. ಯಂತ್ರಗಳ ದುರಸ್ತಿಯಾಗಬೇಕಿದ್ದು ಹೊಸ ಯಂತ್ರೋಪಕರಣಗಳು ಅಥವಾ ಬಿಡಿಭಾಗಗಳು ಬೇಕಿರುತ್ತವೆ. ಮೂಲಭೂತ ಸೌಲಭ್ಯ ಒದಗಿಸಬೇಕಿದೆ. ಈ ಎಲ್ಲಾ ಪ್ರಕ್ರಿಯೆಗೆ ಈಗ ಬಿಡುಗಡೆ ಮಾಡಿರುವ ₹3.75 ಕೋಟಿ ರೂಪಾಯಿ ಯಾವುದಕ್ಕೂ ಸಾಲದಾಗಿದೆ. ಬ್ಯಾಂಕ್ ಮೂಲಕ ದುಡಿಮೆ ಬಂಡವಾಳಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ನೀಡಿದ್ದ ಭರವಸೆಯೂ ಈಡೇರಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.