ADVERTISEMENT

ಮೋದಿಯವರ 'ತಿನ್ನಲ್ಲ, ತಿನ್ನಲು ಬಿಡಲ್ಲ' ಹೇಳಿಕೆ ಬದಲಾಗಿದೆ: ಜೈರಾಮ್ ರಮೇಶ್ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಡಿಸೆಂಬರ್ 2023, 8:35 IST
Last Updated 28 ಡಿಸೆಂಬರ್ 2023, 8:35 IST
<div class="paragraphs"><p>ನರೇಂದ್ರ ಮೋದಿ ಹಾಗೂ ಜೈರಾಮ್ ರಮೇಶ್&nbsp;</p><p></p></div>

ನರೇಂದ್ರ ಮೋದಿ ಹಾಗೂ ಜೈರಾಮ್ ರಮೇಶ್ 

   

ಪಿಟಿಐ ಚಿತ್ರಗಳು

ADVERTISEMENT

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹೆಸರಿನಲ್ಲಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಮಾಡಿರುವುದಕ್ಕೆ ಸಂಬಂಧಿಸಿದಂತೆ, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ.

ಪ್ರಧಾನಿ ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ಹೇಳಿದ್ದ, 'ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ' ಎಂಬ ಮಾತನ್ನು, 'ನಾನೂ ತಿನ್ನುತ್ತೇನೆ, ಉಳಿದವರಿಗೂ ತಿನ್ನಿಸುತ್ತೇನೆ. ಆದರೆ, ಯಾರಿಗೂ ಕಾಣಿಸುವುದಿಲ್ಲ' ಎಂದು ಬದಲಿಸಿಕೊಂಡಿದ್ದಾರೆ ಎಂದು ಟೀಕಿಸಿದೆ.

ಯತ್ನಾಳ ಆರೋಪದ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್‌ ರಮೇಶ್‌, 'ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯುಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವೇಳೆ ಕೋವಿಡ್ ಹೆಸರಿನಲ್ಲಿ ₹ 40 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ ಮಾಡಿದ್ದಾರೆ. ದಾಖಲೆಗಳನ್ನು ಹೊಂದಿರುವುದಾಗಿಯೂ ಹೇಳಿರುವ ಯತ್ನಾಳ, ಬಿಜೆಪಿ ಸರ್ಕಾರವು ಸತ್ತವರ ಹೆಸರಿನಲ್ಲಿ ಲಾಭ ಮಾಡಿಕೊಂಡಿದೆ ಎಂಬುದನ್ನು ಒತ್ತಿಹೇಳಿದ್ದಾರೆ' ಎಂದಿದ್ದಾರೆ.

ಬಿಜೆಪಿಯ ಹಿರಿಯ ನಾಯಕರು ಭಾಗಿಯಾಗಿರುವ ಈ ಹಗರಣವು ಅತ್ಯಂತ ಭಯಾನಕ ಮತ್ತು ನಾಚಿಕೆಗೇಡಿನದ್ದು. ಬಿಜೆಪಿ ಸರ್ಕಾರಗಳು ದೇಶದಾದ್ಯಂತ ನಡೆಸಿರುವ ಇಂತಹ ಹಗರಣಗಳ ಸ್ವರೂಪವು ನೀರಿನ ಮೇಲೆ ತೇಲುವ ಮಂಜುಗಡ್ಡೆ ಇದ್ದಂತೆ. ಮೇಲೆ ಕಾಣುವುದು ಸ್ವಲ್ಪವೇ ಆದರೂ, ಒಳಗೆ ಭಾರಿ ‍ಪ್ರಮಾಣದಲ್ಲಿ ಅಡಗಿರುತ್ತದೆ ಎಂದು ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಂತ್ರ ಸಂಸ್ಥೆಗಳನ್ನು ದುರ್ಬಲಗೊಳಿಸಿ, ಮುಖ್ಯವಾಹಿನಿಯ ಮಾಧ್ಯಮಗಳ ಮೇಲೆ ಬಿಗಿ ಹಿಡಿತ ಸಾಧಿಸಿದ್ದಾರೆ. ಅದರೊಂದಿಗೆ ಅವರು ಚುನಾವಣೆಗೂ ಮುನ್ನ ನೀಡಿದ್ದ, 'ನಾನು ತಿನ್ನುವುದಿಲ್ಲ, ನಿಮಗೂ ತಿನ್ನಲು ಬಿಡುವುದಿಲ್ಲ' ಎಂಬ ಹೇಳಿಕೆಯನ್ನು 'ನಾನೂ ತಿನ್ನುತ್ತೇನೆ, ಉಳಿದವರಿಗೂ ತಿನ್ನಿಸುತ್ತೇನೆ. ಆದರೆ, ಯಾರಿಗೂ ಕಾಣಿಸುವುದಿಲ್ಲ' ಎಂದು ಬದಲಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಯತ್ನಾಳ ಆರೋಪ
'ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕೋವಿಡ್ ಹೆಸರಿನಲ್ಲಿ ₹ 40 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ₹ 45 ಮೌಲ್ಯದ ಒಂದು ಮಾಸ್ಕ್‌ಗೆ ₹ 485 ಬಿಲ್ ಹಾಕಲಾಯಿತು. ಎಲ್ಲದಕ್ಕೂ ಮನಬಂದಂತೆ ದರ ನಿಗದಿಪಡಿಸಿ, ಬಡವರನ್ನು ಶೋಷಣೆ ಮಾಡಲಾಗಿದೆ' ಎಂದು ಯತ್ನಾಳ ಮಂಗಳವಾರ ಆರೋಪಿಸಿದ್ದರು.

'ಬೆಂಗಳೂರಿನಲ್ಲಿ 10 ಸಾವಿರ ಬೆಡ್‌ಗಳನ್ನು ಬಾಡಿಗೆಗೆ ಪಡೆದು, ಒಂದು ಬೆಡ್‌ಗೆ ದಿನಕ್ಕೆ ₹ 20 ಸಾವಿರ ಬಾಡಿಗೆ ದರ ನಿಗದಿ ಮಾಡಲಾಯಿತು. ಬಾಡಿಗೆ ಹಣ ಕೊಡುವ ಬದಲು ಅದೇ ದರದಲ್ಲಿ ಎರಡು ಬೆಡ್‌ ಖರೀದಿಸಬಹುದಿತ್ತು‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.