ADVERTISEMENT

ನೆರೆ ಸಂತ್ರಸ್ತರಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ ಪತ್ರ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 10:46 IST
Last Updated 17 ಆಗಸ್ಟ್ 2021, 10:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ನೆರೆಯಿಂದ ಮನೆ, ಬೆಳೆ, ಜಾನುವಾರು ಕಳೆದುಕೊಂಡು ಸಂತ್ರಸ್ತರಾದವರಿಗೆ ತಕ್ಷಣ ಸೂಕ್ತ ಪರಿಹಾರ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ಇದೇ ಜುಲೈ 26 ಮತ್ತು 27ರಂದು ಬಾಗಲಕೋಟೆ, ಬೆಳಗಾವಿ, ಗದಗ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಾಗೂ ಆಗಸ್ಟ್ 2ರಂದು ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೆ. ಜುಲೈ 22ರಿಂದ 26ರವರೆಗೆ ಬಿದ್ದ ಭಾರಿ ಮಳೆಯಿಂದ ಈ ಜಿಲ್ಲೆಗಳಲ್ಲಿ ತೀವ್ರ ಸ್ವರೂಪದ ಅನಾಹುತಗಳನ್ನು ಸೃಷ್ಟಿಸಿದೆ. ನೂರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನ, ಜಾನವಾರುಗಳು, ಮನೆಗಳು ಹಾನಿಗೆ ಒಳಗಾಗಿವೆ. ಮನೆಯೊಳಗಿದ್ದ ಪಾತ್ರೆ- ಪಗಡೆ ಕೊಚ್ಚಿಕೊಂಡು ಹೋಗಿವೆ’ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ

‘ಮನೆಯೊಳಗಿದ್ದ ಪಾತ್ರೆ ಪಗಡೆ, ಬಟ್ಟೆಗಳು, ಮಕ್ಕಳ ಶಾಲಾ ಬ್ಯಾಗು, ಪುಸ್ತಕಗಳು, ದವಸ ಧಾನ್ಯಗಳು, ಟಿವಿ, ಫ್ರಿಡ್ಜ್, ಮಿಕ್ಸರ್, ಗ್ಯಾಸ್ ಸಿಲಿಂಡರ್‌ಗಳ ಸಹಿತ ನಿತ್ಯ ಬಳಕೆಯ ವಸ್ತುಗಳು ಕೊಚ್ಚಿಕೊಂಡು ಹೋಗಿವೆ. ಮನೆಯೊಳಗೆ ನುಗ್ಗಿದ ನೀರು ನೂರಾರು ಮನೆಗಳನ್ನು ಹಾನಿ ಮಾಡಿವೆ. ಪ್ರವಾಹದಿಂದ ಕೊಚ್ಚಿ ಬಂದ ಮಣ್ಣು, ಕೆಸರು ತುಂಬಿಕೊಂಡು ಸಾವಿರಾರು ಮನೆಗಳನ್ನು ಮುಚ್ಚಿ ಹಾಕಿದೆ. ಮಕ್ಕಳು ಮರಿಗಳಾದಿಯಾಗಿ ಎಲ್ಲರ ಆರೋಗ್ಯದ ಬಗ್ಗೆಯೂ ತುರ್ತು ಗಮನಹರಿಸಬೇಕಾದ, ಪೌಷ್ಠಿಕ ಆಹಾರ ಒದಗಿಸಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ADVERTISEMENT

‘ಭತ್ತದ ಗದ್ದೆಗಳು, ತೋಟದ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿವೆ. ದನದ ಕೊಟ್ಟಿಗೆಗಳು ಜಲಾವೃತ ಆಗಿರುವುದರಿಂದ ಸಂಗ್ರಹಿಸಿದ್ದ ಮೇವು ನೀರಿನಲ್ಲಿ ಕೊಚ್ಚಿ ಹೋಗಿ ಮೇವಿಗೂ ತತ್ವಾರ ಬಂದಿದೆ. 2019ರಿಂದ 2021ರವರೆಗೆ ಸತತವಾಗಿ ಈ ಜಿಲ್ಲೆಗಳು ನೆರೆಗೆ ತುತ್ತಾಗುತ್ತಿವೆ. ಹಾನಿಗೊಳಗಾದ ಪ್ರದೇಶಗಳ ಜನರಿಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಮನೆ ಕಳೆದುಕೊಂಡವರಿಗೆ ಮನೆಗಳನ್ನು ನೀಡಿಲ್ಲ. ನದಿಪಾತ್ರದ ಗ್ರಾಮಗಳ ಸ್ಥಳಾಂತರ ಆಗಿಲ್ಲ ಎಂದು ಸಂತ್ರಸ್ತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘2019ರಲ್ಲಿ ಪ್ರವಾಹ ಬಂದಾಗ ಮನೆ ಕಳೆದುಕೊಂಡವರಿಗೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರ ಘೋಷಿಸಿದ್ದರು. ಸರ್ಕಾರ ಈ ಹಿಂದೆ ಘೋಷಿಸಿದ್ದಂತೆ ಮನೆ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ಇರುವವರಿಗೆ ಪ್ರತಿ ತಿಂಗಳು ₹ 10 ಸಾವಿರ ನೀಡುತ್ತೇವೆ ಎಂದು ಹೇಳಿದ್ದೂ ಸುಳ್ಳಾಗಿದೆ. ಸಂಪೂರ್ಣ ಮನೆ ಕಳೆದುಕೊಂಡವರಿಗೆ ₹ 10 ಹತ್ತು ಲಕ್ಷ , ಭಾಗಶಃ ಮನೆ ಹಾನಿಯಾದವರಿಗೆ ₹ 3 ಲಕ್ಷ, ಸ್ವಲ್ಪ ಹಾನಿಯಾದರೆ ₹ 50 ಸಾವಿರದಿಂದ ₹ 1 ಲಕ್ಷ ಕೊಡುವುದಾಗಿ ಹೇಳಿದ್ದರು. ಆದರೆ, ಮನೆ ಕಳೆದುಕೊಂಡ ಯಾರೊಬ್ಬರಿಗೂ ಈವರೆಗೂ ಪರಿಹಾರ ಸಿಕ್ಕಿಲ್ಲ’ ಎಂದೂ ಆರೋಪಿಸಿದ್ದಾರೆ.

‘ಅಧಿಕಾರಿಗಳು ಸತ್ಯ ಹೇಳುತ್ತಿಲ್ಲ ಎಂದು ಪ್ರವಾಹಪೀಡಿತ ಪ್ರದೇಶಗಳ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಮನೆಗಳನ್ನು ಸ್ಥಳಾಂತರ ಮಾಡುವ ಅಗತ್ಯವಿದೆ. ಇದಕ್ಕೆ ಸರ್ಕಾರ ಜಾಗ ನೀಡಬೇಕು. ಮನೆ ಕಟ್ಟಿಕೊಡಬೇಕು. ಅಗತ್ಯವಿರುವ ಹಳ್ಳಿಗಳ ಸ್ಥಳಾಂತರದ ಅನಿವಾರ್ಯತೆ ಇದ್ದು ಈ ಬಗ್ಗೆಯೂ ಸರ್ಕಾರ ಗಂಭೀರವಾಗಿ ತುರ್ತು ಕ್ರಮಕ್ಕೆ ಮುಂದಾಗಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ತೂಗು ಸೇತುವೆಗಳೂ ನೀರಿನಲ್ಲಿ ಕೊಚ್ಚಿ ಹೋಗಿವೆ. ಸಾವಿರಾರು ಹೆಕ್ಟೇರ್ ಕೃಷಿ ಭೂಮಿ, ನೂರಾರು ಹೆಕ್ಟೇರ್ ತೋಟಗಳು ಹಾಳಾಗಿವೆ. ಕೆಲವೆಡೆ ತೀವ್ರ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ರಸ್ತೆ, ಸೇತುವೆ, ಸರ್ಕಾರಿ ಶಾಲೆ, ಪಶು ಆಸ್ಪತ್ರೆ, ಕುಡಿಯುವ ನೀರಿನ ಯೋಜನೆ, ವಿದ್ಯುತ್ ಸಂಪರ್ಕ ಎಲ್ಲವೂ ಹಾಳಾಗಿರುವುದನ್ನು ನೆರೆಪೀಡಿತ ಪ್ರದೇಶಗಳ ಜನರ ಜತೆಗೇ ತೆರಳಿ ವೀಕ್ಷಿಸಿದ್ದೇನೆ’ ಎಂದೂ ಪತ್ರದಲ್ಲಿದೆ ಬರೆದಿದ್ದಾರೆ.

‘ಕಾಳಿ ಯೋಜನೆಯ ಕದ್ರಾ ಅಣೆಕಟ್ಟೆನಿಂದ ಪೂರ್ವ ಸೂಚನೆ ಇಲ್ಲದೆ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಹಠಾತ್ ನೆರೆಗೆ ವ್ಯಾಪಾರಿ ಮುಂಗಟ್ಟುಗಳು ನಾಶವಾಗಿವೆ. ಕೋವಿಡ್‌ ಮತ್ತು ಲಾಕ್‌ಡೌನ್ ಕಾರಣದಿಂದ ತೀವ್ರ ಸಂಕಷ್ಟದಲ್ಲಿದ್ದ ವ್ಯಾಪಾರಿಗಳ, ರೈತರು, ಕೂಲಿ ಕಾರ್ಮಿಕರ ಬದುಕು ನೆಲಕಚ್ಚಿದೆ. ಅವರಿಗೆ ತಕ್ಷಣ ಪುನರ್ವಸತಿ ಕಲ್ಪಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಡುವ ಜತೆಗೆ ಆರ್ಥಿಕ ನೆರವು ನೀಡಬೇಕು’ ಎಂದಿದ್ದಾರೆ.

‘ಹಾನಿಗೊಳಗಾಗಿರುವ ರಸ್ತೆ, ಸೇತುವೆ, ಶಾಲೆ, ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ಸರ್ಕಾರಿ ಕಚೇರಿ ಕಟ್ಟಡಗಳನ್ನು ದುರಸ್ತಿ, ಪುನರ್‌ನಿರ್ಮಿಸಬೇಕು. ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿರುವ ಪ್ರವಾಹ ಪರಿಹಾರದ ಮೊತ್ತ ರಾಜ್ಯಕ್ಕೆ ಅವಮಾನ ಮಾಡಿದಂತಿದೆ. ಹೀಗಾಗಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ನ್ಯಾಯೋಚಿತ ಪರಿಹಾರ ಬಿಡುಗಡೆ ಮಾಡಿಸಬೇಕು’ ಎಂದೂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.