ADVERTISEMENT

ನ್ಯಾ. ಡಿ. ಕುನ್ಹಾ ವಿರುದ್ಧ ಹೇಳಿಕೆ: ಸಚಿವ ಜೋಶಿ ವಿರುದ್ಧ ರಾಜ್ಯಪಾಲರಿಗೆ ದೂರು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 10:04 IST
Last Updated 11 ನವೆಂಬರ್ 2024, 10:04 IST
<div class="paragraphs"><p>ಕೇಂದ್ರ ಸಚಿವ&nbsp;ಪ್ರಲ್ಹಾದ ಜೋಶಿ</p></div>

ಕೇಂದ್ರ ಸಚಿವ ಪ್ರಲ್ಹಾದ ಜೋಶಿ

   

ಬೆಂಗಳೂರು: ಕೋವಿಡ್ ಹಗರಣದ ತನಿಖೆ ನಡೆಸಿ ವರದಿ ನೀಡಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿಕುನ್ಹಾ ಅವರನ್ನು ಅವಹೇಳನ‌ ಮಾಡಿದ ಆರೋಪದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಕಾಂಗ್ರೆಸ್ ನಾಯಕರ ನಿಯೋಗ ದೂರು ನೀಡಿದೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದ ನಿಯೋಗವು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದೆ.

ADVERTISEMENT

ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, 'ಪ್ರಲ್ಹಾದ ಜೋಷಿ ಹೇಳಿಕೆ ಖಂಡಿಸಿ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದೇವೆ.‌ ನ್ಯಾಯಾಂಗ ತನಿಖಾ ಆಯೋಗದ‌ ಬಗ್ಗೆ , ನ್ಯಾ. ಕುನ್ಹಾ ಬಗ್ಗೆ ನಿಂದಿಸಿ ಕೆಟ್ಟದಾಗಿ ಜೋಶಿ ಮಾತನಾಡಿದ್ದಾರೆ' ಎಂದರು.

'ಕುನ್ಹಾ ನ್ಯಾಯಾಧೀಶರಲ್ಲ, ಪೊಲಿಟಿಕಲ್ ಏಜೆಂಟ್ ಅಂದಿದ್ದಾರೆ.‌ ದುರುದ್ದೇಶದಿಂದ, ಚುನಾವಣಾ ದೃಷ್ಟಿಯಿಂದ ಕುನ್ಹಾ ವರದಿ ನೀಡಿದ್ದಾರೆ.‌ ಜೋಷಿ ಸಾಮಾನ್ಯ ವ್ಯಕ್ತಿಯಲ್ಲ, ಕೇಂದ್ರ ಸಚಿವರು. ಸಂವಿಧಾನದಲ್ಲಿ ಸ್ವಾಯತ್ತ ಸಂಸ್ಥೆಗಳು, ಆಯೋಗಗಳ‌ ಬಗ್ಗೆ ವೈಯುಕ್ತಿಕ ಟೀಕೆ ಸರಿಯಲ್ಲ. ಇದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾದದ್ದು. ಕಾನೂನು ಬಾಹಿರವೂ ಹೌದು. ನ್ಯಾಯಾಂಗ ತನಿಖಾ ಆಯೋಗದ ವಿರುದ್ಧ ಸಂಶಯ ಪಡುವಂತಿಲ್ಲ.‌ ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿ, ಆದರೆ ನ್ಯಾಯಾಧೀಶರ ಬಗ್ಗೆ ಟೀಕಿಸಬಾರದು' ಎಂದರು.

'ಡಿ. ಕುನ್ಹಾ ಅವರು ಆಗಸ್ಟ್‌ನಲ್ಲಿ ಮಧ್ಯಂತರ ವರದಿ ಕೊಟ್ಟಿದ್ದಾರೆ. ಈಗ ಉಪಚುನಾವಣೆ ನಡೆಯುತ್ತಿದೆ. ಅದಕ್ಕೂ ಚುನಾವಣೆಗೂ ಏನು ಸಂಬಂಧ? ನಿಂದನೆ, ಗೌರವಕ್ಕೆ ಚ್ಯುತಿ ಬರುವ ಹೇಳಿಕೆ ಒತ್ತಡ ಹೇರುವ ಕೆಲಸ‌ ಇದು.‌ ಆಯೋಗದ ಮೇಲೆ ಭಯ ಹುಟ್ಟಿಸುವ ಕೆಲಸ ಇದು.‌ ತನಿಖಾ ಹಂತದಲ್ಲಿ ಯಾರೂ ಈ ರೀತಿ ಮಾತನಾಡಬಾರದು’ ಎಂದರು.

‘ರಾಜ್ಯಪಾಲರಿಗೆ ಇವೆಲ್ಲ ವಿವರಿಸಿ ಕ್ರಮಕ್ಕೆ ಒತ್ತಾಯಿಸಿದ್ದೇವೆ.‌ ನ್ಯಾಯಮೂರ್ತಿಯ ಮಾನಹರಣ ಮಾಡಿದ ಜೋಶಿ ವಿರುದ್ಧ ಕ್ರಮ ಕೈಗೊಳ್ಳಬೇಕು.‌ ರಾಷ್ಟ್ರಪತಿ ಅವರ ಗಮನಕ್ಕೂ ಇದನ್ನು ತರಬೇಕು. ಕೇಂದ್ರ ಸರ್ಕಾರ ನಮ್ಮದೇ ಇದೆ ಎಂದು ಏನು ಬೇಕಾದರೂ ಮಾಡಬಹುದು ಅಂದುಕೊಂಡಿದ್ದಾರೆ. ಕೂಡಲೇ ಜೋಶಿ ಕ್ಷಮೆ ಯಾಚಿಸಬೇಕು' ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.