ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯವಿರುದ್ಧ ಕಿಡಿಕಾರಿದ್ದಾರೆ.ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ರಾಜ್ಯದ ಸಂಪೂರ್ಣ ಆಡಳಿತ ವ್ಯವಸ್ಥೆ ಕುಸಿದಿದೆ ಎಂಬುದಕ್ಕೆ ಈ ಸಿಡಿ ಹಗರಣವೇ ಸಾಕ್ಷಿ ಎಂದು ಗುಡುಗಿದ್ದಾರೆ.
ʼರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಆಗುತ್ತಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ಪೊಲೀಸರ ವೈಫಲ್ಯವೇ ಕಾರಣ. ಸಿಡಿ ಮಾಧ್ಯಮದಲ್ಲಿ ಕಾಣಿಸಿಕೊಂಡು 26 ದಿನಗಳು ಕಳೆದರೂ ಸಂತ್ರಸ್ತೆ ಯುವತಿಯನ್ನು ಪೊಲೀಸರಿಗೆ ಪತ್ತೆ ಹಚ್ಚಲಿಕ್ಕಾಗದಿರುವುದು ನಾಚಿಕೆಗೇಡಿನ ಸಂಗತಿʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ʼದಿನಕ್ಕೊಂದು ತಿರುವು ಪಡೆದು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿರುವ ಸಿಡಿ ಹಗರಣದ ತನಿಖೆ ತಾರ್ಕಿಕ ಅಂತ್ಯ ಕಾಣಬೇಕಾದರೆ ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದ ಹೊರಬಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕು. ಕಾನೂನುಬದ್ಧವಾದ ಅವಳ ಹಕ್ಕನ್ನು ಚಲಾಯಿಸದಂತೆ ತಡೆಯುತ್ತಿರುವವರು ಯಾರು?ʼ ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದು, ʼಸಿ.ಡಿಯಲ್ಲಿರುವ ಯುವತಿ ಅಜ್ಞಾತ ಸ್ಥಳದಿಂದ ನಿರಂತರವಾಗಿ ತನ್ನ ಹೇಳಿಕೆಗಳ ಸಿಡಿಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುತ್ತಿದ್ದಾಳೆ. ತನ್ನ ವಕೀಲನ ಮೂಲಕ ಪೊಲೀಸರಿಗೆ ದೂರು ಕಳುಹಿಸಿಕೊಡುತ್ತಿದ್ದಾಳೆ. ತಂದೆ-ತಾಯಿ ಜೊತೆ ಮಾತನಾಡುತ್ತಿದ್ದಾಳೆ. ಹೀಗಿದ್ದರೂ ಪೊಲೀಸರ ಕೈಗೆ ಮಾತ್ರ ಸಿಗುತ್ತಿಲ್ಲ ಎಂದರೆ ಏನು ಅರ್ಥ?ʼ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, ʼಮಾಧ್ಯಮಗಳಲ್ಲಿ ಪ್ರಕಟವಾಗಿರುವ ಯುವತಿಯದ್ದು ಎನ್ನಲಾದ ಹೇಳಿಕೆಗಳನ್ನು ಗಮನಿಸಿದರೆ ಆಕೆಗೆ ರಾಜ್ಯ ಸರ್ಕಾರದ ಮೇಲಾಗಲಿ, ಪೊಲೀಸರ ಮೇಲಾಗಲಿ ನಂಬಿಕೆ ಇಲ್ಲ. ಪೊಲೀಸರು ತನ್ನ ವಿರುದ್ಧವೇ ಸಂಚು ಮಾಡುತ್ತಿದ್ದಾರೆಂಬ ಅರ್ಥದಲ್ಲಿ ಯುವತಿ ಮಾತನಾಡುತ್ತಿದ್ದಾಳೆ. ಗೃಹಸಚಿವ ಬಸವರಾಜ ಬೊಮ್ಮಾಯಿ ಅವರುಈ ಬಗ್ಗೆ ಗಮನಹರಿಸಬೇಕುʼ ಎಂದು ಒತ್ತಾಯಿಸಿದ್ದಾರೆ.
ʼರಾಜ್ಯದ ಪೊಲೀಸ್ ಇಲಾಖೆಯೂ ಸೇರಿದಂತೆ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದಕ್ಕೆ ಈ ಸಿಡಿ ಹಗರಣ ಸಾಕ್ಷಿ. ಸಾಮಾನ್ಯ ಕುಟುಂಬದಿಂದ ಬಂದಿರುವ ಯುವತಿಯನ್ನು ಇಷ್ಟು ದಿನಗಳ ನಂತರವೂ ಪತ್ತೆ ಹಚ್ಚಲಾಗಿಲ್ಲವೆಂದರೆ ಏನು ಅರ್ಥ? ಆಕೆಯೇನು ವಿಜಯಮಲ್ಯನೋ ಇಲ್ಲವೇ ನೀರವ್ ಮೋದಿಯೋ?ʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.